ಭೂಸ್ವಾಧೀನ ಮಾಹಿತಿ ಕೊಡದೆ ಕೃಷಿಗೆ ಅಡ್ಡಿ: ರೈತರ ಆಕ್ರೋಶ

| Published : May 29 2024, 12:51 AM IST / Updated: May 29 2024, 12:52 AM IST

ಭೂಸ್ವಾಧೀನ ಮಾಹಿತಿ ಕೊಡದೆ ಕೃಷಿಗೆ ಅಡ್ಡಿ: ರೈತರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‌ಪೇಟೆ: ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸದ ಗ್ರಾಮಗಳಲ್ಲಿ ರೈತರು ಕೃಷಿ ಚಟುವಟಿಕೆ ಮಾಡಲು ಕೆಐಎಡಿಬಿ ಅಧಿಕಾರಿಗಳು ಅಡ್ಡಿ ಮಾಡುತ್ತಿದ್ದು, ನಮ್ಮ ಪ್ರಾಣ ಬಿಡುತ್ತೇವೆ. ಆದರೆ ಫಲವತ್ತಾದ ಕೃಷಿ ಭೂಮಿಯನ್ನು ಕೆಐಎಡಿಬಿಗೆ ನೀಡುವುದಿಲ್ಲ ಎಂದು ಸೋಂಪುರ ಭಾಗದ ರೈತರು ಕೆರೆಕತ್ತಿಗನೂರು ರೈತರು ಪ್ರತಿಭಟನೆ ಮಾಡಿದರು.

ದಾಬಸ್‌ಪೇಟೆ: ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸದ ಗ್ರಾಮಗಳಲ್ಲಿ ರೈತರು ಕೃಷಿ ಚಟುವಟಿಕೆ ಮಾಡಲು ಕೆಐಎಡಿಬಿ ಅಧಿಕಾರಿಗಳು ಅಡ್ಡಿ ಮಾಡುತ್ತಿದ್ದು, ನಮ್ಮ ಪ್ರಾಣ ಬಿಡುತ್ತೇವೆ. ಆದರೆ ಫಲವತ್ತಾದ ಕೃಷಿ ಭೂಮಿಯನ್ನು ಕೆಐಎಡಿಬಿಗೆ ನೀಡುವುದಿಲ್ಲ ಎಂದು ಸೋಂಪುರ ಭಾಗದ ರೈತರು ಕೆರೆಕತ್ತಿಗನೂರು ರೈತರು ಪ್ರತಿಭಟನೆ ಮಾಡಿದರು.

ಕೆರೆಕತ್ತಿಗನೂರು ಸಮೀಪದ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಗ್ರಾಪಂ ಮಾಜಿ ಅಧ್ಯಕ್ಷ ವಿಜಯಕುಮಾರ್, ಹನುಮಂತಪುರ, ಬಿದಲೂರು, ಕೋಡಿಪಾಳ್ಯ ಗ್ರಾಮಗಳ 482 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ವಿಚಾರ ನಮಗೆ ಗೊತ್ತಿಲ್ಲ. ರೈತರಿಗೆ ಯಾವುದೇ ನೋಟಿಸ್ ಬಂದಿಲ್ಲ. ಪತ್ರಿಕಾ ಹೇಳಿಕೆ ನೀಡಿಲ್ಲ. ಆದರೆ ನಮ್ಮ ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡಲು, ತೋಟಗಾರಿಕೆ ಬೆಳೆ ಬೆಳೆಯಲು, ಸಸಿಗಳನ್ನು ನೆಡಲು ತೊಂದರೆ ನೀಡುತ್ತಿದ್ದಾರೆ. ಕೆಲ ಅಧಿಕಾರಿಗಳು, ಸ್ಥಳೀಯ ಕೆಲ ಮುಖಂಡರು ರೈತರಿಗೆ ಅನ್ಯಾಯ ಮಾಡುತ್ತಿದ್ದು ನಮ್ಮ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ವಿದೇಶಿ ಕಂಪನಿಗಳಿಗೆ ನೀಡುವ ಕೆಐಎಡಿಬಿಗೆ ನೀಡುವುದಿಲ್ಲ. ಬಂಜರು ಭೂಮಿ ಎಂದು ಭೂಸ್ವಾಧೀನ ಮಾಡುತ್ತಿದ್ದಾರೆಂಬ ಮಾತುಗಳು ಕೇಳಿಬಂದಿದ್ದು ಈ ಗ್ರಾಮಗಳ ವಾಸ್ತವ ಸತ್ಯವನ್ನು ಸರ್ಕಾರ ಗಮನಿಸಬೇಕು ಎಂದು ಆಗ್ರಹಿಸಿದರು.ಸ್ಥಳೀಯ ರೈತ ಮುಖಂಡ ನಾಗಬಸವರಾಜು ಮಾತನಾಡಿ, ತರಕಾರಿ, ಬಾಳೆ, ತೆಂಗು, ಮಾವು ಬೆಳೆಯುತ್ತಿರುವ ಕೃಷಿ ಭೂಮಿಯನ್ನು ಬಂಜರುಭೂಮಿ ಎಂದು ರೈತರನ್ನು ಬ್ರೋಕರ್‌ಗಳು, ಕಳ್ಳರೆಂದು ಕೆಲ ಸ್ಥಳೀಯ ಮುಖಂಡರು ಬಿಂಬಿಸಲು ಮುಂದಾಗಿದ್ದಾರೆ. ಅಂತಹವರ ಮಾತಿಗೆ ಮಣೆ ಹಾಕಿರುವ ಕೆಐಎಡಿಬಿ ಅಧಿಕಾರಿಗಳು ಭೂಸ್ವಾದೀನ ಪ್ರಕ್ರಿಯೆ ಆರಂಭವಾಗದ ಭೂಮಿಗೆ ಬಂದು ತೊಂದರೆ ನೀಡುತ್ತಿದ್ದಾರೆ. ಕೆಐಎಡಿಬಿ ಅಧಿಕಾರಿಗಳು ನಮ್ಮ ಭೂಮಿಯ ತಂಟೆಗೆ ಬಂದರೆ ರೈತರ ಶಕ್ತಿ ನೋಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತರು ಬ್ರೋಕರ್‌ಗಳಲ್ಲ:

ರೈತ ಸಿದ್ದಗಂಗಯ್ಯ ಮಾತನಾಡಿ, ಭೂಸ್ವಾದೀನ ಮಾಡಿದ ನಂತರ ಕೃಷಿ ಭೂಮಿಯಲ್ಲಿರುವ ಗಿಡಮರಗಳಿಗೆ ಪರಿಹಾರದ ಹಣ ನೀಡುವುದು ರೈತನ ಬ್ಯಾಂಕ್ ಖಾತೆಗೆ ಬರುತ್ತದೆ. ಬೇರೆ ಯಾವುದೇ ವ್ಯಕ್ತಿಗಳ, ಅಧಿಕಾರಿಗಳ ಖಾತೆಗೆ ಹೋಗುವುದಿಲ್ಲ, ಕೆಲ ಸ್ಥಳೀಯ ಮುಖಂಡರು ರೈತರನ್ನು ಬ್ರೋಕರ್ ಎಂದಿರುವುದು ಖಂಡನೀಯ, ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ರಾಜಭವನ ಚಲೋ:

ರೈತಸಂಘಟನೆ ತಾಲೂಕು ಅಧ್ಯಕ್ಷ ರಾಜೇಶ್ ಮಾತನಾಡಿ, ಫಲವತ್ತಾದ ಕೃಷಿ ಭೂಮಿಯನ್ನು ಭೂಸ್ವಾಧೀನ ಮಾಡದಂತೆ ಹಾಗೂ ಕೆಐಎಡಿಬಿ ಭೂಸ್ವಾದೀನದ ಬಗ್ಗೆ ರೈತರಿಗೆ, ಜನರಿಗೆ ತಿಳಿಸದೆ ಕೆಐಎಡಿಬಿ ಅಧಿಕಾರಿಗಳು ಕೃಷಿ ಚಟುವಟಿಕೆಗೆ ತೊಂದರೆ ಮಾಡುತ್ತಿರುವುದನ್ನು ನಿಲ್ಲಿಸುವಂತೆ ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ರಾಜಭವನ ಚಲೋ ಮಾಡುವ ಮೂಲಕ ರಾಜ್ಯಪಾಲರಿಗೆ ಸಮಸ್ಯೆಯ ಬಗ್ಗೆ ತಿಳಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈತಸಂಘಟನೆ ಮುಖಂಡರಾದ ಬಿದಲೂರು ಗಿರೀಶ್, ರುದ್ರೇಶ್, ಸಿದ್ದಗಂಗಯ್ಯ, ಕೆರೆಕತ್ತಿಗನೂರು ನಾಗೇಶ್, ಪ್ರಸನ್ನಕುಮಾರ್, ಕಂಬಾಳು ಗಾರೆಮನೆಮೂರ್ತಿ, ಗೆದ್ದಲಹಳ್ಳಿ ಚಿದಾನಂದ್, ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮುಖಂಡರು, ಕಾರ್ಯಕರ್ತರು, ಹನುಮಂತಪುರ, ಬಿದಲೂರು, ಕೋಡಿಪಾಳ್ಯದ ನೂರಾರು ರೈತರು ಭಾಗವಹಿಸಿದ್ದರು.ಪೋಟೋ 9 :

ಹನುಮಂತಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ವಿವಿಧ ಗ್ರಾಮದ ರೈತ ಮುಖಂಡರು, ರೈತರು ಕೆಐಎಡಿಬಿ ವಿರುದ್ಧ ಪ್ರತಿಭಟನೆ ಮಾಡಿದರು.