ಸಾರಾಂಶ
ಕನ್ನಡಪ್ರಭ ವಾರ್ತೆ ಮಾಗಡಿ
ಪಟ್ಟಣದ ಹೊಸಪೇಟೆ ವೃತ್ತಕ್ಕೆ ಅಗ್ನಿ ಬನ್ನಿರಾಯ ಸ್ವಾಮಿ ಹೆಸರನ್ನು ಇಟ್ಟು ಅಲ್ಲಿ ಅವರ ಪ್ರತಿಮೆಯನ್ನು ಮುಂದಿನ ವರ್ಷ ಉದ್ಘಾಟಿಸಲಾಗುತ್ತದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.ಪಟ್ಟಣದ ಹೊಸಪೇಟೆ ಶ್ರೀರಂಗನಾಥ ಸ್ವಾಮಿ ತಿಗಳ ಜನಾಂಗ ಸೇವಾ ಸಮಿತಿ ವತಿಯಿಂದ 4ನೇ ವರ್ಷದ ಕಾರ್ಯಕ್ರಮ, ಹೊಂಬಾಳಮ್ಮನಪೇಟೆ ಹಾಗೂ ತಾಲೂಕು ಕಚೇರಿಯಲ್ಲಿ ತಿಗಳ ಸಂಘದ ವತಿಯಿಂದ ಆಯೋಜಿಸಿದ ಅಗ್ನಿ ಬನ್ನಿರಾಯ ಸ್ವಾಮಿ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ಜಯಂತ್ಯುತ್ಸವಕ್ಕೆ ಅಗ್ನಿ ಬನ್ನಿರಾಯ ಸ್ವಾಮಿಯ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿ ಕಾರ್ಯಕ್ರಮವನ್ನು ವಿಜೃಂಭಣೆಯಾಗಿ ಮಾಡಲಾಗುತ್ತದೆ. ತಿಗಳ ಸಮುದಾಯದವರು ವಿವಿಧ ಬೇಡಿಕೆಗಳ ಬಗ್ಗೆ ಮನವಿ ನೀಡಿದ್ದು, ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ತಿಗಳ ಸಮುದಾಯ ಒಗ್ಗಟ್ಟಾಗಿ ಬಂದರೆ ಆ ಜನಾಂಗಕ್ಕೆ ನಾನು ಈ ಹಿಂದೆ ನನ್ನ ತಂದೆ- ತಾಯಿ ಹೆಸರಿನಲ್ಲಿ ಜಮೀನು ಖರೀದಿ ಮಾಡಲು ಒಂದು ಕೋಟಿ ಹಣ ನೀಡುವುದಾಗಿ ಭರವಸೆ ಕೊಟ್ಟಿದ್ದು, ಅದನ್ನು ನಾನು ಈಡೇರಿಸುವ ಕೆಲಸ ಮಾಡುತ್ತೇನೆ. ಜನಾಂಗದವರು ಒಗ್ಗಟ್ಟಾಗಿ ಬರಲಿ ಎಂದು ತಿಳಿಸಿದರು.ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಹೊಸಪೇಟೆಯಲ್ಲಿ ಅತಿ ಹೆಚ್ಚು ಜನ ತಿಗಳ ಜನಾಂಗದವರಿದ್ದು, ಬನ್ನಿರಾಯ ಸ್ವಾಮಿ ಆರಾಧನೆಯನ್ನು ಮಾಡುತ್ತಿದ್ದಾರೆ. 18 ಪುರಾಣಗಳ ಪೈಕಿ 9 ಪುರಾಣಗಳಲ್ಲಿ ಬನ್ನಿರಾಯಸ್ವಾಮಿಯವರ ಬಗ್ಗೆ ಉಲ್ಲೇಖವಿದೆ. ದೇವಲೋಕದಲ್ಲಿ ವಾತಾಪಿ ಎಂಬ ರಾಕ್ಷಸನ ಅಟ್ಟಹಾಸದಿಂದ ಕಂಗೆಟ್ಟ ದೇವತೆಗಳು ಶಿವನ ಮೊರೆ ಹೋದರು. ಶಿವನ ಆ ತ್ರಿನೇತ್ರದಿಂದ ಹೊರಹೊಮ್ಮಿದ ಒಂದು ಹನಿಯು ಋಷಿಮುನಿಗಳು ಆಚರಿಸುತ್ತಿದ್ದ ಯಾಗದ ಕುಂಡದಲ್ಲಿ ಬಿದ್ದು, ಆ ಕುಂಡದಿಂದ ಅಗ್ನಿ ಬನ್ನಿರಾಯ ಸ್ವಾಮಿ ಉದಯಿಸಿದನೆಂದು ನಂಬಿಕೆಯಿದೆ ಎಂದರು.
ಹೈದರಾಲಿಯು ಒಂದು ಸುಂದರ ತೋಟವನ್ನು ನಿರ್ಮಿಸಬೇಕೆಂಬ ಕನಸನ್ನು ಕಂಡಿದ್ದನು. ಹಾಗಾಗಿ ತಮಿಳುನಾಡಿನ ಅರ್ಕಾಟ್ ಪ್ರದೇಶಕ್ಕೆ ದಾಳಿ ಮಾಡಿ ಸುಂದರವಾದ ತೋಟಗಳನ್ನು ನಿರ್ಮಿಸುವುದರಲ್ಲಿ ಕುಶಲತೆ ಹೊಂದಿದ್ದ ತಿಗಳ ಸಮುದಾಯದವರನ್ನು ಕರೆತಂದು ಕರ್ನಾಟಕದ ಬೆಂಗಳೂರಿನಲ್ಲಿ 60 ಎಕರೆಗೆ ಒಳಪಟ್ಟ ಹೂವಿನ ತೋಟವನ್ನು ನಿರ್ಮಿಸುವಂತೆ ಹೇಳಿದನು. ಹೈದರನ ಮಾತಿನಂತೆ ಬೆಂಗಳೂರಿನಲ್ಲಿ ಒಂದು ತೋಟವನ್ನು ನಿರ್ಮಿಸಲಾಯಿತು. ಈ ಸಮುದಾಯದವರು ನಿರ್ಮಿಸಿದ ತೋಟವೇ ಲಾಲ್‌ಬಾಗ್ ಆಗಿದೆ ಎಂದು ತಿಳಿಸಿದರು.ಅಗ್ನಿ ಬನ್ನಿ ರಾಯಸ್ವಾಮಿ ಜಯಂತಿ ಅಂಗವಾಗಿ ಹೊಸಪೇಟೆಯಲ್ಲಿ ಪಾನಕ, ಮಜ್ಜಿಗೆ, ಅನ್ನ ಸಂತರ್ಪಣೆ ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶರತ್ ಕುಮಾರ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್, ಸದಸ್ಯ ಅಶ್ವತ್ಥ್, ರಾಮು, ಭಾಗ್ಯಮ್ಮ ನಾರಾಯಣಪ್ಪ, ರೇವಣ್ಣ, ಶೈಲಜಾ, ವನಜಾ, ರೈತ ಸಂಘದ ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿಕುಮಾರ್, ರಘು, ಚಂದ್ರ, ನಾಗರಾಜ್, ಯಜಮಾನ್ ಸಿದ್ದರಾಜು, ಹನುಮಂತಯ್ಯ, ರಂಗನಾಥ ಸೇರಿ ಇತರರು ಭಾಗವಹಿಸಿದ್ದರು.