ಧರ್ಮಸ್ಥಳ ಸಂಸ್ಥೆಯಿಂದ 100 ಎಕರೆ ಸಿರಿಧಾನ್ಯ ಬೆಳೆಯುವ ಗುರಿ

| Published : Jun 24 2024, 01:39 AM IST / Updated: Jun 24 2024, 12:23 PM IST

ಧರ್ಮಸ್ಥಳ ಸಂಸ್ಥೆಯಿಂದ 100 ಎಕರೆ ಸಿರಿಧಾನ್ಯ ಬೆಳೆಯುವ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

2024-25ನೇ ಸಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ನರಗುಂದ ತಾಲೂಕಿನಲ್ಲಿ 100 ಎಕರೆ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುವ ಗುರಿ ಹಾಕಿಕೊಂಡಿದೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: 2024-25ನೇ ಸಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ತಾಲೂಕಿನಲ್ಲಿ 100 ಎಕರೆ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುವ ಗುರಿ ಹಾಕಿಕೊಂಡಿದೆ. ಈಗ ರೈತರಿಗೆ ಸಿರಿಧಾನ್ಯ ಬೀಜಗಳನ್ನು ವಿತರಿಸುತ್ತಿದೆ.

ರೈತರು ಯಾವುದೇ ರಾಸಾಯನಿಕ ಗೊಬ್ಬರ ಬಳಕೆ ಮಾಡುವಂತಿಲ್ಲ ಅಥವಾ ಔಷಧ ಸಿಂಪಡಣೆ ಮಾಡುವಂತಿಲ್ಲ. ಸಾವಯುವ ಗೊಬ್ಬರ ಬಳಸಬಹುದು ಎಂದು ಸಂಸ್ಥೆಯವರು ತಿಳಿಸಿದ್ದಾರೆ.

ಸಂಸ್ಥೆಯಿಂದ ಬೆಳೆ ಖರೀದಿ: ಸಂಸ್ಥೆಯವರು ಈಗಾಗಿ ರೈತರಿಗೆ 50 ಕೆಜಿ ನವಣೆ, 10 ಕೆಜಿ ಕೊರಲೆ ಬೀಜ ವಿತರಣೆ ಮಾಡಿದ್ದಾರೆ. 60 ರೈತರಿಗೆ ನೀಡಲಾಗಿದೆ. ನವಣೆ 1 ಕೆಜಿಗೆ ₹90, ಕೊರಲೆ ₹110ಯಂತೆ ಬೀಜ ಮಾರಾಟ ಮಾಡಿದ್ದಾರೆ. ಈಗ ರೈತರು ಬಿತ್ತನೆ ಆರಂಭಿಸಿದ್ದಾರೆ. 3-4 ತಿಂಗಳಲ್ಲಿ ಬೆಳೆ ಬರಲಿದೆ. ಬೆಳೆ ಬಂದ ಆನಂತರ ಕೊಪ್ಪಳದ ಶ್ರೀ ರೈತ ಸಿರಿ ಧಾನ್ಯ ಕಂಪನಿಯವರೇ ರೈತರ ಮನೆಗೆ ಬಂದು ಮಾರುಕಟ್ಟೆ ಬೆಲೆಯಂತೆ ಖರೀದಿಸುತ್ತಾರೆ.ಸಿರಿಧಾನ್ಯದ ಲಾಭ: ಸಿರಿಧಾನ್ಯಗಳಲ್ಲಿ ಅಡಗಿರುವ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಈಗಾಗಲೇ ಜನರಿಗೆ ತಿಳಿವಳಿಕೆ ಉಂಟಾಗುತ್ತಿದೆ. ಸಿರಿಧಾನ್ಯಗಳು ಮನುಷ್ಯರನ್ನು ರೋಗ-ರುಜಿನಗಳಿಂದ ದೂರ ಇಡುತ್ತದೆ. ದೀರ್ಘಕಾಲದ ಕಾಯಿಲೆಗಳಿಂದ ಕೂಡ ನಮ್ಮನ್ನು ಕಾಪಾಡುತ್ತದೆ. ಸಿರಿಧಾನ್ಯಗಳಲ್ಲಿ ಪೌಷ್ಟಿಕಾಂಶಗಳ ಭಂಡಾರವೇ ಅಡಗಿದೆ. ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲ ಬಗೆಯ ಪೌಷ್ಟಿಕ ಸತ್ವಗಳು ಕೂಡ ಈ ಧಾನ್ಯಗಳಲ್ಲಿ ಕಂಡು ಬರುತ್ತದೆ. ಮುಖ್ಯವಾಗಿ ತಾಮ್ರ, ಖನಿಕಾಂಶ, ಪ್ರೋಟಿನ್, ವಿಟಮಿನ್ಸ್, ಮೆಗ್ನೀಷಿಯಂ, ಪಾಸ್ಪರಸ್, ಮ್ಯಾಂಗನೀಸ್, ನಾರಿನಾಂಶ ಹಾಗೂ ಇತರ ಪೌಷ್ಟಿಕ ಸತ್ವಗಳು ಸಾಕಷ್ಟು ಪ್ರಮಾಣದಲ್ಲಿ ಇದರಲ್ಲಿ ಕಂಡು ಬರುತ್ತದೆ.

ಜನರಲ್ಲಿ ಸಿರಿಧಾನ್ಯದ ಕುರಿತು ಜಾಗೃತಿ ಮೂಡಿಸುವುದು, ಹೆಚ್ಚು ಬಳಕೆಗೆ ಪ್ರೋತ್ಸಾಹಿಸುವುದು ಹಾಗೂ ರೈತರು ಸಿರಿಧಾನ್ಯ ಬೆಳೆಯಲು ಅನುಕೂಲ ಕಲ್ಪಿಸುವುದು ಧರ್ಮಸ್ಥಳ ಸಂಸ್ಥೆಯ ಉದ್ದೇಶ. ನರಗುಂದ ತಾಲೂಕಿನಲ್ಲಿ ಪ್ರಸ್ತುತ ವರ್ಷ 100 ಎಕರೆ ಸಿರಿಧಾನ್ಯ ಬೇಸಾಯ ಮಾಡುವ ಯೋಜನೆ ಹಮ್ಮಿಕೊಂಡಿದ್ದೇವೆ. ಇಲ್ಲಿಯವರೆಗೂ ಬೆಳವಣಿಕಿ ಮತ್ತು ಬನಹಟ್ಟಿ ಗ್ರಾಮದಲ್ಲಿ ರೈತರು ಮುಂಗಾರು ಹಂಗಾಮಿನಲ್ಲಿ 60 ಎಕರೆಯಲ್ಲಿ ಕೊರಲೆ ಮತ್ತು ನವಣೆ ಬರಗು ಸಿರಿಧಾನ್ಯ ಬೆಳೆ ಬಿತ್ತನೆ ಮಾಡಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಕೃಷಿ ಮೇಲ್ವಿಚಾರಕ ಗುಡ್ಡಚಾರಿ ಬಡಿಗೇರ ಹೇಳಿದರು.