ವಾಲ್ಮೀಕಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ವರೆಗೆ ಬಿಜೆಪಿ ಹೋರಾಟ ಮುಂದುವರಿಯಲಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ದುರ್ಬಳಕೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರು ತುರ್ತಾಗಿ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆಗ್ರಹಿಸಿದರು.
ಕಂಪ್ಲಿ: ವಾಲ್ಮೀಕಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ವರೆಗೆ ಬಿಜೆಪಿ ಹೋರಾಟ ಮುಂದುವರಿಯಲಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ದುರ್ಬಳಕೆ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ಅವರು ತುರ್ತಾಗಿ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆಗ್ರಹಿಸಿದರು.
ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗೇಂದ್ರ ಅವರ ರಾಜೀನಾಮೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸೆ. 1ರಿಂದ ಪಾದಯಾತ್ರೆ ಆರಂಭವಾಗಲಿದೆ. ಪಾದಯಾತ್ರೆಯು ಏಳನೇ ದಿನ ಕಂಪ್ಲಿಗೆ ಆಗಮಿಸಲಿದೆ ಎಂದು ತಿಳಿಸಿದರು.‘ನಾಗೇಂದ್ರ ರಾಜೀನಾಮೆ ನೀಡಿದರೆ ಮಾತ್ರ ನ್ಯಾಯ ಸಿಕ್ಕಂತಾಗುವುದಿಲ್ಲ. ವಾಲ್ಮೀಕಿ ಸಮುದಾಯದ ಹಲವು ಬೇಡಿಕೆಗಳಿವೆ. ನಿಗಮಕ್ಕೆ ಮೀಸಲಾದ ₹187 ಕೋಟಿ ಸಂಪೂರ್ಣವಾಗಿ ತಲುಪಬೇಕು. ಆ ಹಣವನ್ನು ಸಮುದಾಯದ ಅಭಿವೃದ್ಧಿ ಮತ್ತು ಫಲಾನುಭವಿಗಳ ಸಬಲೀಕರಣಕ್ಕೆ ಸದ್ಬಳಕೆ ಮಾಡಬೇಕು. ಅಲ್ಲಿ ವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದರು.
ಕರ್ನಾಟಕ ಬಿಜೆಪಿ ಕೋರ್ ಕಮಿಟಿ ಸದಸ್ಯರು, ಹಾಲಿ ಹಾಗೂ ಮಾಜಿ ಶಾಸಕರು, ಪಕ್ಷದ ಎಲ್ಲ ಹಂತದ ಪದಾಧಿಕಾರಿಗಳು ಮತ್ತು ಶೋಷಿತ ಸಮುದಾಯಗಳ ಪ್ರತಿನಿಧಿಗಳು ಸೇರಿದಂತೆ ಲಕ್ಷಾಂತರ ಜನರು ಬಿ.ವೈ. ವಿಜಯೇಂದ್ರ ಅವರೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂದು ತಿಳಿಸಿದರು.ವೈಫಲ್ಯಗಳ ವಿರುದ್ಧ ಹೋರಾಟ
ರಾಜ್ಯ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ತುಂಗಭದ್ರಾ ಜಲಾಶಯದಲ್ಲಿ ಹೂಳೆತ್ತಿ ಹೆಚ್ಚುವರಿಯಾಗಿ 200 ಟಿಎಂಸಿ ನೀರು ಸಂಗ್ರಹಿಸುವುದಾಗಿ ಭರವಸೆ ನೀಡಿತ್ತು. ಆದರೆ ಈ ಭರವಸೆ ಈಡೇರಿಲ್ಲ. ತುಂಗಭದ್ರಾ ನದಿಗೆ ಸಮಾಂತರ ಜಲಾಶಯ ನಿರ್ಮಾಣ, ಬರಗಾಲ ಘೋಷಣೆ, ವಸತಿರಹಿತರಿಗೆ ಮನೆ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳಿವೆ. ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುವ ಉದ್ದೇಶವೂ ಪಾದಯಾತ್ರೆಯಲ್ಲಿದೆ ಎಂದು ಹೇಳಿದರು.ಬಿಜೆಪಿ ವಿಭಾಗೀಯ ಪ್ರಭಾರಿ ಅಮರನಾಥ ಪಾಟೀಲ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ರಾಜ್ಯ ಕಾರ್ಯದರ್ಶಿ ತಮ್ಮೇಶಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಡವಿಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಅಳ್ಳಳ್ಳಿ ವೀರೇಶ್, ಪ್ರಮುಖರಾದ ಗೊರ್ತಿ ಶ್ರೀನಿವಾಸ್, ಪ್ರಶಾಂತ್, ಚಂದ್ರಕಾಂತರೆಡ್ಡಿ, ಟಿ.ವಿ.ಸುದರ್ಶನರೆಡ್ಡಿ, ವೈ.ಮುರುಳಿಮೋಹನರೆಡ್ಡಿ, ಸಿ.ಎ.ಚನ್ನಪ್ಪ, ಡಿ.ಶ್ರೀಧರಶ್ರೇಷ್ಠಿ, ಕರಿಬಸಯ್ಯಸ್ವಾಮಿ, ಷಂಶುದ್ದೀನ್ ಸೇರಿದಂತೆ ಹಲವರು ಇದ್ದರು.