ಬಿತ್ತನೆ ಬೀಜ, ಗೊಬ್ಬರ ವಿತರಣೆಗೆ ಕೃಷಿ ಇಲಾಖೆ ಸಜ್ಜು

| Published : May 23 2024, 01:02 AM IST

ಸಾರಾಂಶ

ರಾಣಿಬೆನ್ನೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಳೆದ ಮೂರ‍್ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಇಲಾಖೆ ಬಿತ್ತನೆಗೆ ಬೇಕಾದ ಬೀಜ, ಗೊಬ್ಬರ ದಾಸ್ತಾನು ಮಾಡಿಕೊಂಡಿದೆ. ರೈತರಿಗೆ ವಿತರಿಸಲು ಸಜ್ಜಾಗುತ್ತಿದೆ.

ಬಸವರಾಜ ಸರೂರ

ರಾಣಿಬೆನ್ನೂರು: ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಳೆದ ಮೂರ‍್ನಾಲ್ಕು ದಿನಗಳಿಂದ ಪ್ರಸಕ್ತ ಸಾಲಿನ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಹರುಷ ಮೂಡಿಸಿದೆ. ಕೃಷಿ ಇಲಾಖೆ ಬಿತ್ತನೆಗೆ ಬೇಕಾದ ಬೀಜ, ಗೊಬ್ಬರ ದಾಸ್ತಾನು ಮಾಡಿಕೊಂಡಿದೆ.

ಬಿತ್ತನೆ ಪ್ರದೇಶ: ತಾಲೂಕಿನಲ್ಲಿ ಒಟ್ಟು 76,130 ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಅದರಲ್ಲಿ 41,560 ಹೆಕ್ಟೇರ್ ಮಳೆ ಆಶ್ರಿತವಿದೆ. 34,570 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಮುಂಗಾರು ಹಂಗಾಮಿನಲ್ಲಿ ಸುಮಾರು 54,901 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 7,780 ಹೆಕ್ಟೇರ್ ಬತ್ತ, 42,900 ಹೆಕ್ಟೇರ್ ಗೋವಿನಜೋಳ, 615 ಹೆಕ್ಟೇರ್ ತೊಗರಿ, 1,350 ಹೆಕ್ಟೇರ್ ಶೇಂಗಾ, 575 ಹೆಕ್ಟೇರ್ ಹತ್ತಿ, 570 ಹೆಕ್ಟೇರ್ ಸೋಯಾಬಿನ್, 150 ಹೆಕ್ಟೇರ್ ಹೆಸರು ಮತ್ತು 1,206 ಹೆಕ್ಟೇರ್ ಇತರೆ ಬೆಳೆಗಳಿವೆ.

ದಾಸ್ತಾನು ಪ್ರಕ್ರಿಯೆ: ಈಗಾಗಲೇ 350 ಕ್ವಿಂಟಲ್ ಬತ್ತ, 1500 ಕ್ವಿಂಟಲ್ ಗೋವಿನಜೋಳ, 90 ಕ್ವಿಂಟಲ್ ಶೇಂಗಾ, 180 ಕ್ವಿಂಟಲ್ ತೊಗರಿ, 430 ಕ್ವಿಂಟಲ್ ಸೋಯಾ ಅವರೆ ಬಿತ್ತನೆ ಬೀಜಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಬೇಡಿಕೆಗೆ ತಕ್ಕಂತೆ ದಾಸ್ತಾನು ಕಾರ್ಯ ಪ್ರಗತಿಯಲ್ಲಿದೆ.

ಬೀಜ ಮತ್ತು ಗೊಬ್ಬರ ವಿತರಣೆ: ತಾಲೂಕಿನ ರೈತ ಸಂಪರ್ಕ ಕೇಂದ್ರಗಳಾದ ರಾಣಿಬೆನ್ನೂರು, ಮೆಡ್ಲೇರಿ ಮತ್ತು ಕುಪ್ಪೇಲೂರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಾದ ಸುಣಕಲ್ಲಬಿದರಿ ಮತ್ತು ಹರನಗಿರಿ ಹಾಗೂ ಹೆಚ್ಚುವರಿ ಕೇಂದ್ರಗಳಾದ ಚಳಗೇರಿ ಮತ್ತು ಹಲಗೇರಿ ಸೇರಿದಂತೆ ಒಟ್ಟು 7 ಬಿತ್ತನೆ ಬೀಜ ವಿತರಣಾ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. 10260 ಟನ್ ಯೂರಿಯಾ, 3548 ಟನ್ ಡಿಎಪಿ, 516 ಟನ್ ಎಂಒಪಿ, 9631 ಟನ್ ಕಾಂಪ್ಲೆಕ್ಸ್ ಮತ್ತು 270 ಟನ್ ಎಸ್.ಎಸ್.ಪಿ. ಬೇಡಿಕೆಯಿದ್ದು, ಹಂತ ಹಂತವಾಗಿ ಬಿತ್ತನೆಗೆ ತಕ್ಕಂತೆ ರಸಗೊಬ್ಬರ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ರಸಗೊಬ್ಬರ ಕೊಳ್ಳಲು ರೈತರು ಕಡ್ಡಾಯವಾಗಿ ಹಿಡುವಳಿದಾರರ ಆಧಾರ್‌ ಕಾರ್ಡ್ ತೆಗೆದುಕೊಂಡು ಖಾಸಗಿ ಕೃಷಿ ಪರಿಕರ ಮಾರಾಟಗಾರರಿಂದ ಮತ್ತು ಸೊಸೈಟಿಗಳ ಮೂಲಕ ರಸಗೊಬ್ಬರ ಪಡೆಯಬೇಕಾಗಿದೆ.

ರೈತರಿಗೆ ಸಲಹೆ: ರೈತರು ಡಿಎಪಿ ರಸಗೊಬ್ಬರ ಬದಲಾಗಿ ಅಥವಾ ಪೂರಕವಾಗಿ 20:20:0:13, 15:15:15, 10:26:26 ರಸಗೊಬ್ಬರಗಳನ್ನು ಬಳಸಿಕೊಳ್ಳಬೇಕು ಎಂದು ಕೃಷಿ ಇಲಾಖೆ ಸೂಚಿಸಿದೆ.

ರೈತರು ತಾವೇ ಖುದ್ದು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಕೃಷಿ ಪರಿಕರಗಳನ್ನು ಖರೀದಿಸಬೇಕು. ಹೊಸ ಕ್ಯೂಆರ್ ಕೋಡ್ ವ್ಯವಸ್ಥೆಯಿಂದ ಬಿತ್ತನೆ ಬೀಜ ವಿತರಣೆಯಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. ಆದ್ದರಿಂದ ರೈತ ಬಾಂಧವರು ಶಾಂತ ರೀತಿಯಿಂದ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ರಾಣಿಬೆನ್ನೂರು ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಹೇಳಿದರು.