- ವಿನ್ನರ್ಸ್ ಐಎಎಸ್, ಕೆಎಎಸ್ ತರಬೇತಿ ಕೇಂದ್ರ, ಪ್ರಥಮ ದರ್ಜೆ ಕಾಲೇಜು ಕಟ್ಟಡ ಉದ್ಘಾಟನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಕೃತಕ ಬುದ್ಧಿಮತ್ತೆಯಿಂದ (ಎಐ) ಮನುಷ್ಯ ಬುದ್ಧಿವಂತಿಕೆಯನ್ನು ಸರಿಗಟ್ಟಲು ಸಾಧ್ಯವಿಲ್ಲ. ಕೃತಕ ಬುದ್ಧಿಮತ್ತೆಗೆ ಒಳಗೆ ಕುಟಿಲ, ಹೊರಗೆ ವಿನಯವಾಗಿರುವ ಮನುಷ್ಯನಂತಹ ದುರ್ಬುದ್ಧಿ ಇಲ್ಲ ಎಂದು ತರಳಬಾಳು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.ವಿನ್ನರ್ಸ್ ಐಎಎಸ್ ಕೆಎಎಸ್ ತರಬೇತಿ ಕೇಂದ್ರ ಹಾಗೂ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆಯನ್ನು ಸೋಮವಾರ ನೇರವೇರಿಸಿ, ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆರ್ಶಿವಚನ ನೀಡಿದರು.
ತಾವು ಒಮ್ಮೆ ಎ.ಐ.ನೊಂದಿಗೆ ಸಂವಾದ, ಒಂದು ಪ್ರಯೋಗ ಮಾಡಲು ಇಚ್ಚಿಸಿ ಬಸವಣ್ಣನವರ ಒಂದು ವಚನವನ್ನು ಎ.ಐ.ಗೆ ಭಾಷಾಂತರ ಮಾಡಲು ಹೇಳಿದ್ದೆವು. ಅದು ನಮಗೆ 4 ಅನುವಾದಗಳನ್ನು ನೀಡಿತು. ಆಗ ಆ 4ರಲ್ಲಿ ಯಾವುದು ಹೆಚ್ಚು ಅರ್ಥಪೂರ್ಣವಾದುದು ಎಂದು ಕೇಳಿದಾಗ 4ನೇಯದು ಎಂದು ಉತ್ತರಿಸಿತು. 4ನೆಯದನ್ನು ಯಾರು ಭಾಷಾಂತರ ಮಾಡಿದರೆಂಬುದು ನಿನಗೆ ಗೊತ್ತೆ? ಎಂದು ಕೇಳಿದಾಗ ಅದು ನಿಮ್ಮದೇ ಭಾಷಾಂತರ ಎಂದು ಒಪ್ಪಿಕೊಂಡು ನಮ್ಮನ್ನು ಅಭಿನಂದಿಸಿತು ಎಂದರು.
ಕೇಂದ್ರ ತೆರಿಗೆ ಇಲಾಖೆಯ ಉಪ ಆಯುಕ್ತ ಪಿ.ವಿ. ಭೈರಪ್ಪ ಮಾತನಾಡಿ, ವಿನ್ನರ್ಸ್ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾದ ಕಾಲೇಜನ್ನು ದಾವಣಗೆರೆಯಲ್ಲಿ ತೆರೆದಿರುವುದು ಮುಂದಿನ ಪೀಳಿಗೆಯ ಭವಿಷ್ಯಕ್ಕೆ ದಾರಿದೀಪವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ.ಸೋಮಶೇಖರ್ ಮಾತನಾಡಿ, ತಮ್ಮ ಜೀವನದಲ್ಲಿ ತಾವು ವಿವಿಧ ಹುದ್ದೆಗಳಿಗೆ ಅಧಿಕಾರಿಯಾಗಿ ಆಯ್ಕೆಯಾದ ಪರಿಶ್ರಮವನ್ನು ಹಾಗೂ ಸ್ವಯಂಪ್ರೇರಿತರಾಗಿ ಆತ್ಮವಿಶ್ವಾಸದಿಂದ ವಿನ್ನರ್ಸ್ ಸಂಸ್ಥೆಯ ಸಹಾಯ ಪಡೆದು ಯಶಸ್ಸು ಗಳಿಸಿ ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.ವಿನ್ನರ್ಸ್ ಸಂಸ್ಥೆಯಲ್ಲಿ ದಶಕಗಳ ಕಾಲ ಕಾರ್ಯನಿರ್ವಹಿಸಿದ ಸಂಯೋಜಕ ಎಚ್.ಜಿ. ಗುರುರಾಜ್ ಅವರಿಗೆ ವಿನ್ನರ್ಸ್ ಸೇವಾ ಪ್ರಶಸ್ತಿಯನ್ನು ₹1,00,000 ನಗದು ಹಾಗೂ ಫಲಕದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ತಜ್ಞ ಡಾ. ಎಚ್.ವಿ. ವಾಮದೇವಪ್ಪ ವಹಿಸಿದ್ದರು. ಕಬ್ಬೂರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಚಂದ್ರಶೇಖರಪ್ಪ, ವಿನ್ನರ್ಸ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ.ಶಿವರಾಜ ಕಬ್ಬೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪರಮೇಶ್ವರಪ್ಪ, ಕದಳಿ ವೇದಿಕೆಯ ಸದಸ್ಯರು, ವಿವಿಧ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಡಾ. ಎನ್.ಎಸ್. ಪ್ರಶಾಂತ್ ನಿರೂಪಿಸಿ, ಡಾ. ಎಂ.ಆರ್. ಜಗದೀಶ್ ವಂದಿಸಿದರು.- - -
-6ಕೆಡಿವಿಜಿ55:ದಾವಣಗೆರೆಯಲ್ಲಿ ವಿನ್ನರ್ಸ್ ಐಎಎಸ್ ಕೆಎಎಸ್ ತರಬೇತಿ ಕೇಂದ್ರ ಹಾಗೂ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ ಉದ್ಘಾಟಿಸಿದರು.