ಬರದ ಜೊತೆ ಬೆಲೆ ಏರಿಕೆಯ ಬಿಸಿ;ಜನ ಹೈರಾಣು

| Published : Mar 08 2024, 01:46 AM IST

ಸಾರಾಂಶ

ವಾರದ ಹಿಂದೆ ಮಲ್ಲಿಗೆ ಮೊಗ್ಗು ಕೆಜಿಗೆ 300-500 ರು.ಗಳಿಗಿದ್ದು, ಬುಧವಾರದಂದು ಕೆಜಿ ಮಲ್ಲಿಗೆ ಹೂವು 1200 ರು. ದಾಟಿತ್ತು. 400-500 ರು.ಇದ್ದ ಕನಕಾಂಬರ ಹೂವು 1000 ರು, ಮಳ್ಳೆ ಹೂ ಕೆಜಿಗೆ 1100ರು., ದವನ ನಾಲ್ಕು ಕಡ್ಡಿಗೆ 20-30 ರು.ಗೆ ತಲುಪಿದೆ. ಮಳೆಯಿಲ್ಲದೆ ಬರ ಹೆಚ್ಚಾಗಿರುವುದರಿಂದ ಹಬ್ಬಕ್ಕೆ ಹೂಗಳ ಬೇಡಿಕೆ ಹೆಚ್ಚಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬರದ ನಡುವೆಯೂ ಬೆಲೆ ಏರಿಕೆಯ ಬಿಸಿಯಲ್ಲಿ ಶಿವರಾತ್ರಿ ಹಬ್ಬದ ಪ್ರಯಕ್ತ ನಗರದ ಬಜಾರ್‌ ರಸ್ತೆ, ಸಂತೇಪೇಟೆ, ನಗರಸಭೆಯ ಖಾಸಗಿ ಬಸ್​ ನಿಲ್ದಾಣ, ಬಿಬಿ ರಸ್ತೆ, ಎಂಜಿ ರಸ್ತೆಗಳಲ್ಲಿ ಹೂವಿನ ವ್ಯಾಪಾರ, ಹಣ್ಣು, ತರಕಾರಿ ಹಾಗೂ ಮಾವಿನ ಸೊಪ್ಪು,ಬಿಲ್ವ ಪತ್ರೆ ,ದವಸದ ವ್ಯಾಪಾರ ಜೋರಾಗಿಯೇ ಇತ್ತು.

ಹೂವಿನ ಬೆಲೆ ಗಗನ ಮುಟ್ಟಿದೆ. ಹಣ್ಣುಗಳು ಹಾಗೂ ಇತರೆ ಸಾಮಗ್ರಿಗಳ ದರವೂ ತೀವ್ರ ಏರಿಕೆ ಕಂಡಿದೆ.

ಶಿವರಾತ್ರಿ ಹಬ್ಬಕ್ಕೆ ಈಗಲೇ ಖರೀದಿ ಜೋರಾಗಿದ್ದು, ನಗರದ ಎಪಿಎಂಸಿ ಮಾರುಕಟ್ಟೆ, ಟೌನ್ ಹಾಲ್ ಸರ್ಕಲ್, ಎಂಜಿ ರಸ್ತೆ, ಬಜಾರ್ ರಸ್ತೆ, ಬಿ.ಬಿ.ರಸ್ತೆ ಹಾಗೂ ಹೊರವಲಯದ ಕೆ.ವಿ.ಕ್ಯಾಂಪಸ್ ಹೂ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿತು. ಗುರುವಾರ ಸೇವಂತಿಗೆ ಹೂವು ಒಂದು ಕೆಜಿಗೆ 150 ರಿಂದ 300ರ ವರೆಗೆ ಮಾರಾಟವಾಗಿದೆ.

ವಾರದ ಹಿಂದೆ ಮಲ್ಲಿಗೆ ಮೊಗ್ಗು ಕೆಜಿಗೆ 300-500 ರು.ಗಳಿಗಿದ್ದು, ಬುಧವಾರದಂದು ಕೆಜಿ ಮಲ್ಲಿಗೆ ಹೂವು 1200 ರು. ದಾಟಿತ್ತು. 400-500 ರು.ಇದ್ದ ಕನಕಾಂಬರ ಹೂವು 1000 ರು, ಮಳ್ಳೆ ಹೂ ಕೆಜಿಗೆ 1100ರು., ದವನ ನಾಲ್ಕು ಕಡ್ಡಿಗೆ 20-30 ರು.ಗೆ ತಲುಪಿದೆ. ಮಳೆಯಿಲ್ಲದೆ ಬರ ಹೆಚ್ಚಾಗಿರುವುದರಿಂದ ಹಬ್ಬಕ್ಕೆ ಹೂಗಳ ಬೇಡಿಕೆ ಹೆಚ್ಚಾಗಿದೆ.

ಗುಲಾಬಿ ಕೆಜಿ 200 ರಿಂದ 250 ರು., ಕಾಕಡ ಕೆಜಿಗೆ 900 ರಿಂದ 1100 ರು. ಹಾಗೂ ಚೆಂಡು ಹೂವಿನ ಬೆಲೆ ಕೇಳಿದರೆ ಗ್ರಾಹಕರು ಬೆಚ್ಚಿಬೀಳುವಂತಾಗಿದೆ. ಸಗಟು ದರದಲ್ಲೇ ಕೆಜಿ ಚೆಂಡು ಹೂವಿನ ಬೆಲೆ 30-60 ರು.ಗೆ ತಲುಪಿದೆ. ಮಳೆಯೇ ಇಲ್ಲದಿರುವುದರಿಂದ ಹೂವಿನ ಫಸಲು ಕಡಿಮೆಯಾಗಿದೆ. ತಮಿಳುನಾಡಿನಿಂದ ಮಲ್ಲಿಗೆ, ಮಳ್ಳೆ ಮತ್ತಿತರ ಹೂವುಗಳು ಬರುತ್ತಿವೆ. ಗುಲಾಬಿ ಮತ್ತಿತರ ಹೂವುಗಳು ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ಭಾಗಗಳಿಂದ ಬರುತ್ತಿವೆ. ಕೇವಲ ಮೂರು-ನಾಲ್ಕು ದಿನಗಳಿಂದೀಚೆಗೆ ಹೂಗಳ ಬೆಲೆಗಳು ಹೆಚ್ಚಾಗಿವೆ. ಹಬ್ಬಕ್ಕೆ ಇನ್ನಷ್ಟು ಏರಿಕೆಯಾಗಲಿವೆ ಎನ್ನುತ್ತಾರೆ ಮಾರಾಟಗಾರ ಅಶೋಕ್ ಕುಮಾರ್.

ಎಪಿಎಂಸಿ ಹೂ ಮಾರುಕಟ್ಟೆ ಮತ್ತು ಹೊರವಲಯದ ಕೆ.ವಿ.ಕ್ಯಾಂಪಸ್ ,ಸಿವಿಲ್ ಬಸ್ ಸ್ಟ್ಯಾಂಡ್, ಟೌನ್ ಹಾಲ್ ಸರ್ಕಲ್, ಎಂಜಿ ರಸ್ತೆ, ಬಜಾರ್ ರಸ್ತೆ, ಬಿ.ಬಿ.ರಸ್ತೆಗಳಲ್ಲಿ ವ್ಯಾಪಾರಿಗಳು ಗ್ರಾಹಕರನ್ನು ಸುಲಿಗೆ ಮಾಡುತ್ತಿದ್ದಾರೆ.

ಮಹಾ ಶಿವರಾತ್ರಿ ಹಬ್ಬಕ್ಕೆ ಬೆಲೆ ಏರಿಕೆ ನಡುವೆಯೂ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು,ಬಿಲ್ವಪತ್ರೆ, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಹಬ್ಬ ಇನ್ನೂ ಎರಡು ದಿನಗಳಿರುವಾಗಲೇ ಹೂವಿನ ಬೆಲೆ ವಿಪರೀತ ಏರಿಕೆಯಾಗಿದೆ

ಹಣ್ಣುಗಳ ಬೆಲೆಯೂ ದುಬಾರಿ:ಸೇಬು ಕೆಜಿಗೆ 100ರಿಂದ 150 ರು., ಸಪೋಟ ಕೆಜಿಗೆ 100 ರು., ಪೈನಾಪಲ್ ಕೆಜಿಗೆ 80ರಿಂದ 100 ರು., ಸೀಬೆ ಕೆಜಿಗೆ 50-80 ರು., ಮೂಸಂಬಿ ಮತ್ತು ಕಿತ್ತಳೆಯ ಬೆಲೆ ಕೆಜಿಗೆ 50-80 ರು. ದಾಟಿದೆ. ಬಾಳೆಹಣ್ಣಿನ ಬೆಲೆ ಕೇಳುವುದೇ ಬೇಡ, ಕಳೆದ ಎರಡು - ಮೂರು ದಿನಗಳಿಂದ ಏಲಕ್ಕಿ ಬಾಳೆ ಕೆಜಿ ಗೆ 70-100 ರು.ವರೆಗೆ, ಪಚ್ಚಬಾಳೆ 40-50 ರು.ಗೆ ಏರಿದೆ. ದಾಳಿಂಬೆ 100-200 ರು., ಕಪ್ಪು ದ್ರಾಕ್ಷಿ ಹಣ್ಣಿನ ಬೆಲೆ 40-60 ರು., ಸೀಡ್ ಲೆಸ್ ದ್ರಾಕ್ಷಿ 60-80 ರು.ಗೆ ಹೆಚ್ಚಾಗಿದೆ. ತೆಂಗಿನ ಕಾಯಿಯ ಬೆಲೆ ಒಂದಕ್ಕೆ 15-30 ರು. ದಾಟಿದೆ.‘ಹಬ್ಬದ ದಿನ ಬೆಲೆಗಳು ಜಾಸ್ತಿಯಾಗುತ್ತಿದ್ದು ಮಾಮೂಲು. ಮಾರುಕಟ್ಟೆಯಲ್ಲಿ ಅಂದು ವಿಪರೀತ ಜನಜಂಗುಳಿಯಿರುತ್ತದೆ ಎಂದು ಮುಂಚಿತವಾಗಿಯೇ ಖರೀದಿಗೆ ಬಂದೆವು. ಆದರೆ, ಬೆಲೆಗಳು ಕಡಿಮೆಯೇನಿಲ್ಲ. ತುಂಬಾ ದುಬಾರಿ. ಈ ಬರದ ನಡುವೆ ದುಬಾರಿ ಬೆಲೆಗಳಲ್ಲಿ ಹಬ್ಬಗಳು ಯಾಕಾದರೂ ಬರುತ್ತವೋ ಅನಿಸುತ್ತದೆ.’ -ಅನಿತಾ ಗ್ರಾಹಕರು.