ಸಂಸ್ಕೃತಿಯ ಮೂಲವೇ ಕೃಷಿ: ನಳಿನ್ ಕುಮಾರ್

| Published : Jun 15 2024, 01:13 AM IST

ಸಾರಾಂಶ

‘ಸಮೃದ್ಧಿ’ ಮಹಾಮೇಳವು ಶನಿವಾರ ಹಾಗೂ ಭಾನುವಾರವು ನಡೆಯಲಿದ್ದು, ಮುಂಜಾನೆ ೯ ಗಂಟೆಯಿಂದ ಸಂಜೆ ೯ ಗಂಟೆಯವರೆಗೆ, ಸಾರ್ವಜನಿಕರಿಗೆ ಪಾಲ್ಗೊಳ್ಳಲು ಸಂಪೂರ್ಣ ಉಚಿತವಾಗಿದೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಭಾರತೀಯ ಸಂಸ್ಕೃತಿಯ ಮೂಲವೇ ಕೃಷಿ. ಕೃಷಿಯನ್ನು ಪ್ರೋತ್ಸಾಹಿಸುವ ಮೂಲಕ ಆಳ್ವಾಸ್ ನೆಲದ

ಸಂಸ್ಕೃತಿಯನ್ನು ಪೋಷಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ವಿದ್ಯಾಗಿರಿಯ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ವೇದಿಕೆಯಲ್ಲಿ ಕೃಷಿಋಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಶುಕ್ರವಾರ ನಡೆದ ಎರಡನೇ ವರ್ಷದ ‘ಸಮೃದ್ಧಿ’ -ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ ಆಹಾರೋತ್ಸವ ಮಹಾಮೇಳ ಸಮಿತಿ, ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಕೃಷಿ ಎಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ಮೇಳ ಹಮ್ಮಿಕೊಳ್ಳಲಾಗಿದ್ದು, ಜೂ. ೧೬ರ ವರೆಗೆ ನಡೆಯಲಿದೆ.

ಶಾಸಕ ರಾಜೇಶ್ ನಾಯ್ಕ ಮಾತನಾಡಿ, ಕರಾವಳಿ ಹಾಗೂ ಮಲೆನಾಡಿನಲ್ಲಿ ಕೃಷಿ ನಷ್ಟದ ಕ್ಷೇತ್ರವಲ್ಲ. ಆದರೆ, ತಂತ್ರಜ್ಞಾನ- ಆಧುನಿಕ ವಿಧಾನಗಳನ್ನು ಬಳಸಿಕೊಂಡಾಗ ಫಲ ಪಡೆಯಲು ಸಾಧ್ಯ. ಎರಡು ತಿಂಗಳು ಕೃಷಿಯಲ್ಲಿ ದುಡಿದರೆ, ವರ್ಷಕ್ಕೆ ಬೇಕಾದ ಆಹಾರ ಪಡೆಯಬಹುದು ಎಂದರು. ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಮಾತನಾಡಿ, ಆಳ್ವರು ಆರಂಭಿಸುವ ಕಾರ್ಯಗಳು ಯಶಸ್ಸಿನ ಉತ್ತುಂಗ ತಲುಪುತ್ತವೆ. ಈ ಹಲಸು ಮೇಳವೂ ಅದೇ ರೀತಿ ಯಶಸ್ವಿ ಆಗುತ್ತಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಯುವಶಕ್ತಿ ಕೇಂದ್ರೀಕೃತವಾಗಿ ನಾವು ಪರಿಸರ ಹಾಗೂ ದೇಶವನ್ನು ಮುಖ್ಯವಾಗಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುವುದು ನಮ್ಮ ಕರ್ತವ್ಯ ಎಂದರು.ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿ ಕೆ. ಶ್ರೀಪತಿ ಭಟ್, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ., ಮೂಡಬಿದಿರೆಯ ಎಂ.ಸಿ.ಎಸ್. ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ, ಕೃಷಿಕ ಮುಳಿಯ ವೆಂಕಟ ಕೃಷ್ಣ ಶರ್ಮ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್ ಸತೀಶ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಬಿ. ಧನಂಜಯ್, ಕೃಷಿ ಜಂಟಿ ನಿರ್ದೇಶಕ ಕೆಂಪೇಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಉದ್ಯಮಿ ಮೊಹಮ್ಮದ್ ಶರೀಫ್, ರಾಜವರ್ಮ ಬೈಲಂಗಡಿ, ಧನಕೀರ್ತಿ ಬಲಿಪ, ಸುಭಾಷ್ ಚೌಟ, ಪ್ರವೀಣ್ ಇದ್ದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಹಾಮೇಳಕ್ಕೆ ಭೇಟಿ ನೀಡಿದರು. ‘ಸಮೃದ್ಧಿ’ ಮಹಾಮೇಳವು ಶನಿವಾರ ಹಾಗೂ ಭಾನುವಾರವು ನಡೆಯಲಿದ್ದು, ಮುಂಜಾನೆ ೯ ಗಂಟೆಯಿಂದ ಸಂಜೆ ೯ ಗಂಟೆಯವರೆಗೆ, ಸಾರ್ವಜನಿಕರಿಗೆ ಪಾಲ್ಗೊಳ್ಳಲು ಸಂಪೂರ್ಣ ಉಚಿತವಾಗಿದೆ.