ಸಾರಾಂಶ
ಕನ್ನಡಪ್ರಭವಾರ್ತೆ ತಿಪಟೂರು
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ನಡೆಯಬೇಕಿದ್ದ ಕೃಷಿ ಮತ್ತು ಕರಕುಶಲ ವಸ್ತುಗಳ ಉತ್ಸವ, ಆಹಾರ ಮೇಳ ಹಾಗೂ ಪ್ರದರ್ಶನ ಕಾರ್ಯಕ್ರಮವನ್ನು ಶಾಸಕ ಕೆ. ಷಡಕ್ಷರಿಯವರು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿದ್ದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಬಾಲಾಜಿ ಇವೆಂಟ್ಸ್‌ನ ಅಯೋಜಕ ಪ್ರದೀಪ್ ಆರೋಪಿಸಿದರು.ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಮ್ಮ ಬಾಲಾಜಿ ಇವೆಂಟ್ಸ್‌ನಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಕಾಲೇಜಿನ ಅಧ್ಯಕ್ಷರಾದ ಶಾಸಕ ಕೆ.ಷಡಕ್ಷರಿಯವರ ಅನುಮತಿ ಪಡೆದಿದ್ದೆವು. ಆದರೆ ಏಕಾಏಕಿ ಶಾಸಕರು ಹಾಗೂ ಆಪ್ತ ಸಹಾಯಕರು ದೂರವಾಣಿ ಮೂಲಕ ಕಾರ್ಯಕ್ರಮ ನಿಲ್ಲಿಸಲು ಸೂಚನೆ ನೀಡಿ ರದ್ದು ಪಡಿಸಿದ್ದಾರೆ. ನಗರಸಭೆಯಿಂದ ಸಿಬ್ಬಂದಿ ಬಂದು ಜೆಸಿಬಿಯಿಂದ ಸ್ಟಾಲ್‌ಗಳನ್ನು ತೆರವುಗೊಳಿಸುವಂತೆ ತಿಳಿಸಿದ್ದು ಉತ್ಸವ ಕಾರ್ಯಕ್ರಮ ರದ್ದಾಗಿದೆ. ಉತ್ಸವದ ಅಂಗವಾಗಿ ಮಳಿಗೆಗಳನ್ನು ಸಿದ್ದಪಡಿಸಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ದೆಹಲಿ, ಗೋವಾ ರಾಜ್ಯಗಳಿಂದ ಕೃಷಿ ಉತ್ಪನ್ನಗಳು, ಕರಕುಶಲ ಕಲಾ ವಸ್ತುಗಳು ಮಾರಾಟಗಾರರು ಹಾಗೂ ಹಳ್ಳಿಕಾರ್ ಜಾನುವಾರು, ಉತ್ತಮ ಗುಣಮಟ್ಟದ ಕುರಿಗಳ ಪ್ರದರ್ಶನಕ್ಕೆ ಸಿದ್ಧಗೊಂಡಿದ್ದು, ಲಕ್ಷಾಂತರ ರೂಪಾಯಿ ತೆಂಗಿನಗರಿಯ ಅಲಂಕಾರ ವಸ್ತುಗಳನ್ನು ಸಿದ್ದಪಡಿಸಲಾಗಿದ್ದು ಸುಮಾರು 20 ಲಕ್ಷಕ್ಕೂ ಹೆಚ್ಚು ಹಣ ವಿನಿಯೋಗಿಸಿದ್ದು ನಷ್ಟವಾಗಿದೆ ಎಂದರು.ಕೃಷಿ ಉತ್ಸವದ ಉದ್ಘಾಟನೆಗೆ ಶಾಸಕರಿಗೆ ಆಮಂತ್ರಣವನ್ನು ನೀಡಿದ್ದು ಅವರ ಒಪ್ಪಿಗೆ ಮೇರೆಗೆ ಅವರ ಭಾವಚಿತ್ರವಿರುವ ಫ್ಲೆಕ್ಸ್ ಕಟ್ಟಲು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲು ಪೊಲೀಸ್ ಇಲಾಖೆ, ನಗರಸಭೆಗೆ ಹಣ ನೀಡಿ ಅನುಮತಿ ಪಡೆದುಕೊಳ್ಳಲಾಗಿದೆ. ಪ್ರಾರಂಭದ ದಿನ ಏಕಾಏಕಿ ನಿಲ್ಲಿಸಿರುವುದರಿಂದ ಪ್ರಚಾರಕ್ಕೆ ಬಳಸಿದ ಬ್ಯಾನರ್‌ಗಳು ಆಹಾರ ಮೇಳಕ್ಕೆ ಬಂದಂತಹ ಸಿದ್ಧಪಡಿಸಿದ ಆಹಾರವು ನಷ್ಟವಾಗಿದೆ. ತಿಪಟೂರಿನ ಕೃಷಿ ಉತ್ಸವದಿಂದಾಗಿ ಸುಮಾರು 70 ರಿಂದ 80 ಕುಟುಂಬಗಳು ಹೆಚ್ಚಿನ ಆರ್ಥಿಕ ನಷ್ಟಕ್ಕೆ ಗುರಿಯಾಗಿದ್ದು ಇದರ ಹೊಣೆ ಶಾಸಕರದ್ದು ಎಂದು ತಿಳಿಸಿದರು.