ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದ ವ್ಯಕ್ತಿಯೊಬ್ಬ ಇಸ್ಲಾಪುರ ಗಡಿಯ ಜಮೀನೊಂದಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದಾಗ ಆಕಸ್ಮಿಕವಾಗಿ ಜಮೀನಿನಲ್ಲಿ ಹಾದುಹೋಗಿರುವ ವಿದ್ಯುತ್ ವೈರ್ ತುಳಿದು ಸಾವು ಕಂಡಿರುವ ಘಟನೆ ಮಂಗಳವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ನ್ಯಾಮತಿ
ತಾಲೂಕಿನ ರಾಮೇಶ್ವರ ಗ್ರಾಮದ ವ್ಯಕ್ತಿಯೊಬ್ಬ ಇಸ್ಲಾಪುರ ಗಡಿಯ ಜಮೀನೊಂದಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದಾಗ ಆಕಸ್ಮಿಕವಾಗಿ ಜಮೀನಿನಲ್ಲಿ ಹಾದುಹೋಗಿರುವ ವಿದ್ಯುತ್ ವೈರ್ ತುಳಿದು ಸಾವು ಕಂಡಿರುವ ಘಟನೆ ಮಂಗಳವಾರ ನಡೆದಿದೆ.ರಾಮೇಶ್ವರದ ಬಸವರಾಜ್ ಟಿ.ಆರ್. (45) ಮೃತ ಕೂಲಿ ಕಾರ್ಮಿಕ. ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಗ್ರಾಮದಲ್ಲಿ ವಾಸವಾಗಿರುವ ಬಸವರಾಜ್, ಮಂಗಳವಾರ ಬೆಳಗ್ಗೆ 7-30ರ ಇಸ್ಲಾಪುರ ಗಡಿಯ ಶಿವಮೊಗ್ಗದ ಕೃಷ್ಣಮೂರ್ತಿ ಆಚಾರ್ ಎಂಬವರ ಜಮೀನಿನಲ್ಲಿ ಗೊಬ್ಬರ ಹಾಕುವ ಕೂಲಿ ಕೆಲಸಕ್ಕೆ ಹೋಗಿದ್ದರು. ಅವರೊಂದಿಗೆ ರಮೇಶಪ್ಪ, ವಾಸು, ರಾಜಪ್ಪ ಎಂಬವರು ಸಹ ಹೋಗಿದ್ದರು.
ಬೆಳಗ್ಗೆ 9 ಗಂಟೆ ಸಮಯದಲ್ಲಿ ಜಮೀನಿನ ಮಾಲೀಕನ ಮಗ ಕೂಲಿ ಕಾರ್ಮಿಕ ಬಸವರಾಜನ ಮಗ ಮನೋಜ್ಗೆ ಮೊಬೈಲ್ ಮೂಲಕ ಸಂಪರ್ಕಿಸಿ, ನಿಮ್ಮ ತಂದೆ ನಮ್ಮ ಜಮೀನಿಗೆ ಕೂಲಿ ಕೆಲಸಕ್ಕೆ ಹೋಗಿದ್ದಾರೆ. ಆದರೆ ಅರ್ಧ ಗಂಟೆಯಿಂದ ಪೋನ್ ಮಾಡುತ್ತಿದ್ದರೂ ಪೋನ್ ತೆಗೆದುಕೊಳ್ಳುತ್ತಿಲ್ಲ. ನಿಮ್ಮ ತಂದೆಯ ಜೊತೆ ಬಂದವರು ಕೂಲಿ ಗೀಟುವುದಿಲ್ಲ ಎಂದು ವಾಪಸ್ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಆಗ ಬಸವರಾಜನ ಪುತ್ರ ಮನೋಜ್ ಮತ್ತು ಮಾವನ ಮಗ ಗಿರೀಶ ಇಬ್ಬರು ಸ್ಥಳಕ್ಕೆ ಹೋಗಿ ನೋಡಿದಾಗ ತಂದೆ ಬಸವರಾಜ್ ಜಮೀನಿನಲ್ಲಿ ಹಾದುಹೋಗಿರುವ ವಿದ್ಯುತ್ ವೈರ್ ತುಳಿದು ಬಿದ್ದಿರುವುದನ್ನು ಗಮನಿಸಿದ್ದಾರೆ.ಕೂಡಲೇ ಮನೋಜ್ ತನ್ನ ತಾಯಿ ಸವಿತಾ ಅವರಿಗೆ ತಿಳಿಸಿದ್ದು, ನ್ಯಾಮತಿ ಸಮುದಾಯ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಸವಿತಾ ಪತಿಯಾದ ಬಸವರಾಜನನ್ನು ವೈದ್ಯರು ಪರೀಕ್ಷಿಸಿದಾಗ ಅವರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- - -ಫೋಟೋ: ಬಸವರಾಜ್ ಟಿ.ಆರ್.