ಪತ್ರಕರ್ತರ ಭವನ ನಿರ್ಮಾಣಕ್ಕೆ ನಿವೇಶನ ಹಾಗೂ ಪತ್ರಕರ್ತರಿಗೆ ನಿವೇಶನಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ. ಪಟ್ಟಣದಲ್ಲಿ ಹಲವು ನಿವೇಶನಗಳನ್ನು ಪರಿಶೀಲನೆ ಮಾಡಲಾಗಿದೆ. ಭವನ ನಿರ್ಮಾಣಕ್ಕೆ ನಿವೇಶನ ಗುರುತಿಸುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡಲಾಗುವುದು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಸಂವಿಧಾನ ನಾಲ್ಕನೇ ಅಂಗದಲ್ಲಿ ಕೆಲಸ ಮಾಡುತ್ತಿರುವ ಮಾಧ್ಯಮಗಳು ಸಾರ್ವಜನಿಕವಾಗಿ ಕೆಲಸ ಮಾಡುವ ಜನಪ್ರತಿನಿಧಿಗಳು, ಅಧಿಕಾರಿಗಳ ಸರಿ ತಪ್ಪುಗಳನ್ನು ತಿದ್ದಿ ಎಚ್ಚರಿಸುವ ಕೆಲಸ ಮಾಡುತ್ತಿವೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಕರ್ತರ ದಿನಾಚರಣೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ತಮ್ಮ ಜೀವದ ಅಂಗು ತೊರೆದು ಸಾಮಾಜಿಕ ಕಳಕಳಿಯಿಂದ ವರದಿಗಾರಿಕೆ ಮಾಡಿ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ, ಎಐ ಸಹ ದೊಡ್ಡ ಸವಾಲಾಗಿದೆ ಎಂದರು.ಪತ್ರಕರ್ತರ ಭವನ ನಿರ್ಮಾಣಕ್ಕೆ ನಿವೇಶನ ಹಾಗೂ ಪತ್ರಕರ್ತರಿಗೆ ನಿವೇಶನಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ. ಪಟ್ಟಣದಲ್ಲಿ ಹಲವು ನಿವೇಶನಗಳನ್ನು ಪರಿಶೀಲನೆ ಮಾಡಲಾಗಿದೆ. ಭವನ ನಿರ್ಮಾಣಕ್ಕೆ ನಿವೇಶನ ಗುರುತಿಸುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಶಾಸಕ, ಸಂಸದ ಹಾಗೂ ಸಚಿವನಾಗಿ ನಾನು ಸಾರ್ವಜನಿಕರ ಸೇವೆ, ಅಭಿವೃದ್ಧಿ ಕಾರ್ಯಕ್ರಮ ನೀಡುವಲ್ಲಿ ಮಾಧ್ಯಮ ಮಿತ್ರರು ನನಗೆ ಸಾಕಷ್ಟು ಸಲಹೆ ಸಹಕಾರ ನೀಡಿದ್ದಾರೆ. ಪತ್ರಕರ್ತರ ಶ್ರೇಯೋಭಿವೃದ್ಧಿಗೆ ನಾನು ಸದಾ ಸಹಕಾರಿಯಾಗಿ ನಿಲ್ಲುತ್ತೇನೆ. ಪತ್ರಕರ್ತರ ಸಂಘದ ಭವನ ನಿರ್ಮಾಣಕ್ಕೆ ಹಾಗೂ ಪತ್ರಕರ್ತರಿಗೆ ನಿವೇಶನ ವಿಚಾರದಲ್ಲೂ ನಾನು ಸಂಘದ ಒಬ್ಬ ಸದಸ್ಯನಂತೆ ಅವರ ಜೊತೆ ನಿಲ್ಲುತ್ತೇನೆ ಎಂದರು.ಮನುಷ್ಯ ನಡೆಯುವಾಗ ಕಾಲು ಎಡವುದು ಸಹಜ. ಅದನ್ನು ಸರಿಪಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು. ಮಾಧ್ಯಮಗಳು ಇಲ್ಲದಿದ್ದರೆ ಸಮಾಜ ಅಧೋಗತಿಗೆ ತಲುಪುತ್ತಿತ್ತು. ಸಮಾಜವನ್ನು ತಿದ್ದಿ ಸರಿದಾರಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ಪತ್ರಿಕೋದ್ಯಮ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಇದೇ ವೇಳೆ ಎಚ್.ಕೆ.ವೀರಣ್ಣಗೌಡ ದತ್ತಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಬಿ.ಎಸ್.ಜಯರಾಮು, ಪತ್ರಕರ್ತ, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಪತ್ರಕರ್ತ ಮಂಜುನಾಥ್ (ಭಾಸ್ಕರ್ ) ಅವರನ್ನು ಅಭಿನಂದಿಸಲಾಯಿತು.ಸಮಾರಂಭದಲ್ಲಿ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಚನ್ನಮಾದೇಗೌಡ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಮು, ಜಿಲ್ಲಾಧ್ಯಕ್ಷ ರಾಘವೇಂದ್ರ, ಉಪಾಧ್ಯಕ್ಷರಾದ ಕೆ.ಸಿ.ಮಂಜುನಾಥ್, ಸಿ.ಎ.ಲೋಕೇಶ್, ರವಿ ಸಾವಂದಿಪುರ, ಪ್ರಧಾನ ಕಾರ್ಯದರ್ಶಿ ಶಿಶಧರ್ ಕಾಡುಕೊತ್ತನಹಳ್ಳಿ, ಕಾರ್ಯದರ್ಶಿಗಳಾದ ನಾಗೇಗೌಡ, ಶಿವರಾಜು, ನಿರ್ದೇಶಕ ಕುಮಾರಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಟಿ.ವಿ.ಅನಿಲ್, ಉಪಾಧ್ಯಕ್ಷ ಎಸ್.ನಾಗಸುಂದರ್, ಖಜಾಂಚಿ ಮಂಜುನಾಥ್, ಕಾರ್ಯದರ್ಶಿ ಎಸ್.ರವಿಕುಮಾರ್ ಸೇರಿದಂತೆ ಸದಸ್ಯರು ಇದ್ದರು.