ನರೇಗಾ ಬಾಕಿ ವೇತನ ಪಾವತಿ, ಕೆಲಸ ನೀಡುವಂತೆ ಕೃಷಿ ಕೂಲಿ ಕಾರ್ಮಿಕರ ಪ್ರತಿಭಟನೆ

| Published : Aug 08 2024, 01:36 AM IST

ನರೇಗಾ ಬಾಕಿ ವೇತನ ಪಾವತಿ, ಕೆಲಸ ನೀಡುವಂತೆ ಕೃಷಿ ಕೂಲಿ ಕಾರ್ಮಿಕರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಕೃಷಿ ಕೂಲಿಕಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಾರಿಗೊಳಿಸಿದ ಉದ್ಯೋಗ ಖಾತ್ರಿ ಯೋಜನೆಯನ್ನು ದುರ್ಬಲಗೊಳಿಸಲು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಅಧಿಕಾರ ಶಾಹಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ಬಾಕಿ ವೇತನ ಪಾವತಿ, ಕೆಲಸ ನೀಡುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕೃಷಿ ಕೂಲಿ ಕಾರ್ಮಿಕರು ತೊರೆಕಾಡನಹಳ್ಳಿ ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘಟನೆ ಹಲಗೂರು ಹೋಬಳಿ ಸಮಿತಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿ ಗ್ರಾಪಂ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಕೃಷಿ ಕೂಲಿಕಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಾರಿಗೊಳಿಸಿದ ಉದ್ಯೋಗ ಖಾತ್ರಿ ಯೋಜನೆಯನ್ನು ದುರ್ಬಲಗೊಳಿಸಲು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಅಧಿಕಾರ ಶಾಹಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಿದ್ದಾರೆ ಎಂದು ದೂರಿದರು.

ನಗರ ಪ್ರದೇಶಗಳಿಗೆ ಕೂಲಿಕಾರರು ವಲಸೆ ಹೋಗುವುದನ್ನು ತಡೆಗಟ್ಟಲು, ಗ್ರಾಮೀಣ ಭಾಗದ ವ್ಯಾಪ್ತಿಯಲ್ಲಿ ಕೆಲಸ ನೀಡುವ ಉದ್ದೇಶದಿಂದ ಎಡಪಕ್ಷಗಳ ಒತ್ತಾಯದ ಮೇರೆಗೆ ಯುಪಿಎ ಸರ್ಕಾರ ನರೇಗಾ ಯೋಜನೆ ಜಾರಿ ಮಾಡಿತ್ತು. ಆದರಂತೆ ಕೂಲಿ ಕಾರ್ಮಿಕರಿಗೆ ಕೆಲಸ ನೀಡದೇ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಎನ್.ಕೊಡಹಳ್ಳಿ, ಮಾರಗೌಡನಹಳ್ಳಿ, ಬಸಾಪುರ ಮುಂತಾದ ಹಳ್ಳಿಗಳ ಕೂಲಿಕಾರರು ಕಠಿಣ ಪರಿಶ್ರಮದ ಮೂಲಕ ಕೆಲಸ ನಿರ್ವಹಿಸಿದ್ದರೂ ಅವರಿಗೆ ಕಡಿಮೆ ಕೂಲಿ ವೇತನ ಹಾಕುವುದು, ಉದ್ಯೋಗ ಕೇಳಿ ಅರ್ಜಿ ಸಲ್ಲಿಸಿ ತಿಂಗಳುಗಳಾದರೂ ಕೆಲಸ ನೀಡುತ್ತಿಲ್ಲ ಎಂದು ಕಿಡಿಕಾರಿದರು.

ಕೆಲಸ ಮಾಡಿದ ನಂತರ ಫೋಟೋ ತೆಗೆಯಲು ದಿನಗಟ್ಟಲೆ ಕಾಯಿಸುವುದು ಕಾಯಕ ಬಂದುವಿಗೆ ಹಣ ಹಾಕದಿರುವುದು ಹಾಗೂ ಬೋರ್ಡ್ ಬರೆಸಿದ ಹಣವನ್ನು ಸಹ ಹಾಕದಿರುವುದು ಇವೆಲ್ಲವೂ ಯೋಜನೆ ದುರ್ಬಲಗೊಳಿಸುವ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಎಂಜಿನಿಯರ್‌ಗಳಾದ ಸುಹಾಸ್ ಮತ್ತು ಅರುಣ್ ಅವರು, ನಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಿ ಸರಿಪಡಿಸುವ ಭರವಸೆ ನೀಡಿದ ಆಧಾರದ ಮೇಲೆ ಪ್ರತಿಭಟನೆ ಕೈ ಬಿಟ್ಟರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಹಲಗೂರು ಹೋಬಳಿ ಘಟಕ ಅಧ್ಯಕ್ಷ ಎಂ.ಇ.ಮಹದೇವ, ಕಾರ್ಯದರ್ಶಿ ಮಹೇಶ್, ತಾಲೂಕು ಉಪಾಧ್ಯಕ್ಷರಾದ ಪ್ರಮೀಳಾ, ಶಿವಕುಮಾರ್, ಸಹ ಕಾರ್ಯದರ್ಶಿ ಸತೀಶ್, ಮುಖಂಡರಾದ ಸಣ್ಣಶೆಟ್ಟಿ, ಗಣೇಶ್ ಹಲವರು ಭಾಗವಹಿಸಿದ್ದರು.