ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಔಷಧ ಅನ್ವೇಷಣೆ ವಲಯಕ್ಕೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬೆಳವಣಿಗೆಯಿಂದ ವೈದ್ಯಕೀಯ ಲೋಕಕ್ಕೆ ವರದಾನವಾಗಿದೆ ಎಂದು ಆದಿಚುಂಚನಗಿರಿ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರು ಮತ್ತು ಡೀನ್ ಡಾ.ಪ್ರಕಾಶ್ ಗೌಡನವರ್‌ರವರು ಅಭಿಪ್ರಾಯಪಟ್ಟಿದ್ದಾರೆ.ನಗರದ ಶಿರಾರಸ್ತೆಯ ಶ್ರೀದೇವಿ ಔಷಧ ವಿಜ್ಞಾನ ಮಹಾವಿದ್ಯಾಲಯ ವತಿಯಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಹಾಗೂ ಔಷಧ ಇಲಾಖೆಗಳ ಸಹಯೋಗದೊಂದಿಗೆ ಕರ್ನಾಟಕದಲ್ಲಿ ಔಷಧ ಆವಿಷ್ಕಾರದಲ್ಲಿ ‘ಎ.ಐ. ತಂತ್ರಜ್ಞಾನ ಮತ್ತು ಔಷಧ ಅನ್ವೇಷಣೆಯ ಅವಕಾಶಗಳು ಹಾಗೂ ತಂತ್ರಗಳ ಸವಾಲು’ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಔಷಧ ತಯಾರಿಕಾ ವಲಯದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಬಹಳ ಕಡಿಮೆ ಅವಧಿಯಲ್ಲಿ ಹೊಸ ಔಷಧಗಳನ್ನು ತಯಾರಿಸಬಹುದಾಗಿದೆ. ಭಾರತ ಸೇರಿದಂತೆ ಜಗತ್ತಿನಾದ್ಯಂತ ಕೃತಕ ಬುದ್ಧಿ ಮತ್ತು ನಿಯಂತ್ರಣ ಕಾನೂನುಗಳನ್ನು ಜಾರಿಗೊಳಿಸಬೇಕಿದೆ. ಹೊಸ ಔಷಧಿಗಳನ್ನು ಬಹಳ ಬೇಗ ತಯಾರಿಸಬಹುದಾದರೂ ಪ್ರಯೋಗಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದರ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಗಮನಹರಿಸಬೇಕು ಮತ್ತು ಸಂಶೋಧನೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಭಾರತೀಯ ಔಷಧ ತಯಾರಿಕಾ ವಲಯದ ಶಕ್ತಿ ಸಾಮರ್ಥ್ಯ ಕೋವಿಡ್ ಕಾಲಘಟ್ಟದಲ್ಲಿ ಜಗತ್ತಿಗೆ ಮನವರಿಕೆಯಾಗಿದೆ. 190 ದೇಶಗಳಿಗೆ ಕೋವಿಡ್ ಲಸಿಕೆಯನ್ನು ಭಾರತದಲ್ಲಿ ಉಚಿತವಾಗಿ ಪೂರೈಸಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕ ಎಂ.ಎಸ್.ಪಾಟೀಲ್ ಮಾತನಾಡಿ, ಔಷಧ ತಯಾರಿಕಾ ವಲಯ ದೊಡ್ಡ ಮಟ್ಟದಲ್ಲಿ ಉದ್ಯೋಗ ನೀಡುತ್ತಿದೆ. ದೇಶದ ಜಿ.ಡಿ.ಪಿ. ಶೇಕಡಾ ಎರಡರಷ್ಟು ಆದಾಯ ತಂದು ಕೊಟ್ಟಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಉತ್ಪಾದನೆಗೆ ಸಹಕಾರಿಯಾಗಿದೆ. ಹೀಗಾಗಿ ಫಾರ್ಮಸಿ ಕೋರ್ಸ್ಗಳಿಗೆ ಭವಿಷ್ಯದಲ್ಲಿ ಬಹಳಷ್ಟು ಬೇಡಿಕೆಯಿದೆ. ಭಾರತೀಯ ಔಷಧ ತಯಾರಿಕಾ ವಲಯ ಕೋವಿಡ್ ಕಾಲಘಟ್ಟದಲ್ಲಿ ಮಾಡಿರುವ ಸಾಧನೆಯನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ ಎಂದು ಅರ್ಥಪೂರ್ಣವಾಗಿ ವಿವರಿಸಿದರು.ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಆದಿಚುಂಚನಗಿರಿ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರು ಮತ್ತು ಡೀನ್ ಡಾ.ಪ್ರಕಾಶ್ ಗೌಡನವರ್, ಬಾಗಲಕೋಟೆಯ ಬಿ.ವಿ.ವಿ.ಎಸ್. ಹಾನಗಲ್ ಶ್ರೀಕುಮಾರೇಶ್ವರ ಫಾರ್ಮಸಿ ಕಾಲೇಜಿನ ಡಾ.ಲಕ್ಷ್ಮಣ ವಿಜಾಪುರ, ಡಾ.ಮಲ್ಲಪ್ಪ ಶಲವಡಿ ಹಾಗೂ ಬೆಂಗಳೂರಿನ ಮಲ್ಲಿಗೆ ಫಾರ್ಮಸಿ ಕಾಲೇಜಿನ ಡಾ.ವಾಚಲಾ ಎಸ್.ಡಿ.ರವರಿಗೆ ಶ್ರೀದೇವಿ ಔಷಧ ವಿಜ್ಞಾನ ಮಹಾವಿದ್ಯಾಲಯ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿಯಿತು.
ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ನಿರ್ದೇಶಕ ಡಾ.ರಮಣ್ ಎಂ. ಹುಲಿನಾಯ್ಕರ್, ಶ್ರೀದೇವಿ ಆಸ್ಪತ್ರೆಯ ನೇತ್ರತಜ್ಞರಾದ ಡಾ.ಪಿ.ಲಾವಣ್ಯ, ಶ್ರೀದೇವಿ ಸಂಸ್ಥೆಯ ಆಡಳಿತಾಧಿಕಾರಿಯಾದ ಪ್ರೊ.ಟಿ.ವಿ.ಬ್ರಹ್ಮದೇವಯ್ಯ, ಡಾ.ಲಕ್ಷ್ಮಣ ವಿಜಾಪುರ, ಡಾ.ಮಲ್ಲಪ್ಪ ಶಲವಡಿ, ಡಾ.ವಾಚಲ.ಎಸ್.ಡಿ., ಶ್ರೀದೇವಿ ಔಷಧ ವಿಜ್ಞಾನ ಮಹಾವಿದ್ಯಾಲಯದ ನಿರ್ದೇಶಕರಾದ ಡಾ.ಬಿ.ಗೋಪಾಲಕೃಷ್ಣ, ಪ್ರಾಂಶುಪಾಲರಾದ ಡಾ.ಶಿವಕುಮಾರ್, ಡಾ.ಜಿ.ಅರ್ಪಿತಾ, ಡಾ.ಕೆ.ಎಸ್.ಶ್ರೀಲತಾ, ಎಚ್.ಎ.ರಮೇಶ್ ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.