ಸಾರಾಂಶ
ಬಾಣಂತಿಯರು ಪೌಷ್ಟಿಕ ಆಹಾರ ಸೇವಿಸಬೇಕು. ಆದರೆ ಕೆಲವು ಮೂಡನಂಬಿಕೆಗಳಿಂದ ಪಥ್ಯಗಳನ್ನು ಅನುಸರಿಸುವುದರಿಂದ ಪೌಷ್ಟಿಕಾಂಶದ ಕೊರತೆ ತುಂಬಾ ಕಡಿಮೆ ಆಗುತ್ತದೆ.
ಕನ್ನಡಪ್ರಭ ವಾರ್ತೆ ಶಿರಾಬಾಣಂತಿಯರು ಪೌಷ್ಟಿಕ ಆಹಾರ ಸೇವಿಸಬೇಕು. ಆದರೆ ಕೆಲವು ಮೂಡನಂಬಿಕೆಗಳಿಂದ ಪಥ್ಯಗಳನ್ನು ಅನುಸರಿಸುವುದರಿಂದ ಪೌಷ್ಟಿಕಾಂಶದ ಕೊರತೆ ತುಂಬಾ ಕಡಿಮೆ ಆಗುತ್ತದೆ. ಆದ್ದರಿಂದ ಬಾಣಂತಿಯರು ಯಾವುದೇ ಪಥ್ಯವನ್ನು ಮಾಡದೆ ಎಲ್ಲಾ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಡಿ.ಎಂ.ಗೌಡ ಹೇಳಿದರು. ನಗರದಲ್ಲಿ ವಾಣಿ ಡಫ್ ಚಿಲ್ಡ್ರನ್ ಫೌಂಡೆಷನ್ ಬೆಂಗಳೂರು ಹಾಗೂ ಶುದ್ಧಿ ಚಾರಿಟಬಲ್ ಎಜುಕೇಷನ್ ಟ್ರಸ್ಟ್ ಸಹಯೋಗದೊಂದಿಗೆ ಮ್ಯಾಕ್ಸ್ ಫುಡ್ ಫಾರ್ ಅಗ್ರಿ ಫೌಂಡೇಷನ್ ಕರ್ನಾಟಕ ಸಿಎಸ್ಆರ್ ಮುಖಾಂತರ ನವಜಾತ ಶಿಶುಗಳಿಗೆ ಪೌಷ್ಟಿಕಾಂಶವನ್ನು ಒದಗಿಸುವ ಸಲುವಾಗಿ ಬಾಣಂತಿ ತಾಯಂದಿರಿಗೆ ಉಚಿತವಾಗಿ ವುಮೆನ್ಸ್ ಸ್ಟ್ರಾಂಗ್ ಮಿಲೇಟ್ಸ್ ಆಹಾರ ವಿತರಿಸಿ ಬುಧವಾರ ಮಾತನಾಡಿದರು.
ಬಾಣಂತಿಯರು ತಮ್ಮ ಆಹಾರದಲ್ಲಿ ಧಾನ್ಯ, ಬೇಳೆ ಕಾಳು, ಹಸಿರು ಸೊಪ್ಪು ತರಕಾರಿ, ಹಣ್ಣು, ಹಾಲು ಮತ್ತು ಹಾಲಿನ ಪದಾರ್ಥ ಹೆಚ್ಚಾಗಿ ಸೇವಿಸಬೇಕು. ಚಿಕ್ಕಮಕ್ಕಳ ಬೆಳವಣಿಗೆಗೆ ಇವು ಸಹಕಾರಿಯಾಗುತ್ತದೆ. ಆದ್ದರಿಂದ ದ್ವಿದಳ ಧಾನ್ಯಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು. ತಾಯಿಯೇ ಅನಾರೋಗ್ಯದಿಂದ ಕೂಡಿದರೆ ಮಗುವಿಗೂ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಮಿಲೆಟ್ ಮಿಕ್ಸ್‌ನ್ನು ನಿತ್ಯ ಸೇವಿಸುವುದರಿಂದ ಆರೋಗ್ಯ ಪೂರ್ಣವಾಗಿ ಮಗು ಬೆಳೆಯಲು ಸಹಕಾರಿಯಾಗುತ್ತದೆ ಎಂದರು. ಶುದ್ಧಿ ಚಾರಿಟಬಲ್ ಎಜುಕೇಷನ್ ಟ್ರಸ್ಟ್ ಕೆ.ಚಂದ್ರಣ್ಣ ಮಾತನಾಡಿ, ಶಿರಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಯಾದ ತಾಯಂದಿರಿಗೆ ಪೌಷ್ಟಿಕ ಆಹಾರ ದೊರಕಲಿ ಎಂಬ ಉದ್ದೇಶದಿಂದ ವುಮೆನ್ಸ್ ಸ್ಟ್ರಾಂಗ್ ಮಿಲೇಟ್ಸ್ ಆಹಾರವನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇದನ್ನು ಬಾಣಂತಿಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ವಾಣಿ ಡಫ್ ಚಿಲ್ಡ್ರನ್ ಫೌಂಡೆಷನ್ ವ್ಯವಸ್ಥಾಪಕ ವೀರೇಶ್, ಶಶಿಧರ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ವಿನಯ್, ಮುಖ್ಯ ಶಿಕ್ಷಕ ಆರ್.ರಾಮರಾಜ್, ನಿವೃತ್ತ ಪ್ರಾಂಶುಪಾಲ ಡಿ.ಎಸ್.ಕೃಷ್ಣಮೂರ್ತಿ, ಕಿರುತೆರೆ ನಟ ನರಸಿಂಹಯ್ಯ, ಉಪನ್ಯಾಸಕ ಹೆಂದೊರೆ ಶಿವಣ್ಣ, ನವೋದಯ ಯುವ ವೇದಿಕೆಯ ಅಧ್ಯಕ್ಷ ಜಯರಾಮಕೃಷ್ಣ, ಸಕ್ಕರ ನಾಗರಾಜು, ಸೌಮ್ಯ ಹಾಜರಿದ್ದರು.