ಸಾರಾಂಶ
ಸರ್ಕಾರಿ ಶಾಲೆಗಳನ್ನು ಮುಚ್ಚದೆ ಮೂಲಸೌಕರ್ಯ ಒದಗಿಸಿ ಬಲಪಡಿಸುವಂತೆ ಆಗ್ರಹಿಸಿ ಎಐಡಿಎಸ್ಒ ನಡೆಸಿದ 50 ಲಕ್ಷ ಸಹಿ ಸಂಗ್ರಹ ಅಭಿಯಾನದ ಸಮಾರೋಪ ಹೋರಾಟ ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸರ್ಕಾರಿ ಶಾಲೆಗಳನ್ನು ಮುಚ್ಚದೆ ಮೂಲಸೌಕರ್ಯ ಒದಗಿಸಿ ಬಲಪಡಿಸುವಂತೆ ಆಗ್ರಹಿಸಿ ಎಐಡಿಎಸ್ಒ ನಡೆಸಿದ 50 ಲಕ್ಷ ಸಹಿ ಸಂಗ್ರಹ ಅಭಿಯಾನದ ಸಮಾರೋಪ ಹೋರಾಟ ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯಿತು.ಈ ವೇಳೆ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಮಾಜಿ ಕುಲಪತಿ ಪ್ರೊ.ಎ. ಮುರಿಗೆಪ್ಪ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ನೆಪ ಮುಂದಿಟ್ಟು ಸರ್ಕಾರಿ ಶಾಲೆಗಳನ್ನು ಮುಚ್ಚದೆ ಮೂಲಭೂತ ಸೌಕರ್ಯ ಕೊರತೆ ಪರಿಹರಿಸಿ ದಾಖಲಾತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕಡಿಮೆ ಸಂಖ್ಯೆಯ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರ. ಇದರಿಂದ ಬಡವರಿಗೆ ತೊಂದರೆಯಾಗಲಿದೆ. ವಿದ್ಯಾರ್ಥಿಗಳು ಎಷ್ಟೇ ಇದ್ದರೂ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ಬದಲಾಗಿ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಶಿಕ್ಷಕರ ಹಾಗೂ ಮೂಲಭೂತ ಸೌಕರ್ಯ ಕೊರತೆ ಪರಿಹರಿಸಿ ದಾಖಲಾತಿ ಹೆಚ್ಚಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು ಎಂದರು.ಎಐಡಿಎಸ್ಒನ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ಹಲವೆಡೆ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ಬರದಂತೆ ಶಿಕ್ಷಕರ ಮೂಲಕ ತಡೆಯಲಾಗಿದೆ. ಅನೇಕ ಶಾಲೆ-ಕಾಲೇಜುಗಳಲ್ಲಿ ದಿಢೀರ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮಕ್ಕಳನ್ನು ಕಳುಹಿಸದಂತೆ ಪಾಲಕರನ್ನು ಭಯ ಪಡಿಸಲಾಗಿದೆ ಎಂದು ಆರೋಪಿಸಿದರು.
ರಾಜ್ಯ ಅಧ್ಯಕ್ಷರಾದ ಅಶ್ವಿನಿ ಕೆ.ಎಸ್. ಮಾತನಾಡಿ, ಹೋರಾಟದ ಒತ್ತಡದಿಂದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸದನದಲ್ಲಿ ಹೇಳಿದ್ದಾರೆ. ಆದರೆ ಈ ಆಶ್ವಾಸನೆ ನಂಬಿ ಹೋರಾಟವನ್ನು ಕೈಬಿಡುವಂತಿಲ್ಲ. ‘ಹಬ್ ಅಂಡ್ ಸ್ಪೋಕ್’ ಹೆಸರಿನಲ್ಲಿ ಶಾಲೆಗಳನ್ನು ವಿಲೀನಗೊಳಿಸುವ ಆದೇಶವನ್ನು ವಾಪಸು ಪಡೆಯಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.ಎಐಡಿಎಸ್ಒ ಕೇಂದ್ರ ಕೌನ್ಸಿಲ್ ಕಾರ್ಯದರ್ಶಿ ಶಿಬಾಶಿಶ್ ಪ್ರಹರಾಜ್, ಎಐಡಿಎಸ್ಓ ತಮಿಳುನಾಡು ರಾಜ್ಯಾಧ್ಯಕ್ಷ ಸೆಬಾಸ್ಟಿಯನ್ ಇದ್ದರು.