ಸಾರಾಂಶ
ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ ನವೆಂಬರ್ 13ರಿಂದ 19ರ ವರೆಗೆ ನಡೆಯಲಿರುವ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಯನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಸೂಚಿಸಿದರು.
ನಗರದ ನೂತನ ಜಿಲ್ಲಾಡಳಿತ ಭವನದ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ ಕುರಿತ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಲ್ಯಾಣ ಕರ್ನಾಟಕ ಭಾಗದ ವ್ಯಾಪ್ತಿಯಲ್ಲಿ ಸೇನಾ ನೇಮಕಾತಿ ರ‍್ಯಾಲಿಗಾಗಿ ಬಳ್ಳಾರಿ ಜಿಲ್ಲೆಯನ್ನು ಆಯ್ಕೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಾಗಾಗಿ ಜಿಲ್ಲೆಯ ಎಲ್ಲ ರಾಜ್ಯ ಮತ್ತು ಕೇಂದ್ರ ಇಲಾಖೆಗಳ ಅಧಿಕಾರಿಗಳ ಸಹಕಾರ ಮತ್ತು ಸಹಭಾಗಿತ್ವದೊಂದಿಗೆ ಶಿಸ್ತುಬದ್ಧವಾಗಿ ಆಯೋಜನೆ ಮಾಡುವ ಮೂಲಕ ಯಾವುದೇ ರೀತಿಯ ಲೋಪವಾಗದಂತೆ ನೋಡಿಕೊಳ್ಳಬೇಕು. ನ. 13ರಿಂದ ಆರಂಭವಾಗಿ ನ. 19ರ ವರೆಗೆ ನಡೆಯಲಿರುವ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಶಾರಿರೀಕ ದೇಹದಾರ್ಢ್ಯ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದ್ದು, ಎಲ್ಲ ಪ್ರಕ್ರಿಯೆಗಳು ಮುಕ್ತಾಯವಾಗುವ ವರೆಗೆ ಸೇನಾ ಅಧಿಕಾರಿಗಳಿಗೆ ಜಿಲ್ಲೆಯ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ತಿಳಿಸಿದರು.
ರ‍್ಯಾಲಿಯಲ್ಲಿ ಭಾಗವಹಿಸಲು ಆಗಮಿಸುವ ಅಭ್ಯರ್ಥಿಗಳಿಗೆ ನಗರದ ಸರ್ಕಾರಿ ಅತಿಥಿ ಗೃಹ, ಪೊಲೀಸ್ ಜಿಮ್‌ಖಾನಾ, ವಾಲ್ಮೀಕಿ ಭವನ, ಡಾ.ಬಾಬು ಜಗನ್ ಜೀವನರಾಮ್ ಭವನ ಸೇರಿದಂತೆ ಮೂಲ ಸೌಕರ್ಯವುಳ್ಳ ಸಮುದಾಯ ಭವನಗಳನ್ನು ಗುರುತಿಸಿ ತಂಗಲು ವ್ಯವಸ್ಥೆ ಮಾಡಬೇಕು. ಅದೇರೀತಿಯಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಶೌಚಾಲಯ, ಸ್ವಚ್ಛತೆ ಕುಡಿಯುವ ನೀರಿನ ವ್ಯವಸ್ಥೆಯ ಕಡೆ ಪಾಲಿಕೆ ಆಯುಕ್ತರು ಗಮನ ಹರಿಸಬೇಕು.ರ‍್ಯಾಲಿಯಲ್ಲಿ ಭಾಗವಹಿಸಲು ಬಳ್ಳಾರಿಗೆ ಆಗಮಿಸುವ ಅಭ್ಯರ್ಥಿಗಳನ್ನು ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಿಂದ ಬಸ್ ವ್ಯವಸ್ಥೆಗೆ ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕೈಗೊಳ್ಳಬೇಕು. ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಲು ಬಸ್ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಹೆಲ್ಪ್ ಡೆಸ್ಕ್ ತೆರೆಯಬೇಕು. ಸಾಧ್ಯವಾದರೆ ಬ್ಯಾನರ್ ಮತ್ತು ಕ್ರೀಡಾಂಗಣದ ಕ್ಯೂಆರ್ ಕೋಡ್ ಒಳಗೊಂಡ ಸ್ಥಳದ ಮಾಹಿತಿ ಭಿತ್ತಿ ಪತ್ರ ಸಿದ್ಧಪಡಿಸಬೇಕು.
ವಿವಿಧ ದಿನಗಳಂದು ನಡೆಯುವ ಸೇನಾ ನೇಮಕಾತಿಯು ಬೆಳಗ್ಗೆಯಿಂದಲೇ ಆರಂಭಗೊಳ್ಳುವುದರಿಂದ ಅಭ್ಯರ್ಥಿಗಳನ್ನು ನಿಗದಿತ ಸ್ಥಳಕ್ಕೆ ಕರೆದುಕೊಂಡು ಹೋಗಿಬರಲು ಸೂಕ್ತ ಯೋಜನಾ ಕಾರ್ಯ ರೂಪಿಸಬೇಕು. ಟ್ರಾಫಿಕ್ ಸಮಸ್ಯೆಯಾಗುವಂತಿಲ್ಲ. ಈ ಕುರಿತು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಮತ್ತು ಲೋಕೋಪಯೋಗಿ ಅಧಿಕಾರಿಗಳು ಸಮನ್ವಯತೆ ಹೊಂದಬೇಕು ಎಂದು ಸೂಚಿಸಿದರು.ಜಿಲ್ಲಾ ಕ್ರೀಡಾಂಗಣಲ್ಲಿ ಅಭ್ಯರ್ಥಿಗಳ ಒಳಪ್ರವೇಶಕ್ಕೆ ಪ್ರವೇಶ ಪತ್ರ ಮಾನ್ಯತೆಯಾಗಿದ್ದು, ಪೊಲೀಸ್ ಅಧಿಕಾರಿಗಳು ದಾಖಲೆ ಪರಿಶೀಲಿಸಿ ಪ್ರವೇಶ ಕಲ್ಪಿಸಬೇಕು. ಯಾವುದೇ ರೀತಿಯ ತೊಡಕು ಉಂಟಾಗುವಂತಿಲ್ಲ. ಅಗತ್ಯಕ್ಕಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಕ್ರೀಡಾಂಗಣದ ವ್ಯಾಪ್ತಿಯಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.
ಅಭ್ಯರ್ಥಿಗಳಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಬೇಕು. ಜಿಲ್ಲಾ ಕ್ರೀಡಾಂಗಣದ ಬಳಿ ಅಗತ್ಯ ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನ, ಅಭ್ಯರ್ಥಿಗಳ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ನುರಿತ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ನಿಯೋಜಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.ಬೆಂಗಳೂರು ಪ್ರಧಾನ ಕಚೇರಿಯ ಆರ್‌ಒ ಮತ್ತು ಸೇನಾ ನೇಮಕಾತಿ ಅಧಿಕಾರಿಯಾದ ಮೇಜರ್ ಕಪಿಲ್ ಕೆ. ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 7 ದಿನಗಳ ಕಾಲ ನಡೆಯುವ ರ‍್ಯಾಲಿಯಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಂದ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ರ‍್ಯಾಲಿ ಪ್ರಕ್ರಿಯೆಯು ಆಯಾ ದಿನಗಳ ಬೆಳಗ್ಗೆ 5ರಿಂದ ಪ್ರಾರಂಭಗೊಂಡು ಮಧ್ಯಾಹ್ನ 12ರ ವರೆಗೆ ನಡೆಯಲಿದ್ದು, ಪ್ರತಿ ದಿನ 800ರಿಂದ 1000 ವರೆಗೆ ಅಭ್ಯರ್ಥಿಗಳು ಭಾಗವಹಿಸುವ ಅವಕಾಶವಿದೆ. ಅದರಲ್ಲಿ ಶೇ. 40ರಷ್ಟು ಅಭ್ಯರ್ಥಿಗಳು ಅರ್ಹರಾಗುತ್ತಾರೆ. ಎರಡು ದಿನಗಳ ಕಾಲ ತಂಗಲಿದ್ದು, ಅವರಿಗೆ ಎಲ್ಲ ರೀತಿಯ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಸಭೆಗೆ ತಿಳಿಸಿದರು.
ಎಡಿಸಿ ಮಹಮ್ಮದ್ ಝುಬೇರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ, ಡಿಎಚ್‌ಒ ಡಾ. ಯಲ್ಲಾ ರಮೇಶ್ ಬಾಬು, ಸೇನಾ ನೇಮಕಾತಿಯ ಅಧಿಕಾರಿ ಕರ್ನಲ್ ವಿವೇಕ್ ಜಮಿಂದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))