ಸಾರಾಂಶ
ಆನೆ ದಾಳಿ ಪ್ರದೇಶಗಳಿಗೆ ಶಾಸಕ, ಅರಣ್ಯಾಧಿಕಾರಿ ಭೇಟಿ । ಶೆಟ್ಟಿಕೊಪ್ಪದಲ್ಲಿ ಜನ ಸಂಪರ್ಕ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕಾಡಾನೆಗಳು ನಾಡಿಗೆ ಬಾರದಂತೆ ರೈಲ್ವೆ ಬ್ಯಾರಿಕ್ಯಾಡ್ ನಿರ್ಮಿಸಲು ₹60 ರಿಂದ 70 ಕೋಟಿ ಅಗತ್ಯವಿದ್ದು, ಸದ್ಯಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ₹20 ಕೋಟಿ ಅನುದಾನ ನೀಡಲು ಒಪ್ಪಿದ್ದಾರೆ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಶುಕ್ರವಾರ ತಾಲೂಕಿನ ಶೆಟ್ಟಿಕೊಪ್ಪದ ನವಗ್ರಾಮದ ಸಮುದಾಯ ಭವನದಲ್ಲಿ ಕಾಡಾನೆಗಳ ಹಾಳಿಯಿಂದ ಬೆಳೆ ಹಾನಿಯಾದ ಕಡಹಿನಬೈಲು, ಮುತ್ತಿನಕೊಪ್ಪ ಗ್ರಾಪಂಗಳ ವಿವಿಧ ಗ್ರಾಮಗಳ ರೈತರೊಂದಿಗೆ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು. ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಡಾನೆ ಹಾಗೂ ಇತರ ಪ್ರಾಣಿಗಳಿಂದ ₹60 ಲಕ್ಷ ಬೆಳೆ ಹಾನಿಯಾಗಿತ್ತು. ಈಗಾಗಲೇ ₹30 ಲಕ್ಷ ಪರಿಹಾರ ನೀಡಲಾಗಿದೆ ಎಂದರು.ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಾಡು ಪ್ರಾಣಿಗಳಿಂದ ಜೀವ ಹಾನಿ ಹಾಗೂ ಬೆಳೆ ಹಾನಿಗಳಿಗೆ ನೀಡುತ್ತಿದ್ದ ಪರಿಹಾರ ದುಪ್ಪಟ್ಟು ಮಾಡಲಾಗಿದೆ. ಸೀತೂರು ಗ್ರಾಮದ ಕೆರೆಗದ್ದೆಯಲ್ಲಿ ಉಮೇಶ ಎಂಬುವರು ಕಾಡಾನೆ ದಾಳಿಯಿಂದ ಮೃತಪಟ್ಟಾಗ ₹15 ಲಕ್ಷ ಪರಿಹಾರ ನೀಡಿದ್ದೇವೆ. ಎಕ್ಕಡಬೈಲಿನ ರೈತ ಎಲಿಯಾಸ್ ಮೃತ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಪರಿಹಾರ ನೀಡಿದ್ದೇವೆ.
ಈ ಭಾಗಕ್ಕೆ ಕಾಯಂ ಆಗಿ ಎಲಿಫೆಂಟ್ ಟಾಸ್ಕ್ ಪೋರ್ಸ್ ನೀಡುವಂತೆ ಕೇಳಿದ್ದೇನೆ. ಈಗಿರುವ ಎಲಿಫೆಂಟ್ ಟಾಸ್ಕ್ ಪೋರ್ಸ್ ತಂಡಕ್ಕೆ ಶೀಘ್ರ ಒಂದು ವಾಹನ ನೀಡುತ್ತೇವೆ ಎಂದರು.ಕೊಪ್ಪ ಡಿಎಫ್‌ಒ ನಂದೀಶ್ ಮಾತನಾಡಿ, ಕಳೆದ 4-5 ವರ್ಷದ ಹಿಂದೆ 38 ಕಾಡಾನೆಗಳು ಭದ್ರಾ ವೈಡ್ ಲೈಪ್ ನಿಂದ ಈ ಭಾಗಕ್ಕೆ ಬಂದಿದ್ದವು. ಈಗ ಈ ಸಂಖ್ಯೆ 50 ಕ್ಕೆ ಏರಿದೆ. ಇದನ್ನು ಅರಣ್ಯ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದೆ. ಈ ಬಗ್ಗೆ ಆನೆಗಳ ನಡವಳಿಕೆ, ಜೀವನ ಶೈಲಿ ಬಗ್ಗೆ 2 ದಿನಗಳ ಕಾರ್ಯಾಗಾರ ಮಾಡಲಾಗಿದ್ದು ನುರಿತ ಆನೆಗಳ ತಜ್ಞರನ್ನು ಕರೆಸ ಲಾಗಿತ್ತು.ಅರಣ್ಯ ಇಲಾಖೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಆನೆಗಳನ್ನು ಬೆದರಿಸಲು ಹೋಗದೆ ತಕ್ಷಣ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಬೇಕು. ಶೀರ್ಘ ಕಂಟ್ರೋಲ್ ರೂಂ ಆರಂಭಿಸಿ ಮಾಡಿ ದೂರವಾಣಿ ಸಂಖ್ಯೆ ನೀಡುತ್ತೇವೆ. ಅದಕ್ಕೆ ಸಾರ್ವಜನಿಕರು ದೂರು ನೀಡಬಹುದು ಎಂದರು.
ಈಗಾಗಲೇ ರೇಲ್ವೆ ಬ್ಯಾರಿಕೇಡ್, ಪೆಂಟಿಕಲ್ ಪೆನ್ಸಿನ್ ಸೇರಿದಂತೆ ಎಲ್ಲಾ ಆಯಾಮಗಳ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಶೃಂಗೇರಿ ಕ್ಷೇತ್ರದಲ್ಲಿ ಪ್ರಾಣಿಗಳಿಂದ ₹60 ಲಕ್ಷ ಬೆಳೆ ನಷ್ಟವಾಗಿತ್ತು. ₹30 ಲಕ್ಷ ಪರಿಹಾರ ನೀಡಲಾಗಿದೆ. ಉಳಿದ ₹30 ಲಕ್ಷದಲ್ಲಿ ₹15 ಲಕ್ಷ ಮಂಜೂರಾಗಿದ್ದು ಎರಡು ದಿನಗಳಲ್ಲಿ ವಿತರಿಸಲಾಗುವುದು ಎಂದರು.ಸಭೆಗೂ ಮೊದಲು ಶಾಸಕ ಟಿ.ಡಿ.ರಾಜೇಗೌಡ, ಜನಪ್ರತಿನಿಧಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಒಟ್ಟಾಗಿ ಕಾಡಾನೆ ದಾಳಿಯಿಂದ ಬಾಳೆ ನಾಶವಾದ ಕಡಹಿನಬೈಲು ಗ್ರಾಮದ ಭದ್ರಾ ಕಾಲೋನಿ ಜೋಸೆಫ್ ಎಂಬುವರ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಹೆಚ್ಚಾಗಿ ಕಾಡಾನೆಗಳು ಓಡಾಡುತ್ತಿರುವ ಸೂಸಲವಾನಿ ಗ್ರಾಮದ ಜೇನುಕಟ್ಟೆ ಸರ ಎಂಬ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿ ವಾಸ ಮಾಡುವ ಎರಡು ಕುಟುಂಬದವರಿಗೆ ಧೈರ್ಯ ತುಂಬಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶೆಟ್ಟಿಕೊಪ್ಪ ಮಹೇಶ್ ಜನ ಸಂಪರ್ಕ ಸಭೆ ಉದ್ದೇಶ ತಿಳಿಸಿದರು. ಅಧ್ಯಕ್ಷತೆಯನ್ನು ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ವಹಿಸಿದ್ದರು. ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್, ಸದಸ್ಯರಾದ ಚಂದ್ರಶೇಖರ್, ಎ.ಬಿ.ಮಂಜುನಾಥ, ಶೈಲಾ ಮಹೇಶ್, ಲಿಲ್ಲಿ ಮಾತು ಕುಟ್ಟಿ, ರವೀಂದ್ರ, ವಾಣಿ ನರೇಂದ್ರ, ಪೂರ್ಣಿಮ ಸಂತೋಷ್, ಗ್ರಾಪಂ ಮಾಜಿ ಉಪಾಧ್ಯಕ್ಷ ಗಾಂಧಿಗ್ರಾಮ ನಾಗರಾಜು, ಕೆಪಿಸಿಸಿ ಸದಸ್ಯ ಪಿ.ಆರ್. ಸದಾಶಿವ, ತಾ.ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ,ಕೆಡಿಪಿ ಸದಸ್ಯ ಸಾಜು,ಮೆಣಸೂರು ಗ್ರಾಪಂ ಸದಸ್ಯ ಬಿನು, ಮುತ್ತಿನಕೊಪ್ಪ ಗ್ರಾಪಂ ಸದಸ್ಯ ನರೇಂದ್ರ, ಪಪಂ ಸದಸ್ಯೆ ಜುಬೇದ, ಮುಖಂಡರಾದ ಕೆ.ಎಂ.ಸುಂದರೇಶ್, ಎ.ಅಬೂಬಕರ್, ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್, ಚಿಕ್ಕ ಅಗ್ರಹಾರ ವಲಯ ಅರಣ್ಯಾಧಿಕಾರಿ ಆದರ್ಶ, ಪ್ರೊಬೆಷನರಿ ಡಿಎಫ್‌ಒ ನೇಹಾ, ಸುನೀಲ್ ಕುಮಾರ್ ಇದ್ದರು.-- ಬಾಕ್ಸ್ ---
ಕಡಹಿನಬೈಲು ಹಾಗೂ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ರೈತರು ಕಾಡಾನೆಗಳಿಂದ ಆಗಿದ್ದ ಅನಾಹುತವನ್ನು ಸಭೆಗೆ ವಿವರಿಸಿದರು.ಸೂಸಲವಾನಿ ಗ್ರಾಮದ ಜೇನುಕಟ್ಟೆ ಸರದ ರವಿ ಎಂಬ ರೈತ ಮಾತನಾಡಿ, ನನ್ನ ತೋಟಕ್ಕೆ ಆನೆಗಳು ನುಗ್ಗಿ ಹಾಳು ಮಾಡಿದೆ. ಜಮೀನಿನ ಪಕ್ಕಾ ಪೋಡು ಆಗಿಲ್ಲವೆಂಬ ಕಾರಣಕ್ಕೆ ಪರಿಹಾರ ನೀಡಿಲ್ಲ ಎಂದು ಅಲವತ್ತುಕೊಂಡರು. ಮಡಬೂರು ಗ್ರಾಮದ ಗುಡ್ಡೇಕೊಪ್ಪ ಶೋಭಾ ಸಹ ತಮ್ಮ 2 ಎಕರೆ ಅಡಕೆ ತೋಟ ಆನೆಯಿಂದ ಹಾಳಾಗಿದ್ದು ಪಕ್ಕಾ ಪೋಡು ಆಗಿಲ್ಲ ಎಂದು ತಮಗೂ ಪರಿಹಾರ ನೀಡಿಲ್ಲ ಎಂದು ದೂರಿದರು.
ಮಡಬೂರು ಲಿಂಗಪ್ಪ ಗೌಡ ಮಾತನಾಡಿ, ನನ್ನ 2 ಎಕರೆ ಅಡಕೆ ತೋಟವನ್ನು ಆನೆ ಹಾಳು ಮಾಡಿವೆ. ಸಮೀಪದ ಕಾಡಿನಲ್ಲಿ 3 ಕಾಡಾನೆಗಳಿವೆ. ಭಯದ ವಾತಾವರಣದಲ್ಲಿ ಬದುಕುತ್ತಿದ್ದೇವೆ ಎಂದರು.ಜೇನುಕಟ್ಟೆ ಸರದ ಸುಬ್ಬಣ್ಣ ಮಾತನಾಡಿ, ನನ್ನ ತೋಟದಲ್ಲಿ ಒಂದೇ ರಾತ್ರಿಯಲ್ಲಿ 30 ಅಡಕೆ ಮರಗಳನ್ನು ಆನೆಗಳು ಉರುಳಿಸಿವೆ. ಕಳೆದ 3 ವರ್ಷಗಳಲ್ಲಿ 150-200 ಅಡಕೆ ಮರಗಳು ನಾಶವಾಗಿವೆ ಕಷ್ಟತೋಡಿಕೊಂಡರು.
ರೈತರಾದ ಜಿ.ಟಿ.ಸೋಮಣ್ಣ, ರಮಾಮಣಿ,ಕೆ.ಎಂ.ವಿಜೇಂದ್ರ, ಬಿ.ಎಸ್.ಸುಬ್ರಮಣ್ಯ,ಚಂದ್ರಶೇಖರ್, ಎ.ಬಿ.ಮಂಜುನಾಥ್, ಆರ್.ಸದಾಶಿವ, ಗಾಂಧಿಗ್ರಾಮ ನಾಗರಾಜು, ಮತ್ತಿತರರು ಕಾಡಾನೆಯ ದಾಳಿಯಿಂದ ಆಗಿರುವ ಸಮಸ್ಯೆಗಳನ್ನು ಹೇಳಿಕೊಂಡರು.