ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ಜಾರಿ ಮಾಡಲಾಗುತ್ತದೆ. ಈ ಸಂಸ್ಥೆ ತರಬೇತಿ ನೀಡುವ ಹೊಣೆಗಾರಿಕೆ ಹೊಂದಿದೆ
ಸೋಮರಡ್ಡಿ ಅಳವಂಡಿ ಕೊಪ್ಪಳ
ಆಧುನಿಕ ಜಗತ್ತಿನಲ್ಲಿ ಎಐ ಮತ್ತು ಎನಿಮೇಶನ್ ಕಾಲಿಡದ ಕ್ಷೇತ್ರಗಳೇ ಇಲ್ಲ. ಉದ್ಯೋಗ ಕಿತ್ತುಕೊಳ್ಳುವ ಭಯದ ನಡುವೆ ಅದೇ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗುವುದರಿಂದ ಎಐ ಮತ್ತು ಎನಿಮೇಶನ್ ಕಲಿಯದ ಪದವೀಧರನ್ನು ಆಧುನಿಕ ಅನಕ್ಷರಸ್ಥನಾಗುತ್ತಾನೆ ಎಂದೇ ಹೇಳಲಾಗುತ್ತದೆ. ಹೀಗಾಗಿ ಯಾವುದೇ ಪದವಿ ಹೊಂದಿದ್ದರೂ ಆತ ಎಐ ತರಬೇತಿ ಹೊಂದಿರಲೇಬೇಕಾದ ಅನಿವಾರ್ಯತೆ ಇದೆ.ಇದನ್ನು ಮನಗಂಡಿರುವ ಸಂಸದ ರಾಜಶೇಖರ ಹಿಟ್ನಾಳ ಕೊಪ್ಪಳದಲ್ಲಿ ಎಐ ಮತ್ತು ಎನಿಮೇಶನ್ ತರಬೇತಿ ಕೇಂದ್ರ ತೆರೆಯಲು ಮುಂದಾಗಿದ್ದಾರೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ನಡೆದಿದ್ದು, ಎಐ ತರಬೇತಿ ಕೇಂದ್ರದ ಸಿದ್ಧತೆ ನಡೆದಿದೆ.
ಕೆಕೆಆರ್‌ಡಿಬಿ ಮತ್ತು ಸ್ಥಳೀಯ ಕೈಗಾರಿಕಾ ಕಂಪನಿಗಳ ಸಹಯೋಗದಲ್ಲಿ ಸುಮಾರು ಐದುಕೋಟಿ ವೆಚ್ಚದಲ್ಲಿ ಎಐ,ಎನಿಮೇಶನ್ ತರಬೇತಿ ಕೇಂದ್ರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಇನ್ನಾರು ತಿಂಗಳೊಳಗಾಗಿ ತರಬೇತಿ ಕೇಂದ್ರ ಪ್ರಾರಂಭವಾಗಲಿದೆ. ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ಜಾರಿ ಮಾಡಲಾಗುತ್ತದೆ. ಈ ಸಂಸ್ಥೆ ತರಬೇತಿ ನೀಡುವ ಹೊಣೆಗಾರಿಕೆ ಹೊಂದಿದೆ.ಯಾರಿಗೆ ತರಬೇತಿ:ಜಿಲ್ಲೆಯಲ್ಲಿ ತರಬೇತಿ ಪೂರ್ಣಗೊಳಿಸಿದ ಯುವಕರು ಅರ್ಹರಾಗಿರುತ್ತಾರೆ. ಅವರಿಗೆ ತಿಂಗಳ ಕಾಲ ಎಐ ಮತ್ತು ಎನಿಮೇಶನ್ ತರಬೇತಿ ನೀಡಲಾಗುತ್ತದೆ. ಇದರಿಂದ ನಿರುದ್ಯೋಗ ಯುವಕರು ಹೆಚ್ಚು ಹೆಚ್ಚು ಅವಕಾಶ ಪಡೆಯುವ ಸಾಮರ್ಥ್ಯ ಪಡೆಯುತ್ತಾರೆ. ವಾಸ್ತವಿಕವಾಗಿ ಬೇಡಿಕೆ ಇರುವ ಅರ್ಹತೆಯೊಂದಿಗೆ ಉದ್ಯೋಗ ಪಡೆಯಲಿದ್ದಾರೆ. ಸರ್ಕಾರದ ಸಹಭಾಗಿತ್ವದಲ್ಲಿ ಎಐ ತರಬೇತಿ ನೀಡುವ ರಾಜ್ಯದ ಮೊದಲ ಕೇಂದ್ರ ಇದಾಗಲಿದೆ. ಹೀಗೆ ಪ್ರತಿ ತಿಂಗಳು ನೂರು,ಇನ್ನೂರು ಮತ್ತು ಐದುನೂರು ಯುವಕರನ್ನು ತರಬೇತಿಗೊಳಿಸಿ ದೇಶ, ವಿದೇಶದಲ್ಲಿ ಉದ್ಯೋಗ ಪಡೆಯುವಂತೆ ಮಾಡುವ ಗುರಿ ಹೊಂದಲಾಗಿದೆ.
ಎಐ, ಎನಿಮೇಶನ್ ಶಿಕ್ಷಣಇಂದಿನ ಡಿಜಿಟಲ್ ಯುಗದಲ್ಲಿ Artificial Intelligence (AI) ಮತ್ತು Animation (ಎನಿಮೇಶನ್) ಎರಡೂ ಕ್ಷೇತ್ರಗಳು ವೇಗವಾಗಿ ಬೆಳೆಯುತ್ತಿವೆ. ವಿದ್ಯಾರ್ಥಿಗಳು ಸೃಜನಶೀಲತೆಗೆ ತಂತ್ರಜ್ಞಾನವನ್ನು ಸೇರಿಸಿ ಹೊಸ ವೃತ್ತಿ ಅವಕಾಶ ನಿರ್ಮಿಸಲು ಈ ಎರಡೂ ಕ್ಷೇತ್ರಗಳು ಮಹತ್ವದ್ದಾಗಿವೆ.
-ಎಐ ಎಂದರೆ ಮಾನವನಂತೆ ಯೋಚಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವ ದತ್ತಾಂಶ ಅರ್ಥಮಾಡಿಕೊಳ್ಳುವ ಸ್ವಯಂಚಾಲಿತವಾಗಿ ಕೆಲಸ ಮಾಡುವ ಕಂಪ್ಯೂಟರ್ ತಂತ್ರಜ್ಞಾನ.-ಎಐ ಶಿಕ್ಷಣದ ಅಗತ್ಯ ಭವಿಷ್ಯದ ಎಲ್ಲ ಉದ್ಯೋಗಗಳಲ್ಲಿ ಎಐ ಜ್ಞಾನ ಅಗತ್ಯ. ವೈದ್ಯಕೀಯ, ಕೃಷಿ, ಶಿಕ್ಷಣ, ಉದ್ಯಮ, ಸಾರಿಗೆ ಎಲ್ಲ ಕ್ಷೇತ್ರಗಳಲ್ಲೂ ಎಐ ಬಳಸಲಾಗುತ್ತಿದೆ. ಎಐ ಕಲಿಸುವುದು ವಿದ್ಯಾರ್ಥಿಗಳಿಗೆ ಲಾಜಿಕಲ್ ಥಿಂಕಿಂಗ್, ಸಮಸ್ಯೆ ಪರಿಹಾರ, ಕೋಡಿಂಗ್ ಕೌಶಲ್ಯ ನೀಡುತ್ತದೆ.
-ಎನಿಮೇಶನ್ ಎಂದರೆ ಚಿತ್ರಗಳಿಗೆ ಚಲನ ನೀಡುವ ಕಲೆ. ಇದು ಸಿನಿಮಾ, ಕಾರ್ಟೂನ್, ಗೇಮ್, ಜಾಹೀರಾತು, ಶಿಕ್ಷಣ ವೀಡಿಯೊ ಮುಂತಾದ ಎಲ್ಲ ಕ್ಷೇತ್ರಗಳಲ್ಲಿ ಉಪಯೋಗವಾಗುತ್ತದೆ.ಎಐ ಶಿಕ್ಷಣ ಮತ್ತು ಎನಿಮೇಶನ್ ಶಿಕ್ಷಣ ಇಂದಿನ ದಿನಮಾನಗಳಲ್ಲಿ ಅಗತ್ಯವಾಗಿದೆ. ಯಾವುದೇ ಪದವಿ ಪಡೆದಿದ್ದರೂ ಈ ಶಿಕ್ಷಣ ಇಲ್ಲದೇ ಹೋದರೆ ಅವಕಾಶಗಳು ಕಡಿಮೆ. ಹೀಗಾಗಿ ಜಿಲ್ಲೆ ಎಲ್ಲ ಯುವಕರನ್ನು ಇಂಥ ತರಬೇತಿ ಪಡೆಯುವಂತೆ ಮಾಡಲು ಎಐ ಮತ್ತು ಎನಿಮೇಶನ್ ಶಿಕ್ಷಣ ನೀಡಲು ತರಬೇತಿ ಕೇಂದ್ರ ಪ್ರಾರಂಭಿಲು ಕಾರ್ಯ ಪ್ರಾರಂಭವಾಗಿದ್ದು, ಶೀಘ್ರ ಜಾರಿಗೆ ಬರಲಿದೆ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ.