ಸಾರಾಂಶ
ದಾವಣಗೆರೆ: ಹರಪನಹಳ್ಳಿ ತಾಲೂಕಿನ ಮಾದಿಹಳ್ಳಿಯಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾವಣಗೆರೆಯ ಕಾಲೇಜುಗಳು, ಅಧಿಕಾರಿ-ಸಿಬ್ಬಂದಿ ಕಚೇರಿಗಳಿಗೆ ತೆರಳಲು ಸರ್ಕಾರಿ ಬಸ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಬೆಳಗ್ಗೆ 6 ಗಂಟೆಗೆ ಹೊರಡುವ ಬಸ್ ಪ್ರಯಾಣಿಕರಿಂದ ತುಂಬಿರುತ್ತದೆ. ಈ ಹಿನ್ನೆಲೆ ಸೂಕ್ತ ಬಸ್‌ಗಳ ಸೌಲಭ್ಯ ಕಲ್ಪಿಸಲು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟುಡೆಂಟ್ಸ್ ಆರ್ಗನೈಜೇಷನ್ ಜಿಲ್ಲಾ ಸಮಿತಿಯಿಂದ ಸೋಮವಾರ ಕೆಎಸ್‌ಆರ್‌ಟಿಸಿ ವಿಭಾಗೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬಸ್ ಸಂಪೂರ್ಣ ಭರ್ತಿ ಆಗುವುದರಿಂದ ಬಹುತೇಕ ವಿದ್ಯಾರ್ಥಿಗಳು ಸಕಾಲಕ್ಕೆ ಕಾಲೇಜಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಬೋಧನೆ ಲಾಭ ಪಡೆಯಲು ಸಾಧ್ಯವಾಗದೇ ಕಷ್ಟ ಎದುರಿಸುವಂತಾಗಿದೆ. ಈ ಕೂಡಲೇ ಸಮರ್ಪಕ ಬಸ್ಸುಗಳ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಲಾಯಿತು.ಮಾದಿಹಳ್ಳಿಯಿಂದ ಹೊರಡುವ ಬಹುತೇಕ ಮಕ್ಕಳು ಬಡಕುಟುಂಬದಿಂದ ಬಂದವರು. ಕೂಲಿ ಹಾಗೂ ರೈತಾಪಿ ಮನೆತನದವರೇ ಆಗಿದ್ದಾರೆ. ಓದುವ ಆಸೆ ಹೊತ್ತು ನಗರದ ಕಡೆಗೆ ಮುಖ ಮಾಡಿರುವ ಈ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಆದರೆ, ಶಾಲಾ- ಕಾಲೇಜುಗಳಿಗೆ ತೆರಳಲು ಸಮರ್ಪಕ ಬಸ್‌ಗಳ ವ್ಯವಸ್ಥೆ ಅತ್ಯಗತ್ಯವಾಗಿದೆ ಎಂದು ಮನವಿ ಮಾಡಿದರು.
ವಿಭಾಗಿಯ ಅಧಿಕಾರಿಗಳು ಮನವಿ ಸ್ವೀಕರಿಸಿ, ಈಗ ಇರುವ 6 ಗಂಟೆ ಬಸ್‌ನೊಂದಿಗೆ ಬೆಳಗ್ಗೆ 7.30ಕ್ಕೆ ಮಾದಿಹಳ್ಳಿಯಿಂದ ದಾವಣಗೆರೆಗೆ ಹಾಗೂ ಸಂಜೆ 4.30 ಗಂಟೆಗೆ ದಾವಣಗೆರೆಯಿಂದ ಮಾದಿಹಳ್ಳಿಗೆ ಬಸ್ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು.ಎಐಡಿಎಸ್‌ಒ ಸಂಘಟನೆ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ, ಕಾರ್ಯದರ್ಶಿ ಟಿ.ಎಸ್.ಸುಮನ, ವಿದ್ಯಾರ್ಥಿಗಳಾದ ಪಿ ಸಿದ್ದೇಶ, ಹೇಮಂತ, ಅಂಜಿನಪ್ಪ, ಮುರುಳೀಧರ, ರಾಕೇಶ ಮುಂತಾದವರು ಉಪಸ್ಥಿತರಿದ್ದರು.
- - --1ಕೆಡಿವಿಜಿ37: