ಸಾರಾಂಶ
ಹಿರಿಯೂರು ತಾಲೂಕಿನ ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿಎರಡು ದಿನ ಕೃಷಿ ಮತ್ತು ತೋಟಗಾರಿಕೆ ಮೇಳ 2025 ನಡೆಯಲಿದ್ದು ಮೇಳದ ಬಗ್ಗೆ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಡಾ ಶರಣಪ್ಪ ಜಂಗoಡಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ನವೆಂಬರ್ 14 ಮತ್ತು 15 ರಂದು ಎರಡು ದಿನ ಕೃಷಿ ಮತ್ತು ತೋಟಗಾರಿಕೆ ಮೇಳ 2025 ನಡೆಯಲಿದ್ದು ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಕೃಷಿಮೇಳದ ಸದುಪಯೋಗ ಪಡೆಯಬೇಕೆಂದು ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಶರಣಪ್ಪ ಜಂಗಂಡಿ ಹೇಳಿದರು.ತಾಲೂಕಿನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಮಹಾವಿದ್ಯಾಲಯ, ಕೃಷಿ, ತೋಟಗಾರಿಕೆ, ಅರಣ್ಯ, ಪಶು ಸಂಗೋಪನೆ ಮುಂತಾದ ಇಲಾಖೆ ಹಾಗೂ ಸಂಸ್ಥೆಗಳ ಸಹಯೋಗದಲ್ಲಿ ನಡೆಯುವ ಕೃಷಿಮೇಳದ ಬಗ್ಗೆ ಸಂಶೋಧನಾ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೃಷಿ ಮತ್ತು ತೋಟಗಾರಿಕೆ ಮೇಳವನ್ನು ಆಯೋಜಿಸಲಾಗಿದೆ. 1916 ಮೈಸೂರು ಅರಸರ ಆದೇಶದಂತೆ ಲೆಸ್ಲಿ ಕೋಲ್ಮನ್ ರವರು ಖುಷ್ಕಿ ಬೇಸಾಯದ ಸಂಶೋಧನೆಗೆಂದು ಈ ಕೇಂದ್ರ ಪ್ರಾರಂಭಗೊಂಡಿತು. ಇಲ್ಲಿಯವರೆಗೆ ವಿವಿಧ ಬೆಳೆಗಳ ತಳಿಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಲಾಗಿದೆ. ಹತ್ತಿ, ಕಬ್ಬು, ನವಣೆ, ಸಾವೆ, ಎಳ್ಳು, ಅವರೆ, ಕುಸುಮೆ ಮುಂತಾದ ಬೆಳೆಗಳ ಹಾಗೂ ತಳಿಗಳ ಸಂಶೋಧನೆಗೆ ಆದ್ಯತೆ ನೀಡಲಾಗಿದೆ. ಸಮಗ್ರ ಕೃಷಿ ರೈತನ ಪ್ರಗತಿ ಎಂಬ ಉದ್ದೇಶದೊಂದಿಗೆ 2025ರ ಕೃಷಿಮೇಳ ಆಯೋಜಿಸಲಾಗಿದ್ದು, ಮೇಳದಲ್ಲಿ ಸಮಗ್ರ ಕೃಷಿ ಪದ್ಧತಿ, ಜೇನುವನ ಮತ್ತು ಕೀಟ ಪ್ರಪಂಚ, ಸಿರಿಧಾನ್ಯಗಳ ಮೌಲ್ಯವರ್ಧನೆ ಮತ್ತು ತಾಂತ್ರಿಕತೆಗಳು, ಗೋಡಂಬಿ ಬೆಳೆಯ ಪ್ರಾತ್ಯಕ್ಷಿಕೆ, ಸಾವಯವ ಕೃಷಿ ಮತ್ತು ಅಣಬೆ ಬೇಸಾಯ, ಪಶು ಸಂಗೋಪನೆ, ಮತ್ತು ಮೀನುಗಾರಿಕೆ ತಂತ್ರಜ್ಞಾನಗಳು, ಮೌಲ್ಯವರ್ದಿತ ಕೃಷಿ ಉತ್ಪನ್ನಗಳು, ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳ ಪ್ರದರ್ಶನ, ರೇಷ್ಮೆ ಕೃಷಿ ತಂತ್ರಜ್ಞಾನ, ರೈತ ಉತ್ಪಾದಕರ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ರೈತರು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಈ ಸಂದರ್ಭದಲ್ಲಿ ಹಿರಿಯ ವಿಜ್ಞಾನಿ ಡಾ.ಪರಶುರಾಮ ಚಂದ್ರವಂಶಿ, ಪ್ರಾಧ್ಯಾಪಕ ಡಾ.ಹನುಮಂತರಾಯ ಎಲ್, ಸಹ ಪ್ರಾಧ್ಯಾಪಕರಾದ ಡಾ.ಶ್ರೀನಿವಾಸುಲು ಜಿ.ಬಿ, ಡಾ.ಕುಮಾರ್ ನಾಯ್ಕ್, ಸಹಾಯಕ ಪ್ರಾದ್ಯಾಪಕಿ ಡಾ.ಎಸ್. ಲತಾ ಹಾಜರಿದ್ದರು.ಕೃಷಿ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟನೆ ಮಾಡಲಿದ್ದು ಸಂಸದ ಗೋವಿಂದ ಕಾರಜೋಳ ವಸ್ತು ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ. ಶಾಸಕ ಬಿ.ಜಿ.ಗೋವಿಂದಪ್ಪ ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡಲಿದ್ದು ಅತ್ಯುತ್ತಮ ಕೃಷಿ ಕಾರ್ಮಿಕರನ್ನು ಶಾಸಕ ಟಿ.ರಘುಮೂರ್ತಿ ಸನ್ಮಾನಿಸುವರು. ಕಾರ್ಯಕ್ರಮದಲ್ಲಿ ಕುಲಪತಿ ಡಾ.ಆರ್.ಸಿ.ಜಗದೀಶ್, ಶಾಸಕರಾದ ಜಿ.ಎಚ್.ಶ್ರೀನಿವಾಸ್, ಎನ್.ವೈ.ಗೋಪಾಲಕೃಷ್ಣ, ಎಂ.ಚಂದ್ರಪ್ಪ, ಚಿದಾನಂದ ಗೌಡ, ಕೆ.ಎಸ್.ನವೀನ್, ಡಿ.ಟಿ.ಶ್ರೀನಿವಾಸ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.;Resize=(128,128))
;Resize=(128,128))
;Resize=(128,128))