ಮಹಾನ್ ಸಮಾಜ ಸುಧಾರಕಿ ಹಾಗೂ ನವೋದಯ ವ್ಯಕ್ತಿತ್ವ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಅಂಗವಾಗಿ ಮರ್ಯಾದೆಗೇಡು ಹತ್ಯೆಗಳು ಹಾಗೂ ಮಹಿಳೆಯರು, ಮಕ್ಕಳ ಮೇಲಿನ ಅಪರಾಧಗಳು ಸಂಪೂರ್ಣವಾಗಿ ಅಂತ್ಯಗೊಳ್ಳಬೇಕು ಎಂದು ಆಗ್ರಹಿಸಿ ಎಐಡಿಎಸ್‌ಒ ಹಾಸನ ಜಿಲ್ಲಾ ಸಮಿತಿಯಿಂದ ಶನಿವಾರ ನಗರದ ವಿವಿಧ ಶಾಲಾ ಕಾಲೇಜು ಬಳಿ ಪ್ರತಿರೋಧ ದಿನ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಹಾಸನ
ಮಹಾನ್ ಸಮಾಜ ಸುಧಾರಕಿ ಹಾಗೂ ನವೋದಯ ವ್ಯಕ್ತಿತ್ವ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಅಂಗವಾಗಿ ಮರ್ಯಾದೆಗೇಡು ಹತ್ಯೆಗಳು ಹಾಗೂ ಮಹಿಳೆಯರು, ಮಕ್ಕಳ ಮೇಲಿನ ಅಪರಾಧಗಳು ಸಂಪೂರ್ಣವಾಗಿ ಅಂತ್ಯಗೊಳ್ಳಬೇಕು ಎಂದು ಆಗ್ರಹಿಸಿ ಎಐಡಿಎಸ್‌ಒ ಹಾಸನ ಜಿಲ್ಲಾ ಸಮಿತಿಯಿಂದ ಶನಿವಾರ ನಗರದ ವಿವಿಧ ಶಾಲಾ ಕಾಲೇಜು ಬಳಿ ಪ್ರತಿರೋಧ ದಿನ ಆಚರಿಸಲಾಯಿತು.ನಗರದ ಮಹಾರಾಜ ಪಾರ್ಕ್, ಆನಂದಭಾರತಿ ಪ್ರೌಢಶಾಲೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಪ್ರಧಾನ, ಸರ್ಕಾರಿ ಬಾಲಕರ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಂಗರಹಳ್ಳಿ ಹಾಗೂ ಇತರ ಭಾಗಗಳಲ್ಲಿ ಶಾಲಾ ಆವರಣಗಳಲ್ಲಿ ಕಾರ್ಯಕ್ರಮಗಳು ನಡೆಯಿತು. ಈ ವೇಳೆ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಹೆಸರಿನಲ್ಲಿ ರಾಜ್ಯದ ೪೦ ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷೆ ಚೈತ್ರ ಹಾಗೂ ಜಿಲ್ಲಾ ಕಾರ್ಯದರ್ಶಿ ಸುಷ್ಮಾ ಮಾತನಾಡಿ, ಸಮಾಜದಲ್ಲಿ ಮರ್ಯಾದೆಗೇಡು ಹತ್ಯೆಗಳಂತಹ ಅಮಾನುಷ ಘಟನೆಗಳು ಹೆಚ್ಚುತ್ತಿರುವುದು ಗಂಭೀರ ಚಿಂತೆಯ ವಿಷಯವಾಗಿದೆ ಎಂದರು. ಇತ್ತೀಚೆಗೆ ಹುಬ್ಬಳ್ಳಿ ಹಾಗೂ ಬೆಂಗಳೂರು ದೇವನಹಳ್ಳಿಯಲ್ಲಿ ನಡೆದ ಘಟನೆಗಳು ಇದಕ್ಕೆ ಸ್ಪಷ್ಟ ಉದಾಹರಣೆಗಳಾಗಿವೆ ಎಂದು ಅವರು ಉಲ್ಲೇಖಿಸಿದರು. ಜಾತಿ ಮತ್ತು ಧರ್ಮಕ್ಕಿಂತ ಮಾನವೀಯತೆಯೇ ಮಿಗಿಲು ಎಂಬ ಮೌಲ್ಯ ಸಮಾಜದಲ್ಲಿ ಗಟ್ಟಿಯಾಗಿ ನೆಲೆಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಸಾವಿತ್ರಿಬಾಯಿ ಫುಲೆ ಅವರನ್ನು ಕೇವಲ ಶಾಂತ ಸ್ವಭಾವದ ಶಿಕ್ಷಕಿಯೆಂದು ಮಾತ್ರ ಸ್ಮರಿಸುವುದು ಅಪೂರ್ಣ ಚಿತ್ರಣವಾಗುತ್ತದೆ ಎಂದ ಅವರು, ಸಾವಿರಾರು ವರ್ಷಗಳ ಶೋಷಣೆಯ ವಿರುದ್ಧ ಶಿಕ್ಷಣವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಹೋರಾಟಗಾರ್ತಿ ಅವರು ಎಂದು ಬಣ್ಣಿಸಿದರು. "ಗೋ ಗೆಟ್ ಎಜುಕೇಶನ್ " ಕವಿತೆಯಲ್ಲಿ ಶಿಕ್ಷಣ ಪಡೆದು ಜಾತಿಯ ಸಂಕೋಲೆಗಳನ್ನು ಮುರಿಯುವಂತೆ ಅವರು ನೀಡಿದ ಕರೆ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯ ಪ್ರಕಾರ ೨೦೨೩ರಿಂದ ೨೦೨೫ರ ಜುಲೈವರೆಗೆ ಕರ್ನಾಟಕದಲ್ಲಿ ೧೬,೨೭೩ ಲೈಂಗಿಕ ದೌರ್ಜನ್ಯ, ೫,೪೫೬ ವರದಕ್ಷಿಣೆ ಪ್ರಕರಣಗಳು, ೧೦,೫೧೦ ಗೃಹಹಿಂಸೆ ಹಾಗೂ ೪೧೭ ಬಾಲ್ಯವಿವಾಹ ಪ್ರಕರಣಗಳು ಸೇರಿ ಒಟ್ಟು ೪೩,೦೫೨ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು. ಶಿಕ್ಷಣ ಎಲ್ಲರಿಗೂ ಲಭ್ಯವಾಗಬೇಕು ಎಂಬುದು ಸಾವಿತ್ರಿಬಾಯಿ ಫುಲೆ ಅವರ ಮೂಲ ಆಶಯವಾಗಿದ್ದು, ಅದಕ್ಕೆ ವಿರುದ್ಧವಾಗಿ ಇಂದಿನ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ಖಂಡನೀಯ ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಎಐಡಿಎಸ್‌ಒ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ, ಜಿಲ್ಲಾ ಉಪಾಧ್ಯಕ್ಷ ಅಭಿಷೇಕ್, ಜಿಲ್ಲಾ ಕಾರ್ಯದರ್ಶಿ ಸುಷ್ಮಾ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.