ವಿಶ್ವದ ವಿದ್ಯಮಾನ ಬದಲಿಸುವ ಎಐ ತಂತ್ರಜ್ಞಾನ

| Published : May 18 2024, 12:35 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಎಐ ತಂತ್ರಜ್ಞಾನ ಮುಂದಿನ ನಾಲ್ಕೈದು ವರ್ಷಗಳಲ್ಲಿ ವಿಶ್ವದ ವಿದ್ಯಾಮಾನಗಳನ್ನು ಬದಲಿಸಲಿದೆ ಎಂದು ಆರ್‌ಸಿಯು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಎಐ ತಂತ್ರಜ್ಞಾನ ಮುಂದಿನ ನಾಲ್ಕೈದು ವರ್ಷಗಳಲ್ಲಿ ವಿಶ್ವದ ವಿದ್ಯಾಮಾನಗಳನ್ನು ಬದಲಿಸಲಿದೆ ಎಂದು ಆರ್‌ಸಿಯು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಅಭಿಪ್ರಾಯಪಟ್ಟರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಶುಕ್ರವಾರ ಆಯೋಜಿಸಿದ್ದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಜ್ಞಾನವನ್ನು ಪ್ರಸರಣ ಮಾಡುವಲ್ಲಿ ಮುಂದಿನ ದಿನಗಳಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸಲಿದೆ ಎಂದರು.ನಾಡಿನ ಉನ್ನತ ಶಿಕ್ಷಣ ಕ್ಷೇತ್ರ ಈ ಬಗ್ಗೆ ತೀವ್ರ ಕುತೂಹಲದಿಂದ ಕಾರ್ಯೋನ್ಮುಖವಾಗಿದೆ. ಎಲ್ಲ ಶೈಕ್ಷಣಿಕ ಸಂಸ್ಥೆಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ವಿಷಯವನ್ನು ನಮ್ಮ ಶೈಕ್ಷಣಿಕ ಪಠ್ಯಗಳಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಈ ಸಂಗತಿಯು ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ಪ್ರತಿಯೊಬ್ಬರಿಗೂ ತಿಳಿಯಬೇಕಾಗಿದೆ. ಈ ಕುರಿತು ಚರ್ಚಿಸಲು ಎಐ ತಂತ್ರಜ್ಞಾನ, ಸಾಂಸ್ಥಿಕ ವಿದ್ಯಮಾನಗಳು ಹಾಗೂ ಕೌಶಾಲ್ಯಾಧಾರಿತ ಜ್ಞಾನ ಶಿಸ್ತುಗಳನ್ನು ಪದವಿ ಹಂತದಲ್ಲಿ ಬೋಧಿಸಬೇಕಾದ ಅನಿವಾರ್ಯತೆ ಇದೆ ಎಂಬ ಮಾಹಿತಿ ನೀಡಿದರು.ಜ್ಞಾನ ಪ್ರಸರಣದಲ್ಲಿ ಕೃತಕ ತಂತ್ರಜ್ಞಾನದ ಪಾತ್ರವನ್ನು ನಿರ್ಧರಿಸುವ ಅಂಶಗಳ ಕುರಿತು ಬೆಳಗಾವಿಯ ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ ಪೋತಪ್ರಗಾಧ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಉಪನ್ಯಾಸ ನೀಡಿದರು.ಮೈಸೂರಿನ ಟ್ಯಾಕ್ ಸಂಸ್ಥೆಯ ನಿರ್ದೇಶಕ ಡಿ.ಎಸ್.ಮಂಜುನಾಥ ಅವರು ಸಾಂಸ್ಥಿಕ ನಿರ್ವಹಣೆ ಮತ್ತು ಹಣಕಾಸಿನ ಸಂಚಯ ಕುರಿತು ಉಪನ್ಯಾಸ ನೀಡಿದರು. ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯನ್ನು ರಾಣಿ ಚನ್ನಮ್ಮ ಸಂಯೋಜಿತ ಮಹಾವಿದ್ಯಾಲಯಗಳಲ್ಲಿ ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಕೆಲವು ನೋಟಗಳು ಕುರಿತು ಬೆಂಗಳೂರಿನ ಎಆರ್‌ಕೆ ವೈಡ್ ಇಂಡಸ್ಟ್ರೀಸ್‌ ನಿರ್ದೇಶಕ ಸೂರಜ್.ಪಿ ನಾಡಿಗ ಅವರು ಉಪನ್ಯಾಸ ನೀಡಿದರು. ಕುಲಸಚಿವರಾದ ರಾಜಶ್ರೀ ಜೈನಾಪೂರ, ಪ್ರೊ.ರವೀಂದ್ರನಾಥ ಕದಂ, ಹಣಕಾಸು ಅಧಿಕಾರಿ ಪ್ರೊ.ಎಸ್.ಬಿ.ಆಕಾಶ, ಸಿಡಿಸಿ ನಿರ್ದೇಶಕ ಪ್ರೊ.ಎಸ್.ಎಂ.ಗಂಗಾಧರಯ್ಯ, ಉಪಕುಲಸಚಿವ ಡಾ.ಡಿ.ಕೆ.ಕಾಂಬಳೆ ಮೊದಲಾದವರು ಉಪಸ್ಥಿತರಿದ್ದರು.