ಕಾರ್ಮಿಕರ ರಕ್ಷಣೆಗೆ ಅಹಿಂದ ಒಕ್ಕೂಟ ಒತ್ತಾಯ

| Published : Jan 26 2025, 01:34 AM IST

ಸಾರಾಂಶ

ವಿಜಯಪುರ ಹೊರವಲಯದ ಇಟ್ಟಿಗೆ ಭಟ್ಟಿಯಲ್ಲಿ ಮಾರಣಾಂತಿಕ ಹಲ್ಲೆಗೊಳಗಾದ ಕೂಲಿ ಕಾರ್ಮಿಕರ ಪರವಾಗಿ ಸ್ಥಳೀಯ ಅಹಿಂದ ಒಕ್ಕೂಟ ಮುಖಂಡರು ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ವಿಜಯಪುರ ಹೊರವಲಯದ ಇಟ್ಟಿಗೆ ಭಟ್ಟಿಯಲ್ಲಿ ಮಾರಣಾಂತಿಕ ಹಲ್ಲೆಗೊಳಗಾದ ಕೂಲಿ ಕಾರ್ಮಿಕರ ಪರವಾಗಿ ಸ್ಥಳೀಯ ಅಹಿಂದ ಒಕ್ಕೂಟ ಮುಖಂಡರು ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ಮಹೇಶ ಹುಗ್ಗಿ ಮಾತನಾಡಿದ ಅವರು, ಅಮಾಯಕ ಕಾಮಿಕರ ಮೇಲೆ ದೌರ್ಜನ್ಯ ಎಸಗಿರುವ ಇಟ್ಟಿಗೆ ಭಟ್ಟಿ ಮಾಲೀಕನನ್ನು ಗಡಿಪಾರು ಮಾಡಿ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹಲ್ಲೆಗೊಳಗಾದ ದಲಿತ ಕಾರ್ಮಿಕರಿಗೆ ಸೂಕ್ತ ಚಿಕಿತ್ಸೆ, ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.ಸ್ಥಳೀಯ ಯುವ ಮುಖಂಡ ಕುಮಾರ ರೊಡ್ಡಪ್ಪನವರ ಮಾತನಾಡಿ, ಹಲ್ಲೆ ನಡೆಸಿದವರು ಯಾವುದೇ ಧರ್ಮ, ಜಾತಿಗೆ ಸೇರಿದರೂ ಕೂಡ ಅವರು ಮಾಡಿರುವ ಕೃತ್ಯ ಖಂಡನೀಯ. ಮನುಷ್ಯತ್ವವಿರುವ ಯಾರೇ ಆಗಲಿ ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳುವುದಿಲ್ಲ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ನೊಂದ ಕಾರ್ಮಿಕರಿಗೆ ಸೂಕ್ತ ನ್ಯಾಯ ಒದಗಸಿಬೇಕು ಎಂದು ಒತ್ತಾಯಿಸಿದರು.

ಮುಖಂಡ ಗೋಪಾಲ ಲಮಾಣಿ ಮಾತನಾಡಿ, ವಿಜಯಪುರ ಜಿಲ್ಲೆಯ ಗಾಂಧಿನಗರ ಬಳಿ ಇರುವ ಇಟ್ಟಿಗೆ ಭಟ್ಟಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೂವರು ಅಮಾಯಕ ಕಾರ್ಮಿಕರಾದ ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ ಮಾದರ ಎಂಬ ಕಾರ್ಮಿಕರು ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗಿ ವಾಪಸ್ ಬರುವುದು ವಿಳಂಬವಾದ ಹಿನ್ನೆಲೆಯಲ್ಲಿ ಮಾಲೀಕ ಕೋಪಗೊಂಡು ಕಾರ್ಮಿಕರ ಕಾಲುಗಳನ್ನು ಕಟ್ಟಿ ಹಾಕಿ ಪೈಪ್‌ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ದೌರ್ಜನ್ಯ ಮಾಡಿದ್ದು ಖಂಡನೀಯ ಅರೋಪಿಗಳಿಗೆ ಕಾನೂನು ಶಿಕ್ಷೆ ವಿಧಿಸಬೇಕು ಎಂದರು.

ಈ ವೇಳೆ ಶಂಕೆಪ್ಪ ಪೂಜಾರಿ, ಭೀಮನಗೌಡ ಪಾಟೀಲ, ಗೋವಿಂದಪ್ಪ ಕೌಲಗಿ, ಮಹೇಶ ಹುಗ್ಗಿ, ಸುರೇಶ ಪೂಜಾರಿ, ರವಿ ರೊಡ್ಡಪ್ಪನವರ, ಕುಮಾರ ಕಾಳಮ್ಮನವರ, ಅಶೋಕ ದೊಡಮನಿ, ರಂಗನಾಥ ಚಿಪ್ಪಲಕಟ್ಟಿ, ಗೋಪಾಲ ಲಮಾಣಿ, ಮಹೇಶ ಪೂಜಾರಿ, ಅಬ್ದುಲ್ ರೆಹಮಾನ್ ತೊರಗಲ್, ಸಂಜು ಬೀದರಿ, ಅನೇಕ ಅಹಿಂದ ಮುಖಂಡರು ಇದ್ದರು.