ಹೊಸಪೇಟೆ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಎಐಡಿಎಸ್ಒ ಜಿಲ್ಲಾಧ್ಯಕ್ಷ ರವಿಕಿರಣ್ ಜೆ.ಪಿ. ಮಾತನಾಡಿ, ಸರ್ಕಾರದ ಪಾತಕೀ ನಿರ್ಲಕ್ಷ್ಯಕ್ಕೆ ದೇಶದ ವೈದ್ಯಕೀಯ ಶಿಕ್ಷಣದ ಕನಸು ಹೊತ್ತಿರುವ ಬರೋಬ್ಬರಿ 23 ಲಕ್ಷ ವಿದ್ಯಾರ್ಥಿಗಳು ಜೂನ್ 21ಕ್ಕೆ ಮತ್ತೊಮ್ಮೆ ತಮ್ಮ ಭವಿಷ್ಯದ ನಿರ್ಣಾಯಕ ಪರೀಕ್ಷೆಯನ್ನು ಬರೆಯಬೇಕು. ಪರೀಕ್ಷೆಗೂ ಮುನ್ನ ಟೆಲಿಗ್ರಾಂ ಗುಂಪುಗಳಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪಗಳು ಕೇಳಿ ಬಂದರೂ ನೀಟ್ ಪರೀಕ್ಷೆಯನ್ನು ಎನ್.ಟಿ.ಎ. ನಡೆಸಿತು ಎಂದರು.ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪರೀಕ್ಷೆ ಕುರಿತಾಗಿ ಅನೇಕರು ಪ್ರಶ್ನೆ ಎತ್ತಿದ ನಂತರವೂ ಶಿಕ್ಷಣ ಸಚಿವರಾಗಲಿ, ಎನ್.ಟಿ.ಎಯಾಗಲಿ ಯಾವ ಆಪಾದನೆಯೂ ತಮಗೆ ತಟ್ಟುವುದಿಲ್ಲವೆಂಬಂತೆ ಪರೀಕ್ಷೆ ಜರುಗಿತು. ಪರೀಕ್ಷೆ ಮುಗಿದ ಕೆಲವೇ ದಿನಗಳಲ್ಲಿ ಹರಿದಾಡಿದ ಪ್ರಶ್ನೆ ಪತ್ರಿಕೆ ಕುರಿತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಪ್ರಾರಂಭವಾಯಿತು. ಸೋರಿಕೆ ಕುರಿತಾಗಿ ವಿದ್ಯಾರ್ಥಿಗಳು, ಪೋಷಕರು ಅಸಮಾಧಾನ ಹೊರಹಾಕಲು ಪ್ರಾರಂಭಿಸಿದರು. ಇಷ್ಟಾಗಿಯೂ ಕೇಂದ್ರೀಯ ಏಜೆನ್ಸಿಗೆ ತನಿಖೆಯ ಜವಾಬ್ದಾರಿ ನೀಡಿದ್ದೇವೆಂದು ಸಮಯ ಮುಂದೂಡಲು ಪ್ರಯತ್ನಿಸಿದರು. ಜನರ ಆಕ್ರೋಶಕ್ಕೆ ಹೆದರಿ ಪರೀಕ್ಷೆ ನಡೆದ 9 ದಿನಗಳ ನಂತರ ಪರೀಕ್ಷೆಯನ್ನು ರದ್ದುಗೊಳಿಸಿದರು ಎಂದು ಅವರು ಹೇಳಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ನಿದರ್ಶನೀಯ ಶಿಕ್ಷೆ ದೊರೆಯುವಂತೆ ದೇಶದ ವಿದ್ಯಾರ್ಥಿಗಳು ಆಂದೋಲನ ನಡೆಸಬೇಕು. ಪರೀಕ್ಷೆಗಳನ್ನು ಪ್ರಾಮಾಣಿಕವಾಗಿ ನಡೆಸುವಲ್ಲಿ ಪದೇ ಪದೇ ವಿಫಲವಾದ ಎನ್.ಟಿ.ಎ ಯನ್ನು ಈ ಕೂಡಲೇ ರದ್ದುಗೊಳಿಸಬೇಕು. ಇದೆಲ್ಲದರ ನೈತಿಕ ಹೊಣೆ ಹೊತ್ತು ದೇಶದ ಶಿಕ್ಷಣ ಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.ಎಐಡಿಎಸ್ಒ ವಿಜಯನಗರ ಜಿಲ್ಲಾ ಕಾರ್ಯದರ್ಶಿ ಯು.ಉಮಾದೇವಿ ಮಾತನಾಡಿ, ನೀಟ್ ಕೋಚಿಂಗ್ ಗೆ ಎಂದು ಒಂದು ವರ್ಷದಲ್ಲಿ 80 ಸಾವಿರದಿಂದ 3 ಲಕ್ಷ ರೂ. ರಷ್ಟು ವಿದ್ಯಾರ್ಥಿಗಳು ವೆಚ್ಚ ಮಾಡುತ್ತಿದ್ದಾರೆ. ಇದೇ ರೀತಿ ವೆಚ್ಚ ಮಾಡಿ, 3, 4 ವರ್ಷಗಳಿಂದ ಹಗಲು, ರಾತ್ರಿ ಎನ್ನದೆ ಓದಿ ತಯಾರಾಗಿ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದಾರೆ ಇವರ ಭವಿಷ್ಯದ ಗತಿ ಏನು ಎಂಬ ಪ್ರಶ್ನೆ ಕಾಡುತ್ತಿದೆ. ಕೇವಲ ಕೆಲವರ ಲಾಭಕ್ಕಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತಿರುವುದನ್ನು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ಖಂಡಿಸುತ್ತದೆ ಎಂದರು.
ಎಐಡಿಎಸ್ಓನ ಪ್ರಕಾಶ್ ನಾಯಕ್, ಶ್ರೀನಿವಾಸ್, ರಮ್ಯಾ, ಸ್ನೇಹ ಸೇರಿದಂತೆ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.