ಸಾರಾಂಶ
ಕನ್ನಡ ಪ್ರಭ ವಾರ್ತೆ, ಮೊಳಕಾಲ್ಮುರು
ತಾಲೂಕಿನಲ್ಲಿ ಶನಿವಾರ ರಾತ್ರಿ ಬಿರುಗಾಳಿ ಸಹಿತ ಬಾರಿ ಮಳೆಯಾಗಿದ್ದು, ಹಳ್ಳ ಕೊಳ್ಳಗಳಿಗೆ ಜೀವ ಕಳೆ ಬಂದಿದೆ. ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ.ಕಳೆದ ಬೀಕರ ಬರಗಾಲ ಇಡೀ ತಾಲೂಕಿನ ರೈತಾಪಿ ವರ್ಗದ ಬದುಕನ್ನು ಕಸಿದುಕೊಂಡಿತ್ತು. ಜೀವ ಜಲವಿಲ್ಲದೆ ಕೆರೆ ಕಟ್ಟೆಗಳು ಒಣಗಿ ಕುಡಿಯುವ ನೀರಿಗೂ ಪರಿತಪಿಸುವಂತಾಗಿತ್ತು. ಆದರೆ ಈ ಬಾರಿ ಮುಂಗಾರು ಆರಂಭದಲ್ಲಿ ಸುರಿದ ಉತ್ತಮ ಮಳೆಯಿಂದ ರೈತರಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕಿದೆ.
ಉತ್ತಮ ಮಳೆಯಿಂದ ದೇವಸಮುದ್ರ ಹಾಗೂ ರಾಂಪುರ ಸುತ್ತಲಿನ ಗ್ರಾಮಗಳಲ್ಲಿ ಕೆರೆ ಕಟ್ಟೆಗಳಿಗೆ ಜೀವ ಜಲ ಬಂದಿದೆ. ರಾಂಪುರ ಸಮೀಪದ ಗುಂಡೇರಹಳ್ಳ ತುಂಬಿ ಹರಿಯುತ್ತಿದ್ದು, ದೇವಸಮುದ್ರ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಕೋನಾಪುರ ಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಸಿದ್ದಾಪುರ ಕೆರೆಗೆ ನೀರು ಹರಿದು ಬಂದಿದ್ದು ಎಲ್ಲೆಡೆ ಕಳೆ ತುಂಬಿದೆ.ತಾಲೂಕಿನ ಕಸಬಾ ಹೋಬಳಿಗೆ ಹೋಲಿಕೆ ಮಾಡಿಕೊಂಡಲ್ಲಿ ದೇವಸಮುದ್ರ ಹೋಬಳಿ ವ್ಯಾಪ್ತಿಯ ರಾಂಪುರ ಮತ್ತು ದೇವಸಮುದ್ರ ಸುತ್ತಲಿನ ಹಳ್ಳಿಗಳಲ್ಲಿ ಬಾರಿ ಮಳೆಯಾಗಿದ್ದು, ಕೃಷಿ ಹೊಂಡ, ಕೆರೆ ಕಟ್ಟೆಗಳಿಗೆ ಅಪಾರ ನೀರು ಹರಿದು ಬಂದಿದೆ. ಕಸಬಾ ಹೋಬಳಿಯಲ್ಲಿ ರಾಯಾಪುರ ಹೊರತು ಪಡಿಸಿದರೆ ಉಳಿದೆಡೆ ಸಾಧಾರಣ ಮಳೆಯಾಗಿದೆ.
ಕಳೆದೊಂದು ವಾರದಿಂದ ಸುರಿದ ಹದ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ. ರೈತರು ಜಮೀನುಗಳ ಕಡೆ ಮುಖ ಮಾಡಿದ್ದಾರೆ. ದೇವಸಮುದ್ರ ಹೋಬಳಿ ಯಲ್ಲಿ ಹತ್ತಿ ಬಿತ್ತನೆಯಾಗುತ್ತಿದ್ದು, ಕಸಬಾ ಹೋಬಳಿಯಲ್ಲಿ ಜಮೀನುಗಳನ್ನು ಹಸನುಗೊಳಿಸುತ್ತಿದ್ದಾರೆ. ಇನ್ನೂ ಕೆಲವರು ಎಳ್ಳು, ತೊಗರಿ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ.ತಾಲೂಕಿನಲ್ಲಿ ಈ ಬಾರಿ 32,500 ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಹೊಂದಿದ್ದು, ಅದರಲ್ಲಿ ಶೇಂಗಾ 22 ಸಾವಿರ ಹೆಕ್ಟೇರ್ ಇದೆ. ಹತ್ತಿ 950 ಹೆಕ್ಟೇರ್ ಬಿತ್ತನೆ ಗುರಿ ಇದ್ದರೂ ಗುರಿಗಿಂತಲೂ ಹೆಚ್ಚು ಬಿತ್ತನೆಯಾಗುತ್ತಿದೆ.ಮೆಕ್ಕೆ ಜೋಳ 750 ಜೋಳ 900, ಸಿರಿ ಧಾನ್ಯ 500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. ಹತ್ತಿ ಗುರಿಗಿಂತಲೂ 2 ಸಾವಿರಕ್ಕೂ ಹೆಚ್ಚಿನ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಕಳೆದ ಬಾರಿಗೆ ಹೋಲಿಕೆ ಮಾಡಿಕೊಂಡರೆ ಈ ಬಾರಿ ರೈತರಲ್ಲಿ ಬಿತ್ತನೆ ಬೀಜ ಸಂಗ್ರಹವಿಲ್ಲದಾಗಿದ್ದು ಬೇಡಿಕೆಗೂ ಹೆಚ್ಚಿದೆ. 8 ಸಾವಿರ ಕ್ವಿಂಟಲ್ ಶೇಂಗಾ ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. ಇದರೊಟ್ಟಿಗೆ 120 ತೊಗರಿ ,50 ಜೋಳ,100 ಮೆಕ್ಕೆ ಜೋಳ 60 ಕ್ವಿಂಟಲ್ ರಾಗಿ ಸೇರಿದಂತೆ 500 ಹೆಕ್ಟೇರ್ ಪ್ರದೇಶದಲ್ಲಿ ಸಿರಿ ಧಾನ್ಯಗಳ ಬಿತ್ತನೆ ಗುರಿ ಹೊಂದಿದೆ.ತಾಲೂಕಿನಲ್ಲಿ ಶನಿವಾರ ರಾತ್ರಿ ಮೊಳಕಾಲ್ಮುರು 11.4, ರಾಯಾಪುರ 57.8, ಬಿಜಿಕೆರೆ 7.8, ರಾಂಪುರ 65.1, ದೇವಸಮುದ್ರ 70 ಮಿ ಮೀ ಮಳೆಯಾಗಿದೆ. ಇದರಿಂದಾಗಿ ರೈತರಲ್ಲಿ ಹರ್ಷ ವ್ಯಕ್ತವಾಗುತ್ತಿದ್ದು, ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ.