ಸಾರಾಂಶ
ಚಿತ್ರದುರ್ಗ: ಪೋಷಕರು ಅನೇಕ ಕನಸುಗಳ ಹೊತ್ತು, ಕಠಿಣ ಪರಿಸ್ಥಿತಿ ಎದುರಿಸಿ ತಮ್ಮ ವ್ಯಾಸಂಗಕ್ಕೆ ಊರುಗೋಲಾಗಿರುತ್ತಾರೆ. ಆವರ ಕನಸುಗಳ ಸಾಕಾರಗೊಳಿಸುವತ್ತ ವಿದ್ಯಾರ್ಥಿಗಳ ಗುರಿ ಕೇಂದ್ರೀಕೃತವಾಗಿರಬೇಕು ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
ಚಿತ್ರದುರ್ಗ: ಪೋಷಕರು ಅನೇಕ ಕನಸುಗಳ ಹೊತ್ತು, ಕಠಿಣ ಪರಿಸ್ಥಿತಿ ಎದುರಿಸಿ ತಮ್ಮ ವ್ಯಾಸಂಗಕ್ಕೆ ಊರುಗೋಲಾಗಿರುತ್ತಾರೆ. ಆವರ ಕನಸುಗಳ ಸಾಕಾರಗೊಳಿಸುವತ್ತ ವಿದ್ಯಾರ್ಥಿಗಳ ಗುರಿ ಕೇಂದ್ರೀಕೃತವಾಗಿರಬೇಕು ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಗ್ರಾಜ್ಯುಯೇಷನ್ ಡೇ-2024 ಪದವಿ ಪ್ರದಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಲಿಂಗೈಕ್ಯ ಜಗದ್ಗುರು ಮಲ್ಲಿಕಾರ್ಜುನ ಮಹಾಸ್ವಾಮೀಜಿಗಳು ಮಧ್ಯ ಕರ್ನಾಟಕದ ಬಡಮಕ್ಕಳು ಎಂಜಿನಿಯರಿಂಗ್ ಶಿಕ್ಷಣ ಪಡೆಯಬೇಕೆಂಬ ದೂರದೃಷ್ಟಿಯಿಂದ 1984ರಲ್ಲಿ ಎಸ್‌ಜೆಎಂಐಟಿ ಕಾಲೇಜು ಸ್ಥಾಪನೆ ಮಾಡಿದರು. ಕಾಲೇಜಲ್ಲಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡಿ ಸಾವಿರಾರು ಎಂಜಿನಿಯರುಗಳನ್ನು ಹೊರತರಲಾಗಿದೆ. ಸ್ವಾವಲಂಬನೆ ಜೀವನ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಈ ಕಾಲೇಜು ಪ್ರಾರಂಭವಾಗಿದೆ ಎಂದು ತಿಳಿಸಿದರು. ಸುಮಾರು 20 ವರ್ಷಗಳ ಕಾಲ ವಿದ್ಯಾರ್ಥಿ ಜೀವನವನ್ನು ಮುಗಿಸಿ ಹೊಸದಾದ ಜಗತ್ತಿಗೆ ಪಾದಾರ್ಪಣೆ ಮಾಡುತ್ತಿದ್ದೀರಾ. ನಾನು ದುಡಿಯಬೇಕು, ಸ್ವಂತ ಗಳಿಕೆ ಮಾಡಿ ತಂದೆ-ತಾಯಿ, ಸೋದರ-ಸೋದರಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಉತ್ಸಾಹ ಹೊಂದಿದ್ದೀರಿ. ಎಲ್ಲಾ ವಿದ್ಯಾಭ್ಯಾಸಕ್ಕೂ ಮಾರುಕಟ್ಟೆಯಲ್ಲಿ ಮೌಲ್ಯವಿರುತ್ತೆ ಎಂದು ಭಾವಿಸಿಕೊಳ್ಳುವುದು ಬೇಡ. ಶಿಕ್ಷಣ ಎನ್ನುವುದು ಕ್ರಿಯಾಶೀಲಗೊಳಿಸುವ, ಆತ್ಮಸ್ಥೈರ್ಯ ಹೆಚ್ಚಿಸುವಂತಹ ಮಾಧ್ಯಮ. ನೀವು ಜ್ಞಾನಸಂಪಾದನೆ ಮಾಡಬೇಕು. ನಿಮ್ಮದೇ ಆದಂತಹ ಕ್ರಿಯಾಶೀಲತೆಯನ್ನು, ಕೌಶಲ್ಯವನ್ನು ಬಳಸಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು ಎಂದರು. ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ವಿಷ್ಣುಕಾಂತ.ಎಸ್ ಚಟಪಲ್ಲಿ ಮಾತನಾಡಿ, ನಾನು ಇದೇ ಕಾಲೇಜಿನಲ್ಲಿ 12 ವರ್ಷಗಳ ಕಾಲ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದೇನೆ. ವೃತ್ತಿ ಜೀವನ ಪ್ರಾರಂಭಿಸಿದ ಕಾಲೇಜಿಗೆ ಈಗ ಪದವಿ ಪ್ರಮಾಣ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿರುವುದು ಸಂತಸದ ವಿಷಯ. ಕಳೆದ ಸಾಲಿಗೆ ಹೋಲಿಸಿದಲ್ಲಿ ಕಾಲೇಜಿನ ಗುಣಮಟ್ಟ ವೃದ್ಧಿಯಾಗಿದೆ. ಉತ್ತಮ ಮೂಲಭೂತ ಸೌಕರ್ಯ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಭರತ್.ಪಿ.ಬಿ ಮಾತನಾಡಿ, ನಾಲ್ಕು ವರ್ಷಗಳ ಕಾಲ ಪರಿಶ್ರಮ ಹಾಗೂ ಸಮರ್ಪಣಾ ಮನೋಭಾವದಿಂದ ಎಂಜಿನಿಯರಿಂಗ್ ಪದವಿ ಗಳಿಸಿದ್ದೀರಿ. ಹೊಸ ಬದುಕಿನೆಡೆಗೆ ಕಾಲಿಡುತ್ತಿದ್ದೀರಿ. 4 ವರ್ಷಗಳ ಕಾಲಮಾನದಲ್ಲಿ ಪಡೆದ ಶಿಕ್ಷಣ, ಕೌಶಲ್ಯ ಪರಿಣಿತಿ, ನಿಮ್ಮ ಮುಂದಿನ ಉದ್ಯೋಗ ಬದುಕಿಗೆ ಸಹಕಾರಿಯಾಗಲಿ. ಯಾವುದೇ ಸಮಸ್ಯೆಯನ್ನು ಪರಿಹರಿಸುವ ಸಾರ್ಮಥ್ಯವನ್ನು ಹಾಗೂ ನಾಯಕತ್ವ ಗುಣ ಮೈಗೂಡಿಸಿಕೊಳ್ಳಿ ಎಂದು ಹೇಳಿದರು.ಡಾ.ಸತೀಶ್.ಜೆ ಪ್ರತಿಜ್ಞಾವಿಧಿ ಬೋಧಿಸಿದರು. ಸಮಾರಂಭದಲ್ಲಿ 200 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವಿವಿಧ ಇಲಾಖೆ ಮುಖ್ಯಸ್ಥರುಗಳಾದ ಡಾ.ಕುಮಾರಸ್ವಾಮಿ.ಬಿ.ಜಿ, ಡಾ.ಕೃಷ್ಣಾರೆಡ್ಡಿ.ಕೆ.ಆರ್, ಡಾ.ಸಿದ್ಧೇಶ್.ಕೆ.ಬಿ, ಡಾ.ಶ್ರೀಶೈಲ.ಜೆ.ಎಂ, ಡಾ.ಶಿವಕುಮಾರ್.ಎಸ್. ಪಿ, ಡಾ.ಲೋಕೇಶ್.ಎಚ್.ಜೆ, ಪ್ರೊ.ಶಶಿಧರ್.ಎ.ಪಿ, ಡಾ.ನಿರಂಜನ್ ಉಪಸ್ಥಿತರಿದ್ದರು.