ಸಾರಾಂಶ
ರಾಜ್ಯದಲ್ಲಿ ಜಾರಿಗೆ ತಂದಿರುವ 4 ವರ್ಷದ ಪದವಿ ವ್ಯವಸ್ಥೆಯನ್ನು ರದ್ದುಪಡಿಸಬೇಕು ಎಂದು ಎಐಡಿಎಸ್‌ಒ ಪ್ರತಿಭಟನೆ ನಡೆಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಾಲ್ಕು ವರ್ಷಗಳ ಪದವಿಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್ಒ) ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷ ಅಭಯಾ ದಿವಾಕರ್ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೊಳಿಸಿದ ಹಿಂದಿನ ಬಿಜೆಪಿ ಸರಕಾರ, ಹಲವು ಗೊಂದಲಗಳನ್ನು ಸೃಷ್ಟಿಸಿ 4 ವರ್ಷಗಳ ಪದವಿಯನ್ನು ವಿದ್ಯಾರ್ಥಿಗಳ ಮೇಲೆ ಅಪ್ರಜಾತಾಂತ್ರಿಕವಾಗಿ ಹೇರಿದೆ. ಹೀಗಾಗಿ, ಕಾಂಗ್ರೆಸ್ ಸರಕಾರ ಎನ್‌ಇಪಿ ವಾಪಸ್ ಪಡೆದು ರಾಜ್ಯದ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಭರವಸೆ ನೀಡಿತ್ತು. ಆದರೆ, 9 ತಿಂಗಳು ಕಳೆದರೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸರ್ಕಾರ ಅತಂತ್ರ ಧೋರಣೆ ಮುಂದುವರೆಸಿರುವುದು ಖಂಡನೀಯ ಎಂದು ಹೇಳಿದರು.
ಮತ್ತೊರ್ವ ಉಪಾಧ್ಯಕ್ಷ ಹಣಮಂತು ಮಾತನಾಡಿ, ಚುನಾವಣೆ ಸಂದರ್ಭದಲ್ಲಿ 4 ವರ್ಷದ ಪದವಿಯನ್ನು 3 ವರ್ಷಕ್ಕೆ ಇಳಿಸುತ್ತೇವೆ ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ, ಭರವಸೆ ಈಡೇರದ ಕಾರಣ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.ಎಐಡಿಎಸ್‌ಒ ರಾಜ್ಯ ಅಧ್ಯಕ್ಷೆ ಕೆ.ಎಸ್.ಅಶ್ವಿನಿ, ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಜೆಟಿಒ ನೇಮಕಾತಿ ಆದೇಶ ಪತ್ರನೀಡುವಂತೆ ಅಭ್ಯರ್ಥಿಗಳ ಧರಣಿಕನ್ನಡಪ್ರಭ ವಾರ್ತೆ ಬೆಂಗಳೂರುಕಿರಿಯ ತರಬೇತಿ ಅಧಿಕಾರಿ (ಜೆಟಿಒ) ನೇಮಕಾತಿ ಪರೀಕ್ಷೆ ಬರೆದು ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಬೇಕು ಎಂದು ಒತ್ತಾಯಿಸಿ ಸರ್ಕಾರಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ ಕಚೇರಿ ಎದುರು ಅಭ್ಯರ್ಥಿಗಳು ಗುರುವಾರ ಪ್ರತಿಭಟಿಸಿದರು.ತಮ್ಮ ಮಕ್ಕಳು ಮತ್ತು ಕುಟುಂಬ ಸಮೇತ ಆಗಮಿಸಿದ್ದ ಅಭ್ಯರ್ಥಿಗಳು, ನಿಯಮಾನುಸಾರ ಪರೀಕ್ಷೆ ಬರೆದು ಆಯ್ಕೆಯಾಗಿದ್ದು, ನಾಲ್ಕೈದು ವರ್ಷಗಳಿಂದ ನೇಮಕಾತಿ ಆದೇಶ ಪತ್ರಕ್ಕೆ ಕಾಯುತ್ತಿದ್ದೇವೆ. ಆದರೆ, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಸೇರಿದಂತೆ ಇನ್ನಿತರ ತಾಂತ್ರಿಕ ಕಾರಣಗಳನ್ನು ನೀಡಿ ಆದೇಶ ಪತ್ರ ನೀಡದೆ ವಿಳಂಬ ಮಾಡಲಾಗುತ್ತಿದೆ. ಇದರಿಂದ ನಮ್ಮ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಕೂಡಲೇ ಆದೇಶ ಪತ್ರವನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಭ್ಯರ್ಥಿಗಳು, ಪದೇ ಪದೇ ನ್ಯಾಯಾಲಯಕ್ಕೆ ಹೋಗುವ ಆರ್ಥಿಕ ಶಕ್ತಿ ಇಲ್ಲ. ಹೀಗಾಗಿ, ಸರ್ಕಾರವೇ ಈ ಕುರಿತು ಸೂಕ್ತ ತೀರ್ಮಾನ ತೆಗೆದುಕೊಂಡು ನೇಮಕಾತಿ ಆದೇಶ ಪತ್ರ ನೀಡುವಂತೆ ಅವರು ಆಗ್ರಹಿಸಿದರು.