ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಎರಡು ದಿನಗಳ ಸಹ್ಯಾದ್ರಿ ಕೃಷಿ ಸಂತೆ ಆಯೋಜಿಸಿದೆ. ಕೃಷಿ ಸಂತೆ ಉದ್ಘಾಟಿಸಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ವಿ. ಧನಂಜಯ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಎರಡು ದಿನಗಳ ಸಹ್ಯಾದ್ರಿ ಕೃಷಿ ಸಂತೆ ಆಯೋಜಿಸಿದೆ.ಕೃಷಿ ಸಂತೆ ಉದ್ಘಾಟಿಸಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ವಿ. ಧನಂಜಯ ಅವರು, ಈ ಕೃಷಿ ಸಂತೆಯು ರೈತರಿಗೆ ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಬಗ್ಗೆ ಮಾಹಿತಿ, ಬೀಜಗಳ ಲಭ್ಯತೆ ಮತ್ತು ಉತ್ತಮ ಗುಣಮಟ್ಟದ ಸಸಿಗಳನ್ನು ರೈತರಿಗೆ ಒದಗಿಸಿಕೊಡುವ ಒಂದು ಉತ್ತಮ ವೇದಿಕೆಯಾಗಿದೆ. ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಬೀಜಗಳು ಸಸಿಗಳು ಮತ್ತು ಪರಿಕರಗಳು ಒಂದೇ ಸೂರಿ ನಡಿ ಪ್ರದರ್ಶನಕ್ಕಿದ್ದು, ಮಾರಾಟ ಮತ್ತು ತಾಂತ್ರಿಕ ಮಾಹಿತಿಯನ್ನು ರೈತರಿಗೆ ಈ ಕೃಷಿ ಸಂತೆಯು ನೀಡುತ್ತದೆ ಎಂದು ವಿವರಿಸಿದರು.
ಕೃಷಿ ಸಂತೆಯ ಆಕರ್ಷಣೆ:ಕೃಷಿ ಸಂತೆಯಲ್ಲಿ ಕೃಷಿ ಪರಿಕರಗಳು, ಹಣ್ಣು, ತರಕಾರಿ, ಸಸಿ ಮತ್ತು ಕಸಿ ಗಿಡಗಳು, ಹೂವು ಮತ್ತು ಅಲಂಕಾರಿಕ ಗಿಡಗಳು, ಔಷಧಿಯ ಮತ್ತು ಸುಗಂಧ ಸಸ್ಯಗಳು, ತರಕಾರಿ ಬೀಜದ ಕಿಟ್, ಹೂ ಬೀಜದ ಕಿಟ್ಟುಗಳು, ಕೃಷಿ ಮತ್ತು ತೋಟಗಾರಿಕೆ ಉಪಕರಣಗಳು, ಜೈವಿಕ ಉತ್ಪನ್ನಗಳು ಮತ್ತು ಸಾವಯವ ಗೊಬ್ಬರ, ಮೌಲ್ಯವರ್ಧಿತ ಹಾಗೂ ಸಂಸ್ಕರಿತ ಉತ್ಪನ್ನಗಳು ಮತ್ತು ವಿವಿಧ ರೀತಿಯ ಖಾದ್ಯ ಮತ್ತು ಆಹಾರ ಮಳಿಗೆಗಳು ಕೃಷಿ ಸಂತೆಯ ಆಕರ್ಷಣೆ ಆಗಿವೆ ಎಂದು ಡಾ. ಎಂ.ವಿ. ಧನಂಜಯ ಮಾಹಿತಿ ನೀಡಿದರು.
ಈ ಮೇಳದಲ್ಲಿ ವಿಶ್ವವಿದ್ಯಾಲಯದ ಗೌರವಾನ್ವಿತ ಆಡಳಿತ ಮಂಡಳಿ ಸದಸ್ಯರುಗಳು ಮತ್ತು ವಿಶ್ವವಿದ್ಯಾಲಯದ ಎಲ್ಲಾ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.ಸುಮಾರು 150 ಮಳಿಗೆಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ರೈತರು ಕೃಷಿ ವಿಜ್ಞಾನ ಕೇಂದ್ರದ ಪ್ರಾತ್ಯಕ್ಷಿಕೆ ತಾಕುಗಳಾದ ವಿವಿಧ ಬೆಳೆಗಳ ತಾಕುಗಳು, ಜೇನು ಪಾರ್ಕ್, ಸಮಗ್ರ ಕೃಷಿ ಪದ್ಧತಿ, ಮೀನುಗಾರಿಕೆ, ಕುರಿ ಸಾಗಾಣಿಕೆ ಮತ್ತು ಕೃಷಿ ಪ್ರವಾಸೋದ್ಯಮ ಕೃಷಿ ಯಾನಕ್ಕೆ ರೈತರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಜತೆಗೆ ಸಾವಿರಾರು ರೈತರು ಕೃಷಿ ಸಂತೆಯಲ್ಲಿ ಗುಣಮಟ್ಟದ ಸಸಿಗಳು ಮತ್ತು ಬೀಜಗಳನ್ನು ಖರೀದಿ ಮಾಡಿದರು.