ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನ.೨೧ರಂದು ನಡೆಯಲಿದೆ. ಅಧ್ಯಕ್ಷರಾಗಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಪುತ್ರ ಸಚಿನ್ ಚಲುವರಾಯಸ್ವಾಮಿ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.ಇಂದು (ಗುರುವಾರ) ಬೆಂಗಳೂರಿನ ಕುಮಾರ ಕೃಪಾದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಶಾಸಕರು ಹಾಗೂ ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರ ಜೊತೆ ಸಭೆ ನಡೆಯಲಿದೆ. ಸಭೆಯಲ್ಲಿ ಶಾಸಕರು ಮತ್ತು ನಿರ್ದೇಶಕರ ಅಭಿಪ್ರಾಯವನ್ನು ಕೇಳಿದ ಬಳಿಕ ಅಂತಿಮವಾಗಿ ಚಲುವರಾಯಸ್ವಾಮಿ ಅವರು ನಿರ್ಧಾರ ಪ್ರಕಟಿಸಲಿದ್ದಾರೆ. ಅದಕ್ಕೆ ಎಲ್ಲರೂ ಬದ್ಧರಾಗುವ ಸಂಭವವಿದೆ ಎನ್ನಲಾಗಿದೆ.
ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವ ನಿರ್ದೇಶಕರ ಪೈಕಿ ಸಾತನೂರು ಸತೀಶ್ ನಾಲ್ಕು ಬಾರಿ ಆಯ್ಕೆಯಾಗಿದ್ದು, ಒಮ್ಮೆ ಅಧ್ಯಕ್ಷರಾಗಿಯೂ ಅಧಿಕಾರ ಅನುಭವಿಸಿದ್ದಾರೆ. ಕೆ.ಜೋಗಿಗೌಡ ಕಳೆದ ಬಾರಿ ಅಧ್ಯಕ್ಷರಾಗಿದ್ದರು. ಸತತ ಎರಡನೇ ಬಾರಿಗೆ ಬ್ಯಾಂಕ್‌ಗೆ ಆಯ್ಕೆಯಾಗಿರುವವರೂ ಇದ್ದಾರೆ. ಆದರೆ, ಆಯ್ಕೆಯಾಗಿರುವವರಲ್ಲಿ ಸಚಿವ ಚಲುವರಾಯಸ್ವಾಮಿ ಅವರ ತೀರ್ಮಾನಕ್ಕೆ ವಿರುದ್ಧವಾಗಿ ಬಂಡೇಳುವ ನಿರ್ದೇಶಕರು ಯಾರೂ ಇಲ್ಲ. ಹಾಗಾಗಿ ಸಚಿವರ ತೀರ್ಮಾನವನ್ನು ಒಪ್ಪಿಕೊಂಡು ನಡೆಯುವ ಲಕ್ಷಣಗಳು ಗೋಚರಿಸುತ್ತಿವೆ.ರಾಜಕೀಯವಾಗಿ ಎನ್.ಚಲುವರಾಯಸ್ವಾಮಿ ಅವರು ಪುತ್ರನ ಬೆಳವಣಿಗೆಗೆ ಪರೋಕ್ಷವಾಗಿ ಹೆಗಲುಕೊಟ್ಟಿದ್ದಾರೆ. ಸಚಿನ್ ಚಲುವರಾಯಸ್ವಾಮಿ ಅವರನ್ನೇ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡುವ ಬಯಕೆಯನ್ನೂ ಹೊಂದಿದ್ದಾರೆ. ಪುತ್ರನಿಗಾಗಿಯೇ ಡಿಸಿಸಿ ಬ್ಯಾಂಕ್ ಚುನಾವಣೆಯ ಹೊಣೆಗಾರಿಕೆಯನ್ನು ಹೊತ್ತು ಶಾಸಕರೆಲ್ಲರ ವಿಶ್ವಾಸದೊಂದಿಗೆ ೧೧ ಮಂದಿ ಅವಿರೋಧ ಆಯ್ಕೆಯಾಗಿರುವುದಕ್ಕೆ ಸಾಕಷ್ಟು ಶ್ರಮವಹಿಸಿದ್ದರು. ಇದಕ್ಕೆ ಶಾಸಕರೂ ಸಾಥ್ ನೀಡಿದ್ದರು.
ಸಚಿನ್ ಚಲುವರಾಯಸ್ವಾಮಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗುವುದಕ್ಕೆ ಶಾಸಕರಾದಿಯಾಗಿ ಯಾರಿಂದಲೂ ವಿರೋಧಗಳು ವ್ಯಕ್ತವಾಗುತ್ತಿಲ್ಲ. ನಿರ್ದೇಶಕರು ಸಚಿನ್‌ರನ್ನು ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ. ಕೆಲವರು ಮೊದಲ ಅವಧಿಗೆ ಸಚಿನ್ ಅವರಿಗೆ ಅಧಿಕಾರ ಕೊಟ್ಟು ಎರಡನೇ ಅವಧಿಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದಕ್ಕೆ ತೆರೆ-ಮರೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.ನಾಲ್ಕು ಬಾರಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವ ಸಾತನೂರು ಸತೀಶ್ ಅವರು ಎರಡನೇ ಅವಧಿಯಲ್ಲಿ ಅಧ್ಯಕ್ಷ ಸ್ಥಾನದ ಅವಕಾಶ ಪಡೆಯುವುದಕ್ಕೆ ಹೋರಾಟ ನಡೆಸುತ್ತಿದ್ದಾರೆ. ಇವರೊಂದಿಗೆ ಕೆ.ಆರ್.ಪೇಟೆಯ ಶೀಳನೆರೆ ಅಂಬರೀಶ್, ಮದ್ದೂರಿನ ಸಂದರ್ಶ ಕೂಡ ಇದ್ದಾರೆ ಎಂದು ಗೊತ್ತಾಗಿದೆ. ಎರಡನೇ ಅವಧಿಗೆ ಬೇರೆಯವರನ್ನು ಆಯ್ಕೆ ಮಾಡುವ ವಿಚಾರ ಚರ್ಚೆಗೆ ಬಂದಾಗ ಚಲುವರಾಯಸ್ವಾಮಿ ಜೊತೆಗೆ ಶಾಸಕರಾದ ಪಿ.ರವಿಕುಮಾರ್, ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಯಾವ ತೀರ್ಮಾನ ಕೈಗೊಳ್ಳುವರೋ ನೋಡಬೇಕಿದೆ.
ಒಮ್ಮೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಮರ್ಥವಾಗಿ ಆಡಳಿತ ನಡೆಸಿ ಬ್ಯಾಂಕ್‌ನ್ನು ಲಾಭದತ್ತ ಮುನ್ನಡೆಸಿದ್ದ ಸಾತನೂರು ಸತೀಶ್ ಮತ್ತೊಂದು ಅವಕಾಶಕ್ಕೆ ಎದುರುನೋಡುತ್ತಿದ್ದಾರೆ. ದಶಕದ ಹಿಂದೆ ಸತೀಶ್ ಅಧ್ಯಕ್ಷರಾಗಿದ್ದ ಅವಧಿಯಲ್ಲೇ ಬ್ಯಾಂಕ್‌ನ ಎರಡು ಕೋಟಿ ಹಣವನ್ನು ಲಪಟಾಯಿಸಲು ಯತ್ನಿಸಿದವರಿಂದ ಬಡ್ಡಿ ಸಹಿತ ವಸೂಲಿ ಮಾಡಿ ಬ್ಯಾಂಕ್‌ಗೆ ಆಗುತ್ತಿದ್ದ ಬಹುದೊಡ್ಡ ನಷ್ಟವನ್ನು ತಡೆದಿದ್ದರು. ಅಂದಿನ ಸತೀಶ್‌ರವರ ಸಮಯಪ್ರಜ್ಞೆ ಬ್ಯಾಂಕ್‌ನ ಮೇಲೆ ಸಾರ್ವಜನಿಕರ ವಿಶ್ವಾಸ ಹೆಚ್ಚುವಂತೆ ಮಾಡಿತ್ತು. ಹೀಗಾಗಿ ಅವು ಅಧ್ಯಕ್ಷ ಸ್ಥಾನಕ್ಕಾಗಿ ಹಾತೊರೆಯುತ್ತಿದ್ದಾರೆ.ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿರುವ ಪಿ.ಎಂ.ನರೇಂದ್ರಸ್ವಾಮಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಲು ಬಯಸಿದ್ದಾರೆ ಎನ್ನಲಾಗಿದ್ದು, ಅವರಿಗೂ ನಿರ್ದೇಶಕರ ಬೆಂಬಲ ಸಿಗುವ ಸಾಧ್ಯತೆಗಳು ನಿಚ್ಚಳವಾಗಿವೆ ಎನ್ನಲಾಗಿದೆ.
ಒಟ್ಟಾರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಟ್ಟ ಯಾರಿಗೆ ಎನ್ನುವುದು ಗುರುವಾರ ಅಂತಿಮವಾಗಲಿದೆ. ಶುಕ್ರವಾರ (ನ.೨೧) ಚುನಾವಣೆ ನಡೆಯುವ ವೇಳೆಗೆ ಯಾರೆಂಬುದು ಬಹಿರಂಗಗೊಳ್ಳಲಿದೆ.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆ ಸಂಬಂಧ ಗುರುವಾರ (ನ.೨೦) ಬೆಂಗಳೂರಿನ ಕುಮಾರ ಕೃಪಾದಲ್ಲಿ ಸಭೆ ಆಯೋಜಿಸಲಾಗಿದೆ. ಜಿಲ್ಲೆಯ ಶಾಸಕರು ಮತ್ತು ಬ್ಯಾಂಕ್ ನಿರ್ದೇಶರೊಟ್ಟಿಗೆ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.- ಸಿ.ಡಿ.ಗಂಗಾಧರ, ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ
;Resize=(128,128))
;Resize=(128,128))
;Resize=(128,128))
;Resize=(128,128))