ಇಲ್ಲಿನ ಶ್ರೀ ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ನಿಮಿತ್ತ ಡಿ.26ರಂದು ಬೆಳಗ್ಗೆ 10.30ಕ್ಕೆ ಹಾನಗಲ್ಲ ರಸ್ತೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಶ್ರೀ ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವದ ಅಂಗವಾಗಿ ಕೃಷಿಮೇಳ, ಕೃಷಿ ಉಪಕರಣಗಳ ಪ್ರದರ್ಶನ, ಜಾನುವಾರು ಜಾತ್ರೆ ನಡೆಯಲಿದೆ.
ಹಾವೇರಿ: ಇಲ್ಲಿನ ಶ್ರೀ ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ನಿಮಿತ್ತ ಡಿ.26ರಂದು ಬೆಳಗ್ಗೆ 10.30ಕ್ಕೆ ಹಾನಗಲ್ಲ ರಸ್ತೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಶ್ರೀ ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವದ ಅಂಗವಾಗಿ ಕೃಷಿಮೇಳ, ಕೃಷಿ ಉಪಕರಣಗಳ ಪ್ರದರ್ಶನ, ಜಾನುವಾರು ಜಾತ್ರೆ ನಡೆಯಲಿದೆ.
ಕೃಷಿ ಇಲಾಖೆ ಕೃಷಿ ಮೇಳ, ಸಿರಿ ಧಾನ್ಯ ಮೇಳ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಪಶು ಇಲಾಖೆಯಿಂದ ಜಾನುವಾರು ಜಾತ್ರೆ, ಜಾನುವಾರುಗಳ ಪ್ರದರ್ಶನ ಹಾಗೂ ಜಿಲ್ಲಾ ಮಟ್ಟದ ಶ್ವಾನಗಳ ಪ್ರದರ್ಶನ ಆಯೋಜಿಸಿದೆ. ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆ, ದೇವಿಹೊಸೂರು ಕೆವಿಕೆ ವತಿಯಿಂದ ಮೆಣಸಿನಕಾಯಿ ತಳಿಗಳ ಪ್ರದರ್ಶನ, ಖಾದಿ ಗ್ರಾಮೋದ್ಯೋಗ ನಿಗಮದಿಂದ ಪ್ರದರ್ಶನ, ಜಿಪಂ ವತಿಯಿಂದ ಪ್ರದರ್ಶನ, ವಿವಿಧ ಬ್ಯಾಂಕ್‌ಗಳಿಂದ ರೈತರಿಗೆ ಮಾಹಿತಿ, ಕೌಶಲ್ಯಾಭಿವೃದ್ಧಿ ಇಲಾಖೆ ಕೌಶಲ್ಯಾಧಾರಿತ ಚಟುವಟಿಕೆಗಳ ಮಾಹಿತಿ ಮತ್ತು ಪ್ರದರ್ಶನ, ಮೀನುಗಾರಿಕೆ ಇಲಾಖೆಯಿಂದ ಮತ್ಸ ಮೇಳ, ಬೀಜ ಮತ್ತು ಗೊಬ್ಬರ ರಾಸಾಯನಿಕ ಕಂಪನಿಗಳಿಂದ ಮಾಹಿತಿ ಕಾರ್ಯಾಗಾರ ನಡೆಯಲಿದೆ.ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ನರಗುಂದದ ಸಿದ್ಧಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಘನ ಉಪಸ್ಥಿತರಿರುವರು. ಹಾವೇರಿ ಹಾಲು ಒಕ್ಕೂಟ ಅಧ್ಯಕ್ಷ ಮಂಜನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎನ್. ಪಾಟೀಲ ಉದ್ಘಾಟಿಸುವರು. ಹುಕ್ಕೇರಿಮಠದ ಸದಾಶಿವ ಶ್ರೀಗಳ ನೇತೃತ್ವದಲ್ಲಿ ವಿವಿಧ ಗ್ರಾಮಗಳಲ್ಲಿ ನಡೆದ ಪಾದಯಾತ್ರೆ ವೇಳೆ ಶ್ರೀಗಳು ರೈತರ ಸಮಸ್ಯೆ ಮಾಹಿತಿ ಪಡೆದಿದ್ದಾರೆ. ಹೀಗಾಗಿ ಜಾತ್ರೆಯ ಸಂದರ್ಭದಲ್ಲಿ ದಾಸೋಹದ ಜತೆಗೆ ರೈತರಿಗೆ ಕೃಷಿ ಬಗ್ಗೆ ಜ್ಞಾನದ ದಾಸೋಹ, ವೈಜ್ಞಾನಿಕ ಕೃಷಿ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೃಷಿ ಮೇಳ ಆಯೋಜಿಸಿದ್ದಾರೆ. ಒಂದೇ ವೇದಿಕೆಯಲ್ಲಿ ಅನೇಕ ಇಲಾಖೆಗಳ ಮಾಹಿತಿ ಸಿಗಲಿದೆ. ಕಾರಣ ಹೆಚ್ಚಿನ ರೈತರು ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಪಿಎಂಸಿ ಮಾಜಿ ನಿರ್ದೇಶಕ ರುದ್ರೇಶ ಚಿನ್ನಣ್ಣನವರ ಹೇಳಿದರು.