ಸಾರಾಂಶ
ಭೀಮಣ್ಣ ಗಜಾಪುರ
ಕೂಡ್ಲಿಗಿ: ಬಿಸಿಲಿನ ತಾಪಕ್ಕೆ ಜನತೆ ಬಸವಳಿದಿದ್ದರು. ಮುಂಗಾರು ಮಳೆ ಧರೆಗಿಳಿದು ತಂಪೆರೆದಿದೆ. ರೈತರು ಬಿತ್ತನೆಗೆ ಹೊಲಗಳನ್ನು ಸಜ್ಜುಗೊಳಿಸಲು ಮುಂದಾಗಿದ್ದಾರೆ.ಕೃಷಿ ಇಲಾಖೆಯ ಅಧಿಕಾರಿಗಳು ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಮಾಡಲು ತಯಾರು ನಡೆಸಿದ್ದಾರೆ. ಕೂಡ್ಲಿಗಿ ತಾಲೂಕಿನಲ್ಲಿ ಮೇ 13ರಿಂದ ಉತ್ತಮವಾಗಿ ಮಳೆ ಆಗುತ್ತಿದೆ. ಅಲ್ಲದೆ, ಶನಿವಾರ, ಭಾನುವಾರ ಸಹ ತಾಲೂಕಿನ ಬಹುತೇಕ ಕಡೆ ವರ್ಷಧಾರೆ ಸುರಿದಿದೆ. ಕಳೆದ ವರ್ಷ ಮಳೆಗಾಲವನ್ನೇ ನೋಡದ ರೈತರಿಗೆ ಈ ಬಾರಿ ಮಳೆರಾಯ ಯಥೇಚ್ಛವಾಗಿ ಬರುತ್ತದೆ ಎಂಬ ನಂಬಿಕೆಯಲ್ಲಿ ಜಮೀನು ಹದ ಮಾಡಲು ಮುಂದಾಗಿದ್ದಾರೆ. ಮುಂಗಾರು ಬಿತ್ತನೆಗೆ ತಮ್ಮ ಜಮೀನುಗಳನ್ನು ಸಜ್ಜುಗೊಳಿಸಲು, ನೇಗಿಲು, ಕುಂಟೆ ಹೊಡೆಸುತ್ತಿದ್ದಾರೆ.
ಟ್ರ್ಯಾಕ್ಟರ್ ಬೇಸಾಯ: ಇತ್ತೀಚೆಗೆ ಎತ್ತುಗಳನ್ನು ಸಾಕಣೆ ಮಾಡಿ ಬೇಸಾಯ ಮಾಡುವ ರೈತರ ಸಂಖ್ಯೆ ತೀರಾ ಕ್ಷೀಣಿಸಿದೆ. ಟ್ರ್ಯಾಕ್ಟರ್ ಗಳಿಂದ ನೇಗಿಲು, ಕುಂಟೆ ಹೊಡೆಸಲು ಮುಂದಾಗಿದ್ದಾರೆ. ಹೀಗಾಗಿ ಟ್ರ್ಯಾಕ್ಟರ್ ಗಳಿಗೆ ಭಾರೀ ಬೇಡಿಕೆ ಬಂದಿದೆ. ರೈತರಿಗೆ ಹೆಚ್ಚಿನ ಬಾಡಿಗೆಯ ಹೊರೆಯೂ ಆಗುತ್ತದೆ. ಆದರೂ ವಿಧಿ ಇಲ್ಲ. ಎತ್ತುಗಳನ್ನು ಕೊಳ್ಳಲು ಲಕ್ಷಗಟ್ಟಲೇ ಹಣ ಬೇಕು. ಅವುಗಳ ಪಾಲನೆಗೆ ಮೇವು ಬೇಕು. ಹೀಗಾಗಿ ರೈತರು ಎತ್ತುಗಳಿಲ್ಲದೇ ಕೈಚೆಲ್ಲಿ ಕುಳಿತ್ತಿದ್ದಾರೆ. ಈಗಾಗಿ ಟ್ರ್ಯಾಕ್ಟರ್ ಬೇಸಾಯವೇ ಬಹುತೇಕ ರೈತರಿಗೆ ಅನಿವಾರ್ಯವಾಗಿದೆ.ಜೋಳ ಬಿತ್ತನೆ ಕಾಲ: ಇನ್ನು 8-10 ದಿನದಲ್ಲಿ ರೋಹಿಣಿ ಮಳೆ ಆರಂಭವಾಗಲಿದೆ. ಆ ಮಳೆಯಲ್ಲಿ ಜೋಳ, ತೊಗರಿ, ಹೆಸರು ಬಿತ್ತನೆ ಮಾಡಿದರೆ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ರೈತರು ಈಗಾಗಲೇ ಬಿದ್ದಿರುವ ಮಳೆಗೆ ಹೊಲಗಳನ್ನು ಬಿತ್ತನೆಗೆ ಸಿದ್ಧತೆ ಮಾಡಿ ಇಟ್ಟಿದ್ದಾರೆ. ಕೂಡ್ಲಿಗಿ ತಾಲೂಕಿನಲ್ಲಿ ಜೋಳ, ಮೆಕ್ಕೆಜೋಳ, ಸೂರ್ಯಕಾಂತಿ, ಹೆಸರು, ತೊಗರಿ, ಹತ್ತಿ ಬಿತ್ತನೆ ಮಾಡಲು ಮುಂದಾಗಿದ್ದಾರೆ. ರೈತರ ಅವಶ್ಯಕತೆಗೆ ತಕ್ಕಂತೆ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕರ ಕಚೇರಿಯ ಟೆಕ್ನಿಷಿಯನ್ ಅಧಿಕಾರಿ ನೀಲಾ ನಾಯ್ಕ ತಿಳಿಸಿದ್ದಾರೆ.
ಮಳೆ ಪ್ರಮಾಣ: ಕೂಡ್ಲಿಗಿ ತಾಲೂಕಿನಲ್ಲಿ ಮೇ ೧೩ರಂದು ಕಾನಹೊಸಹಳ್ಳಿ ಭಾಗದಲ್ಲಿ ೫೪.೦೨ ಮಿ.ಮೀ. ಮಳೆಯಾಗಿದೆ. ಕೆರೆಗೆ ನೀರು ಹರಿದುಬಂದಿರುವುದನ್ನು ಕಂಡ ರೈತಾಪಿ ವರ್ಗ ಸಂತಸಗೊಂಡಿದೆ. ಅದರಂತೆ, ಗುಡೇಕೋಟೆಯಲ್ಲಿ ೨೭.೦೩ ಮಿ.ಮೀ, ಕೂಡ್ಲಿಗಿಯಲ್ಲಿ ೨೨.೦೪ ಮಿ.ಮೀ, ಚಿಕ್ಕಜೋಗಿಹಳ್ಳಿಯಲ್ಲಿ ೧೮.೦೨ ಮಿ.ಮೀ ಹಾಗೂ ಬಣವಿಕಲ್ಲು ಗ್ರಾಮದಲ್ಲಿ ೧೨.೦೩ ಮಿ.ಮೀಟರ್‌ನಷ್ಟು ಮಳೆ ಪ್ರಮಾಣ ದಾಖಲಾಗಿದೆ. ಅದರಂತೆ, ತಾಲೂಕಿನಲ್ಲಿ ಶನಿವಾರ ಕೂಡ್ಲಿಗಿಯಲ್ಲಿ ೨೯.೦೪ ಮಿ.ಮೀ, ಗುಡೇಕೋಟೆ -೧೪.೦೨ ಮಿ.ಮೀ ಹಾಗೂ ಕಾನಹೊಸಹಳ್ಳಿ -೧೪.೦೩ ಮಿ.ಮೀ ಪ್ರಮಾಣದಲ್ಲಿ ಮಳೆಯಾಗಿದೆ.ಈ ವರ್ಷದ ಆರಂಭದಲ್ಲೇ ಉತ್ತಮವಾಗಿ ಮಳೆ ಸುರಿದಿದೆ. ಜೋಳ, ಹೆಸರು, ತೊಗರಿ ಬಿತ್ತನೆ ಮಾಡುವವರು ಈಗಾಗಲೇ ಜಮೀನುಗಳನ್ನು ಸಜ್ಜು ಮಾಡುತ್ತಿದ್ದಾರೆ. ಕಾಲ ಕಾಲಕ್ಕೆ ಉತ್ತಮವಾಗಿ ಮಳೆ ಸುರಿದರೆ ರೈತರು ಖುಷಿಯಾಗಿರುತ್ತಾರೆ. ಹೆಚ್ಚಿನ ಬೆಳೆ ಬೆಳೆಯಲು ಅನುಕೂಲವಾಗಲಿದೆ ಎನ್ನುತ್ತಾರೆ ಗುಡೇಕೋಟೆ ರೈತ ಹುಲಿರಾಜಪ್ಪ.