ಸಾರಾಂಶ
ಹುಬ್ಬಳ್ಳಿ:
ನೇರ ವೇತನ ಪಾವತಿ, ನೇರ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪೌರಕಾರ್ಮಿಕರ ಪಾಲಿಕೆ ಎದುರಿಗೆ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಮಳೆಯನ್ನು ಲೆಕ್ಕಿಸದೇ ಧರಣಿ ನಡೆಸಲಾಗುತ್ತಿದೆ.ಕೆಲಸ ಬಹಿಷ್ಕರಿಸಿ ಗುರುವಾರ ಬೆಳಗ್ಗೆಯಿಂದ ಧರಣಿ ನಡೆಸಲಾಗುತ್ತಿದೆ. ಪೌರಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ದುಡಿಸಿಕೊಳ್ಳಬಾರದು. ನೇರ ನೇಮಕಾತಿ ಮಾಡಿಕೊಳ್ಳಬೇಕು. ಇಲ್ಲವೇ ವೇತನವನ್ನಾದರೂ ನೇರವಾಗಿ ಪಾವತಿ ಮಾಡಬೇಕು ಎಂಬ 2017ರಲ್ಲೇ ಆದೇಶವಿದೆ. ಆದರೂ ಮಹಾನಗರ ಪಾಲಿಕೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. 799 ಜನ ಹೊರಗುತ್ತಿಗೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ನೇರ ವೇತನ ಪಾವತಿಯಡಿ 1001 ಜನ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
9 ತಿಂಗಳ ಹಿಂದೆ ಗುತ್ತಿಗೆ ರದ್ದು ಮಾಡಿ ಮೈಸೂರು ಮಾದರಿಯಲ್ಲಿ ನೇರ ವೇತನ ಪಾವತಿಯಡಿ 799 ಜನರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಪಾಲಿಕೆ ತಿಳಿಸಿತ್ತು. ಈ ಸಂಬಂಧ ಸಾಮಾನ್ಯಸಭೆಯಲ್ಲೂ ಠರಾವು ಪಾಸ್ ಮಾಡಲಾಗಿದೆ. ಆದರೂ ಈ ವರೆಗೂ ಕ್ರಮವಾಗಿಲ್ಲ ಎಂದು ದೂರಿದರು.ಸಂಧಾನ ವಿಫಲ:
ಈ ನಡುವೆ ಮೇಯರ್ ರಾಮಪ್ಪ ಬಡಿಗೇರ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು. ಧರಣಿ ಹಿಂದಕ್ಕೆ ಪಡೆಯಿರಿ ಎಂದು ಪ್ರತಿಭಟನಾಕಾರರೊಂದಿಗೆ ನಡೆಸಿದ ಮಾತುಕತೆಯೂ ವಿಫಲವಾಗಿದೆ. ಲಿಖಿತವಾಗಿ ಭರವಸೆ ಕೊಟ್ಟರೆ ಮಾತ್ರ ಧರಣಿ ಹಿಂಪಡೆಯಲಾಗುವುದು ಎಂದು ತಿಳಿಸಿ ಧರಣಿ ಮುಂದುವರಿಸಿದರು.ಮಳೆಯಲ್ಲೇ ಧರಣಿ:ಮಧ್ಯಾಹ್ನ ನಗರದಲ್ಲಿ ಕೊಂಚ ಬಿಸಿಲಿತ್ತು. ಆದರೆ ಸಂಜೆ ವೇಳೆಗೆ ಮಳೆ ರಭಸತೆ ಪಡೆಯಿತು. ಆದರೆ ಧರಣಿ ನಡೆಸುತ್ತಿದ್ದ ಪೌರಕಾರ್ಮಿಕರು ಮಾತ್ರ ಜಾಗೆ ಬಿಟ್ಟು ಕದಲಿಲ್ಲ. ಪಾಲಿಕೆ ಎದುರಿನ ಟೆಂಟ್‌ನಲ್ಲೇ ಮಳೆಯನ್ನೂ ಲೆಕ್ಕಿಸದೇ ಧರಣಿ ಮುಂದುವರಿಸಿದರು. ರಾತ್ರಿ ಕೂಡ ಮಳೆಯಲ್ಲೇ ನಡುಗುತ್ತಾ ಅಲ್ಲೇ ಧರಣಿ ಮುಂದುವರಿಸಿದರು. ಶುಕ್ರವಾರ ಕೂಡ ಧರಣಿ ಮುಂದುವರಿಯಲಿದೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲದು ಎಂದು ಹೋರಾಟಗಾರರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘದ ಧಾರವಾಡ ಜಿಲ್ಲಾಧ್ಯಕ್ಷ ಡಾ. ವಿಜಯ ಗುಂಟ್ರಾಳ, ಗಾಳೆಪ್ಪಾ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಸೋಮು ಮೊರಬದ, ಯಲ್ಲವ್ವ ನಾರಾಯಣಪುರ, ಲಕ್ಷ್ಮಿ ಬೇತಾಪಲ್ಲಿ, ಶರಣಪ್ಪ ಅಮರಾವತಿ, ಕನಕಪ್ಪ ಕೋಟಬಾಗಿ, ಪುಲಯ್ಯಾ ಚಿಂಚಗೋಳ, ಭಾಗ್ಯಲಕ್ಷ್ಮಿ ಮಾದರ, ಯಲ್ಲವ್ವ ದೇವರಗುಡಿಹಾಳ, ಪ್ರೇಮಾ ಕಣೆಕಲ್, ಅನಿತಾ ಇನಗೊಂಡ ಸೇರಿದಂತೆ ಹಲವರಿದ್ದರು.