3ನೇ ವರ್ಷಕ್ಕೆ ಕಾಲಿಟ್ಟ ರಾಯಚೂರಿಗೆ ಏಮ್ಸ್ ಹೋರಾಟ

| Published : May 14 2024, 01:06 AM IST

3ನೇ ವರ್ಷಕ್ಕೆ ಕಾಲಿಟ್ಟ ರಾಯಚೂರಿಗೆ ಏಮ್ಸ್ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ನೆನ್ನೆಗೆ 732 ದಿನ ಪೂರೈಕೆ. ಸರ್ಕಾರ ಎಚ್ಚೆತ್ತಕೊಳ್ಳದಿದ್ದರೆ ದೆಹಲಿಯಲ್ಲಿ ಹೋರಾಟ ಆರಂಭಿಸಬೇಕಾಗುತ್ತದೆ. ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ಐಐಟಿಯಿಂದ ವಂಚಿತಗೊಂಡ ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಪಂಪಣ್ಣ ನೆರವಿ ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ದೇಶದ ಪ್ರತಿಷ್ಠಿತ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯನ್ನು ರಾಯಚೂರು ಜಿಲ್ಲೆಗೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏಮ್ಸ್ ಮಂಜೂರಾತಿ ಹೋರಾಟ ಸಮಿತಿ ನಡೆಸುತ್ತಿರುವ ನಿರಂತರ ಐತಿಹಾಸಿಕ ಹೋರಾಟ 2ನೇ ವರ್ಷ ಪೂರ್ಣಗೊಳಿಸಿ ಸೋಮವಾರ 3ನೇ ವರ್ಷಕ್ಕೆ ಕಾಲಿಟ್ಟಿತು.

ಹೋರಾಟ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೋರಾಟಕ್ಕೆ ಬೆಂಬಲಿಸಿದ ಸ್ವಾತಂತ್ರ್ಯ ಹೋರಾಟಗಾರ ಪಂಪಣ್ಣ ನೆರವಿ ಮಾತನಾಡಿ, ರಾಯಚೂರಿಗೆ ಏಮ್ಸ್ ನೀಡುವಂತೆ ಈಗಾಗಲೇ ಎರಡು ವರ್ಷದಿಂದ ಸುದೀರ್ಘ ಹೋರಾಟ ನಡೆಸಲಾಗಿದೆ. ಇನ್ನೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಇನ್ನೂ ಮುಂದಾದರೂ ಸರ್ಕಾರ ಏಮ್ಸ್ ಮಂಜೂರು ಮಾಡದಿದ್ದರೆ ದೆಹಲಿಯಲ್ಲಿ ನಮ್ಮ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇಂದಿಗೆ ಹೋರಾಟ ಶುರುವಾಗಿ 732 ದಿನ ಪೂರೈಸಿದೆ. ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ಐಐಟಿಯಿಂದ ವಂಚಿತಗೊಂಡ ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕು. ಕೇಂದ್ರ ಸರ್ಕಾರ ಇನ್ನಾದರೂ ನಮ್ಮ ಸಹನೆ ಪರೀಕ್ಷಿಸುವುದನ್ನು ಬಿಟ್ಟು ಹೋರಾಟವನ್ನು ಗೌರವಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಗಣಿಸಿ ಕೂಡಲೇ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವುದಾಗಿ ಘೋಷಣೆ ಮಾಡಿ ಅಧಿಸೂಚನೆ ಪ್ರಕಟಿಸಬೇಕು. ಇಲ್ಲದಿದ್ದರೆ ದೆಹಲಿಗೆ ಬಂದು ಅಲ್ಲಿ ನಮ್ಮ ಹೋರಾಟವನ್ನು ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಹೋರಾಟದ ಸಂಚಾಲಕರಾದ ಡಾ.ಬಸವರಾಜ್ ಕಳಸ, ಅಶೋಕ್ ಕುಮಾರ್ ಜೈನ್, ಮುಖಂಡರಾದ ಕಾಮರಾಜ ಪಾಟೀಲ್, ಡಾ.ಎಸ್.ಎಸ್.ಪಾಟೀಲ್, ಎಸ್ ಮಾರಪ್ಪ ವಕೀಲರು, ರಮೇಶ್ ರಾವ್ ಕಲ್ಲೂರಕರ್, ಗುರುರಾಜ್ ಕುಲಕರ್ಣಿ, ಜಗದೀಶ್ ಪುರತಿಪ್ಲಿ, ನರಸಪ್ಪ ಬಾಡಿಯಾಳ, ಮಹಾವೀರ್, ಬಸವರಾಜ್, ಪ್ರಭು ನಾಯಕ್, ಬಿ.ಶ್ಯಾಮ್, ವೀರಭದ್ರ ಗೌಡ, ರೂಪ ಶ್ರೀನಿವಾಸ್ ನಾಯಕ್, ಶ್ರೀನಿವಾಸ್ ಕಲವಲ ದೊಡ್ಡಿ, ವೀರಭದ್ರಯ್ಯ ಸ್ವಾಮಿ ಸೇರಿ ಅನೇಕರು ಪಾಲ್ಗೊಂಡಿದ್ದರು.

ಟೆಂಟ್‌ನಲ್ಲಿದ್ದ ಸಾಮಗ್ರಿಗಳ ಕಳವು, ಬೇಸರ

ಕಳೆದ ಎರಡು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಹೋರಾಟ ವೇದಿಕೆಯ ಟೆಂಟ್‌ನಲ್ಲಿ ಇರಿಸಲಾಗಿದ್ದ ಅಗತ್ಯ ಸಾಮಗ್ರಿಗಳ ಕಳುವಾಗಿರುವುದು ಹೋರಾಟಗಾರದಲ್ಲಿ ಬೇಸರ ಮೂಡಿಸಿದೆ. ಟೆಂಟ್‌ನಲ್ಲಿರಿಸಿದ್ದ ಬೆಡ್‌ಗಳು, ವಾಟರ್ ಕ್ಯಾನ್‌ಗಳು ಕಳುವಾಗಿದ್ದರೆ ಈಚೆಗೆ ಮೈಕ್‌ಗೆ ಬಳಸುವ ಅಂದಾಜು 20 ಸಾವಿರ ಮೌಲ್ಯದ ಎಂಪ್ಲಾಫಯರ್ ಕೂಡ ಕಳುವಾಗಿದೆ. ಕಬ್ಬಿಣದ ಸರಪಳಿಯಿಂದ ಕಟ್ಟಿದ್ದರೂ ಕಳ್ಳರು ಮುರಿದುಕೊಂಡು ಹೋಗಿದ್ದಾರೆ. ಈ ಬಗ್ಗೆ ಪಶ್ಚಿಮ ಠಾಣೆಗೆ ಕಳೆದ ಮೇ 1ರಂದೇ ದೂರು ನೀಡಿದ್ದರೂ ಇನ್ನು ಕ್ರಮ ಕೈಗೊಂಡಿಲ್ಲ ಎಂದು ಹೋರಾಟದ ಸಂಚಾಲಕ ಅಶೋಕ ಕುಮಾರ ಸಿ.ಕೆ.ಜೈನ್‌ ಅಸಮಾಧಾನ ಹೊರಹಾಕಿದರು.