ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಮಾರ್ನಿಂಗ್ ಸ್ಟಾರ್ ತಂಡದಿಂದ ತರಬೇತಿ ಪಡೆದ ಐವರು ಯುವಕರು ಅಗ್ನಿವೀರ್ ಯೋಜನೆ ಮೂಲಕ ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದವರಿಗೆ ಅಭಿನಂದನೆ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಮಡಿಕೇರಿಯಲ್ಲಿ ನಡೆಯಿತು.ಶುಕ್ರವಾರ ಸಂಜೆ ನಗರದ ಹೋಟೆಲ್ ಸಮುದ್ರ ಸಭಾಂಗಣದಲ್ಲಿ ತಂಡದ ಪ್ರಮುಖರಾದ ಸುರೇಶ್ ರೈ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಸೇನೆಗೆ ಆಯ್ಕೆಯಾಗಿರುವ ಎಸ್.ವಿ. ಮೋಕ್ಷಿತ್ ಭಾಗಮಂಡಲ, ಡಿ.ಎಚ್. ಆಕಾಶ್ ಭಾಗಮಂಡಲ, ಎಚ್.ಆರ್. ಯಶ್ವಂತ್ ಕೂಡಿಗೆ, ಬಿ.ಜಿ. ಹರ್ಷಿತ್ ಚೆಂಬು, ಬಿ.ಎಸ್. ತಿಲಕ್ ಮಡಿಕೇರಿ ಅವರನ್ನು ಗಣ್ಯರು ಅಭಿನಂದಿಸಿದರು.
ಉದ್ಯಮಿ ಶರೀನ್ ಮಾತನಾಡಿ, ವಿವಿಧ ಕ್ಷೇತ್ರದಲ್ಲಿರುವ ಮಂದಿ ಸೇರಿಕೊಂಡು ನಡೆಸುತ್ತಿರುವ ಮಾರ್ನಿಂಗ್ ಸ್ಟಾರ್ ತಂಡ ಸೇನೆಗೆ ಸೇರಲು ಆಸಕ್ತಿ ಇರುವ ಯುವಕರಿಗೆ ತರಬೇತಿ ನೀಡುವ ಮೂಲಕ ಅತ್ಯುತ್ತಮ ಕಾರ್ಯ ಮಾಡುತ್ತಿದೆ ಎಂದರು.ಉದ್ಯಮಿ ಪಪ್ಪಿ ವಸಂತ ಮಾತನಾಡಿ, ಒಳ್ಳೆಯ ಉದ್ದೇಶದಿಂದ ಸಮಾನ ಮನಸ್ಕರ ತಂಡ ರಚನೆಯಾಗಿದೆ. ಸದುದ್ದೇಶದಿಂದ ನಡೆಸುತ್ತಿರುವ ಕಾರ್ಯಗಳು ಮುಂದುವರಿಯಲಿ ಎಂದು ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಂಡದ ಪ್ರಮುಖ ಹಾಗೂ ತರಬೇತುದಾರ ಯೋಗೇಶ್ ಶೆಟ್ಟಿ ಕಾರ್ಯಚಟುವಟಿಕೆ ಬಗ್ಗೆ ವಿವರಿಸಿದರು. ಈವರೆಗೆ ಅನೇಕ ತರುಣರಿಗೆ ತರಬೇತಿ ನೀಡಿದ್ದು, ಅದರಲ್ಲಿ 25 ಮಂದಿ ಭಾರತೀಯ ಸೇನೆಗೆ ಸೇರಿರುವ ತೃಪ್ತಿ ಇದೆ ಎಂದರು.
ಪ್ರಮುಖರಾದ ವಿಜಯ್ ಕುಮಾರ್ ಶೆಟ್ಟಿ, ಕಪಿಲ್, ಬಿ.ಎಸ್. ಆರತಿ, ಶರಣ್, ನಂಜಪ್ಪ, ಮಧು, ಸುರೇಶ್ ಮೊಗವೀರ, ತರಬೇತಿ ಪಡೆದ ಯುವಕರ ಪೋಷಕರು ಮುಂತಾದವರಿದ್ದರು. ಹಿತ ಯೋಗೇಶ್ ಶೆಟ್ಟಿ ಪ್ರಾರ್ಥಿಸಿದರು. ಶರತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸುಬ್ರಹ್ಮಣ್ಯ ವಂದಿಸಿದರು. ಹರ್ಷಿತಾ ಶೆಟ್ಟಿ ನಿರೂಪಿಸಿದರು.
