ಸಾರಾಂಶ
ಶಿರಸಿ: ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಗಾಂಧಿ ಭಾರತ ಕಾರ್ಯಕ್ರಮದ ನೆನಪಿಗಾಗಿ 100 ವಿಧಾನಸಭಾ ಕ್ಷೇತ್ರದಲ್ಲಿ ೧೦೦ ಕಾಂಗ್ರೆಸ್ ಕಚೇರಿಗಳಿಗೆ ಶಂಕುಸ್ಥಾಪನೆ ಮಾಡಲಾಗುತ್ತದೆ. ಶಿರಸಿಯಲ್ಲಿಯೂ ಕಾಂಗ್ರೆಸ್ ನೂತನ ಜಿಲ್ಲಾ ಕಚೇರಿ ನಿರ್ಮಿಸಲಾಗುತ್ತದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಈ ವೇಳೆ ಕಾಂಗ್ರೆಸ್‌ಗೆ ಸ್ವಂತ ಮನೆ ನಿರ್ಮಿಸಲು ತೀರ್ಮಾನ ಮಾಡಿದ್ದೇವೆ. ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದು ಶಂಕುಸ್ಥಾಪನೆ ಮಾಡಲಿದ್ದು, ಜಿಲ್ಲೆಯ ೧೪ ಬ್ಲಾಕ್‌ಗಳಲ್ಲಿ ಹೊಸ ಕಚೇರಿ ನಿರ್ಮಾಣ ಮಾಡಲಾಗುತ್ತದೆ ಎಂದರು.ಬಿಜೆಪಿಯ ದುರಾಡಳಿತ ವಿರುದ್ಧ, ಜನವಿರೋಧಿ ನೀತಿಯನ್ನು ಜನರಿಗೆ ತಿಳಿಸಿದ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ೪ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಲು ಸಾಧ್ಯವಾಯಿತು. ರಾಜ್ಯದ ಜನರಿಗೆ ಭರವಸೆ ನೀಡಿರುವುದನ್ನು ಮೊದಲ ಸಂಪುಟ ಸಭೆಯಲ್ಲಿ ತೀರ್ಮಾನಿಸಿ, ೫ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ಉಪಚುನಾವಣೆಯಲ್ಲಿ 3 ಸ್ಥಾನವನ್ನು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಜನರು ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.
ಭ್ರಷ್ಟಾಚಾರ, ಹಗರಣದಲ್ಲಿ ಸಿದ್ದರಾಮಯ್ಯ ಪಾಲು ಇಲ್ಲದಿದ್ದರೂ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರಬೇಕು ಎಂಬ ಉದ್ದೇಶದಿಂದ ವಿರೋಧ ಪಕ್ಷದವರು ಮಾಡಿದ ಆರೋಪ, ಪ್ರತಿಭಟನೆಗೆ ಮತದಾರರು ಉಪಚುನಾವಣೆಯಲ್ಲಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಆರೋಪಗಳಿಗೆ ತಕ್ಕ ಉತ್ತರ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಜನತಾ ನ್ಯಾಯಾಲಯದಲ್ಲಿ ಸಾಬೀತಾಗಿದೆ. ವಿರೋಧಕ್ಕಾಗಿ ವಿರೋಧ ಪಕ್ಷ ಎಂಬುದನ್ನು ನಿಲ್ಲಿಸಲು ಸೂಕ್ತ ಸಮಯ ಎಂದರು.ಗ್ಯಾರಂಟಿ ಅನುಷ್ಠಾನದಲ್ಲಿರುವ ಲೋಪದೋಷ ಸರಿ ಮಾಡಿಸುತ್ತೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸುವುದಿಲ್ಲ. ಗ್ಯಾರಂಟಿ ಸಮಿತಿಗೆ ಇನ್ನೂ ಹೆಚ್ಚಿನ ಅಧಿಕಾರ ನೀಡುತ್ತೇವೆ ಸಾರ್ವಜನಿಕರು ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಬ್ಬಾಸ ತೋನ್ಸೆ, ಪ್ರಮುಖರಾದ ವೆಂಕಟೇಶ ಹೆಗಡೆ ಹೊಸಬಾಳೆ, ಸಿ.ಎಫ್. ನಾಯ್ಕ, ಜ್ಯೋತಿ ಪಾಟೀಲ, ಸುಜಾತಾ ಗಾಂವ್ಕರ, ಬಸವರಾಜ ದೊಡ್ಮನಿ ಮತ್ತಿತರರು ಇದ್ದರು.
ಮುಂದಿನ ದಿನಗಳಲ್ಲಿ ಜಿಲ್ಲಾಧ್ಯಕ್ಷರು ಘಟ್ಟದ ಮೇಲಿರುತ್ತಾರೆ
ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಘಟ್ಟದ ಮೇಲಿನ ಸಂಪರ್ಕದಿಂದ ದೂರ ಇದ್ದಾರೆ ಎಂದು ತಮ್ಮ ಕಾರ್ಯಕರ್ತರು ಹೇಳುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಸೋಜಾ, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಭೇಟಿ ನೀಡುವುದರ ಜತೆ ಶಿರಸಿಯಲ್ಲಿಯೂ ಭೇಟಿಗೆ ಲಭ್ಯವಿರುತ್ತಾರೆ ಎಂದು ಸಮಜಾಯಿಷಿ ನೀಡಿದರು.