ಸಾರಾಂಶ
ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ದುರಂತ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರಂತದ ನೆನಪು ಮರುಕಳಿಸುವಂತೆ ಮಾಡಿದೆ.
ಮಂಗಳೂರು : ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದು ಗುರುವಾರ ಮಧ್ಯಾಹ್ನ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದು ಪತನಗೊಂಡಿರುವ ಘಟನೆ ನಡೆದಿದೆ. ಇದರ ಬೆನ್ನಲ್ಲಿಯೇ ಇಡೀ ದೇಶವನ್ನು ತಲ್ಲಣಗೊಳಿಸಿದ್ದ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರಂತದ ನೆನಪು ಮರುಕಳಿಸುವಂತೆ ಮಾಡಿದೆ.
ಮಂಗಳೂರು ವಿಮಾನ ದುರಂತಕ್ಕೆ ಇದೀಗ 15 ವರ್ಷವಾಗಿದೆ. 2010ರ ಮೇ 22ರಂದು ಈ ಭೀಕರ ದುರಂತ ಸಂಭವಿಸಿ ವಿಮಾನದಲ್ಲಿದ್ದ 158 ಮಂದಿ ಮೃತಪಟ್ಟು ಕೇವಲ 8 ಮಂದಿ ಮಾತ್ರ ಬದುಕಿ ಉಳಿದಿದ್ದರು. ಈ ದುರಂತದಲ್ಲಿ ಮೃತಪಟ್ಟವರಲ್ಲಿ ಅನೇಕರ ಮೃತದೇಹದ ಗುರುತು ಪತ್ತೆಯಾಗದೆ ಉಳಿದಿದ್ದವು. ಅವುಗಳನ್ನು ಕೂಳೂರಿನ ಫಲ್ಗುಣಿ ನದಿ ಕಿನಾರೆಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಅದೇ ಜಾಗದಲ್ಲಿ ಸಂತ್ರಸ್ತರ ನೆನಪಿನ ಸ್ಮರಣಾರ್ಥವಾಗಿ ದೊಡ್ಡ ಪಾರ್ಕ್ ನಿರ್ಮಿಸಲಾಗಿದೆ. ಈ ದರ್ಘಟನೆಯ ಸ್ಮರಣಾರ್ಥವಾಗಿ ಪ್ರತಿ ವರ್ಷ ಮೇ 22ರಂದು ಜಿಲ್ಲಾಡಳಿತ ವತಿಯಿಂದ ಉದ್ಯಾನದಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿಕೆ ಮಾಡಲಾಗುತ್ತದೆ.
ಅಂದು ಏನಾಗಿತ್ತು?
2010ರ ಮೇ 22ರಂದು ಬೆಳಗ್ಗೆ 6.20ರ ಸಮಯ. ದುಬೈನಿಂದ ಮಂಗಳೂರು ಏರ್ ಪೋರ್ಟ್‌ಗೆ ಆಗಮಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆ ನಿಯಂತ್ರಣಕ್ಕೆ ಸಿಗದೆ ಕೆಂಜಾರಿನ ಗುಡ್ಡದಿಂದ ಕೆಳಜಾರಿ ಅಪಘಾತಕ್ಕೀಡಾಗಿತ್ತು. ಕೂಡಲೇ ವಿಮಾನ ಪೂರ್ತಿ ಅಗ್ನಿ ಆವರಿಸಿದ್ದು, ಅದರಲ್ಲಿದ್ದ 158 ಮಂದಿ ಸಜೀವ ದಹನವಾಗಿದ್ದರು. ಅಂದರೆ ಈ ವಿಮಾನದಲ್ಲಿ 6 ಶಿಶುಗಳು, 19 ಮಕ್ಕಳು, 6 ವಿಮಾನ ಸಿಬ್ಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣ ಮಾಡುತ್ತಿದ್ದರು. ವಿಮಾನದ ಭೀಕರ ಅಪಘಾತದ ನಡುವೆಯೂ ಅದೃಷ್ಟವಶಾತ್ ಕೇವಲ 8 ಮಂದಿ ಸಾವನ್ನು ಜಯಿಸಿ ಬದುಕಿ ಬಂದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಈಗಲೂ ನಮ್ಮ ನಡುವೆ ಜೀವನ ನಡೆಸುತ್ತಿದ್ದಾರೆ. ಆದರೆ ಉಳಿದ ಪ್ರಯಾಣಿಕರು ಬೆಳಗಿನ ಜಾವ ನಿದ್ರೆಯ ಮಂಪರಿನಿಂದ ಎದ್ದು, ಇನ್ನೇನು ತಾವು ಇಳಿಯುವ ಸ್ಥಳ ಬಂತೆಂದು ಇಳಿಯಲು ಸಿದ್ಧರಾಗುತ್ತಿದ್ದಾಗ, ವಿಮಾನ ಅಪಘಾತಕ್ಕೆ ಸಿಲುಕಿ ಕ್ಷಣ ಮಾತ್ರದಲ್ಲಿಯೇ ಸುಟ್ಟು ಕರಕಲಾಗಿದ್ದರು.ಪರಿಹಾರಕ್ಕಾಗಿ ಹೋರಾಟ:
ಇನ್ನು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಒದಗಿಸುವುದಕ್ಕಾಗಿ ಕಂಪೆನಿಯು ಮುಂಬೈನ ಕಾನೂನು ತಜ್ಞ ಎಚ್.ಡಿ. ನಾನಾವತಿ ನೇತೃತ್ವದ ಸಂಸ್ಥೆಯನ್ನು ನೇಮಿಸಿತ್ತು. ಈ ಸಂಸ್ಥೆ ಸುಮಾರು 147 ಕುಟುಂಬಗಳಿಗೆ ಪರಿಹಾರ ಒದಗಿಸಿರುವುದಾಗಿ ಹೇಳಿಕೊಂಡಿತ್ತು. ಇದರಲ್ಲಿ ಗರಿಷ್ಠ ಎಂದರೆ 7.7 ಕೋಟಿ ರು. ಪಡೆದವರೂ ಇದ್ದರು. ಆದರೆ ಪರಿಹಾರದ ಮೊತ್ತದ ಬಗ್ಗೆ ಅನೇಕ ಕುಟುಂಬದವರು ಆಕ್ಷೇಪವೆತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಸುಮಾರು 45 ಕುಟುಂಬದವರು ಕಾನೂನು ಹೋರಾಟವನ್ನು ಮುಂದುವರೆಸಿದ್ದರು. ಈ ನಡುವೆ ಏರ್ ಇಂಡಿಯಾವನ್ನು ಟಾಟಾ ಸಮೂಹ ಸಂಸ್ಥೆ ಖರೀದಿಸಿತ್ತು.

;Resize=(128,128))
;Resize=(128,128))
;Resize=(128,128))
;Resize=(128,128))