ಉದ್ಯಮಗಳ ಬೆಳವಣಿಗೆಗೆ ಪೂರಕ ನೀತಿ, ಬಲಿಷ್ಠ ಸಂಶೋಧನಾ ಕೇಂದ್ರಗಳು, ಕೌಶಲ್ಯಯುತ ಮಾನವ ಸಂಪನ್ಮೂಲದೊಂದಿಗೆ ಕರ್ನಾಟಕವನ್ನು ಎಐ, ಡೀಪ್‌ಟೆಕ್‌ ಮತ್ತು ಸೆಮಿಕಂಡಕ್ಟರ್‌ ಉತ್ಪಾದನೆಯಲ್ಲಿ ಜಾಗತಿಕ ಕೇಂದ್ರವಾಗಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಉದ್ಯಮಗಳ ಬೆಳವಣಿಗೆಗೆ ಪೂರಕ ನೀತಿ, ಬಲಿಷ್ಠ ಸಂಶೋಧನಾ ಕೇಂದ್ರಗಳು, ಕೌಶಲ್ಯಯುತ ಮಾನವ ಸಂಪನ್ಮೂಲದೊಂದಿಗೆ ಕರ್ನಾಟಕವನ್ನು ಎಐ, ಡೀಪ್‌ಟೆಕ್‌ ಮತ್ತು ಸೆಮಿಕಂಡಕ್ಟರ್‌ ಉತ್ಪಾದನೆಯಲ್ಲಿ ಜಾಗತಿಕ ಕೇಂದ್ರವಾಗಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ರಾಜ್ಯ ಐಟಿ-ಬಿಟಿ ಇಲಾಖೆಯಿಂದ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಅಯೋಜಿಸಲಾಗಿರುವ 29ನೇ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೆ ಮಂಗಳವಾರ ಚಾಲನೆ ನೀಡಿದ ಮಾತನಾಡಿದ ಡಿ.ಕೆ.ಶಿವಕುಮಾರ್‌, ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್‌ಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ. ಜಾಗತಿಕ ಸಂಸ್ಥೆಗಳು ನಮ್ಮ ಮೇಲೆ ಅಪಾರ ವಿಶ್ವಾಸವನ್ನಿಟ್ಟ ಪರಿಣಾಮ ಸಾಫ್ಟ್‌ವೇರ್‌ ಮತ್ತು ಸೇವೆಗಳ ರಫ್ತಿನಲ್ಲಿ ಭಾರತದ ಆದಾಯದ ಪ್ರತಿ ಐದು ಡಾಲರ್‌ಗಳಲ್ಲಿ ಎರಡು ಡಾಲರ್‌ ಕರ್ನಾಟಕದಿಂದ ಬರುತ್ತಿದೆ. ಕಳೆದ ಒಂದು ವರ್ಷದಲ್ಲಿ ಅದು 173 ಬಿಲಿಯನ್‌ ಡಾಲರ್‌ನಷ್ಟಿತ್ತು. ಇದು ಅನೇಕ ರಾಷ್ಟ್ರಗಳ ಆರ್ಥಿಕತೆಗಿಂತ ಹೆಚ್ಚಾಗಿದೆ. ಕರ್ನಾಟಕವು ವಿದೇಶಿ ಬಂಡವಾಳ ಹೂಡಿಕೆಯಲ್ಲೂ ಮುಂಚೂಣಿಯಲ್ಲಿದೆ ಎಂದರು.

1 ಬಿಲಿಯನ್‌ ಡಾಲರ್‌ಗೂ ಹೆಚ್ಚು ಹೂಡಿಕೆ:

ಕರ್ನಾಟಕದಲ್ಲಿ 1 ಸಾವಿರಕ್ಕೂ ಹೆಚ್ಚಿನ ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ)ಗಳಿದ್ದು, 2025ರ ಒಂದೇ ವರ್ಷದಲ್ಲಿ 30ಕ್ಕೂ ಹೆಚ್ಚಿನ ಜಿಸಿಸಿಗಳು ರಾಜ್ಯಕ್ಕೆ 1 ಬಿಲಿಯನ್‌ ಡಾಲರ್‌ಗೂ ಹೆಚ್ಚಿನ ಹೂಡಿಕೆ ಮಾಡಿವೆ. ಭಾರತದ ಸ್ವಂತ ಎಐ ಮಾದರಿ ಅಭಿವೃದ್ಧಿಪಡಿಸುವಲ್ಲಿ ಬೆಂಗಳೂರು ಮೂಲದ ಸರ್ವಂ ಮಹತ್ವದ ಪಾತ್ರವಹಿಸಿದೆ. ಕರ್ನಾಟಕವು 1997ರಲ್ಲೇ ಐಟಿ ನೀತಿ, 2001ರಲ್ಲಿ ಬಿಟಿ ನೀತಿ ರೂಪಿಸಿ ದೇಶದಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ 24,000ಕ್ಕೂ ಹೆಚ್ಚಿನ ನವೋದ್ಯಮಗಳಿದ್ದು, ದೇಶದ ಪ್ರತಿ 5 ಕಂಪನಿಗಳಲ್ಲಿ 2 ಕಂಪನಿಗಳು ಬೆಂಗಳೂರಿನಲ್ಲಿ ಆರಂಭವಾದದ್ದಾಗಿವೆ. ಜಾಗತಿಕ ನವೋದ್ಯಮ ವ್ಯವಸ್ಥೆಯಲ್ಲಿ ಕರ್ನಾಟಕ 8ನೇ ಸ್ಥಾನದಲ್ಲಿ, ಏಷ್ಯಾದಲ್ಲಿ 2ನೇ ಸ್ಥಾನ ಪಡೆದಿದೆ. ತಂತ್ರಜ್ಞಾನ ಹೂಡಿಕೆಯಲ್ಲಿ ಬೆಂಗಳೂರು 4.4 ಬಿಲಿಯನ್‌ ಡಾಲರ್‌ ಆಕರ್ಷಿಸಿದ್ದು, ಕರ್ನಾಟಕದ ನವೋದ್ಯಮಗಳು ಒಟ್ಟಾರೆ 79 ಬಿಲಿಯನ್‌ ಡಾಲರ್‌ ಬಂಡವಾಳ ಸಂಗ್ರಹಿಸಿವೆ ಎಂದು ವಿವರಿಸಿದರು.

ಡೀಪ್‌ಟೆಕ್‌ಗೆ ಪ್ರೋತ್ಸಾಹ ನೀಡಲು ಆರಂಭಿಸಿರುವ ಇನ್ನೋವರ್ಸ್‌ ಕಾರ್ಯಕ್ರಮದ ಮೂಲಕ ಮುಂದಿನ 5 ವರ್ಷಗಳಲ್ಲಿ 35 ಉದ್ಯಮಗಳಿಗೆ ಸರ್ಕಾರ ಬೆಂಬಲ ನೀಡಲಿದೆ. ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌ಗಳು ಧಾರವಾಡ, ಮೈಸೂರುಗಳಿಗೆ ವಿಸ್ತರಿಸಲಾಗುತ್ತಿದೆ. ಸಾಗರ ಜೈವಿಕ ತಂತ್ರಜ್ಞಾನ ನೀತಿ, ಕರ್ನಾಟಕ ಸಾಗರ ಜೈವಿಕ ತಂತ್ರಜ್ಞಾನ ಮತ್ತು ನೀಲಿ ಆರ್ಥಿಕತೆ ಸಂಸ್ಥೆ, ಅಗ್ರಿ ಇನ್ನೋವೇಶನ್‌ ಪಾರ್ಕ್‌ ಮತ್ತು ಕೃಷಿಗಾಗಿ ಕೃಷಿಕಲ್ಪ ಉತ್ಕೃಷ್ಟತಾ ಕೇಂದ್ರದಂತಹ ಉಪಕ್ರಮಗಳ ಮೂಲಕ ಸರ್ಕಾರವು ಜೈವಿಕ ತಂತ್ರಜ್ಞಾನವನ್ನು ಸಾಗರ ಸಂಪನ್ಮೂಲಗಳು, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಿಗೆ ವಿಸ್ತರಿಸುತ್ತಿದೆ ಎಂದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಬ್ರೇನ್ಸ್‌, 2ಡಿ ನಾವೀನ್ಯತಾ ಕೇಂದ್ರ, ಇನ್ಫಿಫ್ಯಾಬ್‌, ಕೆ-ಹೀಲ್‌, ಇನ್ನೋವರ್ಸ್‌, ಕೃತಕ ಬುದ್ಧಿಮತ್ತೆ ಕೌಶಲ ತರಬೇತಿ ಯೋಜನೆ ಎಂಬ ಆರು ಉಪಕ್ರಮಗಳನ್ನು ಘೋಷಿಸಲಾಯಿತು.3 ದಿನಗಳ ಟೆಕ್‌ ಶೃಂಗಕ್ಕೆ ಚಾಲನೆ:

ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಸಮಾವೇಶವಾದ 29ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗಕ್ಕೆ ಚಾಲನೆ ನೀಡಲಾಗಿದೆ. ಟೆಕ್‌ ಶೃಂಗದಲ್ಲಿ ಸ್ವೀಡನ್‌, ಆಸ್ಟ್ರೇಲಿಯಾ, ಪೋಲೆಂಡ್‌, ಇಟಲಿ, ಅಮೆರಿಕ ಸೇರಿ 65ಕ್ಕೂ ಹೆಚ್ಚಿನ ದೇಶದ 10000ಕ್ಕೂ ಹೆಚ್ಚಿನ ಪ್ರತಿನಿಧಿಗಳು, 700ಕ್ಕೂ ಹೆಚ್ಚಿನ ಭಾಷಣಕಾರರು, 1500ಕ್ಕೂ ಹೆಚ್ಚಿನ ಪ್ರದರ್ಶಕರು ಪಾಲ್ಗೊಂಡಿದ್ದಾರೆ. 3 ದಿನ ನಡೆಯಲಿರುವ ಟೆಕ್‌ ಶೃಂಗಕ್ಕೆ 50000ಕ್ಕೂ ಹೆಚ್ಚು ಜನ ಭೇಟಿ ನೀಡುವ ನಿರೀಕ್ಷೆ ಇದೆ. ಜತೆಗೆ 16 ವಿಷಯಾಧಾರಿತ ವಿಭಾಗಗಳು, 13 ವೇದಿಕೆಗಳಲ್ಲಿ 140ಕ್ಕೂ ಹೆಚ್ಚಿನ ವಿಚಾರಗೋಷ್ಠಿಗಳು ನಡೆಯಲಿವೆ.ರೋಬೊಟಿಕ್ಸ್‌, ಫಿಸಿಕಲ್‌ ಎಐ ಕ್ಷೇತ್ರಗಳಲ್ಲಿ ಜಾಗತಿಕ ಕೇಂದ್ರ ಮಾಡಲು ಕ್ರಮ: ರೋಬೊಟಿಕ್ಸ್‌ ಮತ್ತು ಫಿಸಿಕಲ್‌ ಎಐ ಕ್ಷೇತ್ರಗಳಲ್ಲಿ ಬೆಂಗಳೂರನ್ನು ಜಾಗತಿಕ ಮಟ್ಟದ ಪ್ರಮುಖ ತಂತ್ರಜ್ಞಾನ ಕೇಂದ್ರವನ್ನಾಗಿಸುವ ಉದ್ದೇಶದೊಂದ ಬೆಂಗಳೂರು ಟೆಕ್‌ ಶೃಂಗಸಭೆಯಲ್ಲಿ ಬ್ರೇನ್ಸ್‌ ಎಂಬ ಮಹತ್ವದ ನಾವೀನ್ಯತಾ ಉಪಕ್ರಮ ಘೋಷಿಸಲಾಗಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.ಭಾರತೀಯ ವಿಜ್ಞಾನ ಸಂರ್ಸಥೆ ಆರ್ಟ್‌ಪಾರ್ಕ್‌ ಸಹಯೋಗದಲ್ಲಿ ಯೋಜನೆ ಅಭಿವೃದ್ಧಿಪಡಿಸಲಾಗುತ್ತದೆ. ಈ ಉಪಕ್ರಮ ಅಡಿ ಬ್ರೇನ್ಸ್‌, ರೋಬೊಟಿಕ್ಸ್‌, ಕೃತಕ ಬುದ್ಧಿಮತ್ತೆ, ಡೀಪ್‌ಟೆಕ್‌ ಕ್ಷೇತ್ರಗಳ ಸಂಶೋಧಕರು, ನವೋದ್ಯಮಿಗಳು ಹಾಗೂ ಉದ್ಯಮ ವಲಯದ ಪ್ರತಿನಿಧಿಗಳನ್ನು ಒಂದೇ ವೇದಿಕೆಯಲ್ಲಿ ತರಲಾಗುತ್ತದೆ. ದೇಶೀಯವಾಗಿ ರೋಬೊಟಿಕ್ಸ್‌, ಎಐ ತಂತ್ರಜ್ಞಾನ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು, ಸಂಶೋಧನಾ ಪ್ರಯೋಗಾಲಯಗಳಲ್ಲಿ ರೂಪುಗೊಳ್ಳುವ ನಾವೀನತ್ಯೆಗಳನ್ನು ನೈಜ ಜಗತ್ತಿನ ಬಳಕೆಗೆ ತರುವುದು ಹಾಗೂ ಉದ್ಯಮಗಳ ಅಗತ್ಯಗಳಿಗೆ ಅನುಗುಣವಾಗಿ ಸುಧಾರಿತ ತಂತ್ರಜ್ಞಾನವನ್ನು ರೂಪಿಸಲಾಗುವುದು ಎಂದು ಹೇಳಿದರು.

ಟೆಕ್‌ ಸಮ್ಮಿಟ್‌ನಲ್ಲಿ ಎಐ ತಂತ್ರಜ್ಞಾನ ಅನಾವರಣ:ಕರ್ನಾಟಕದ ಮೊದಲ ಎಲೆಕ್ಟ್ರಿಕ್‌ ಟ್ರ್ಯಾಕ್ಟರ್‌, ಹೈನುಗಾರಿಕೆಗೆ ಬಲ ನೀಡಲು ಎಐ ತಂತ್ರಜ್ಞಾನ ಅಳವಡಿಕೆ, ವಿದ್ಯಾರ್ಥಿಗಳೇ ಸಿದ್ಧಪಡಿಸಿದ ಸೋಲಾರ್‌ ಸೈಕಲ್‌, ಕೃತಕ ಬುದ್ಧಿಮತ್ತೆ ಆಧರಿಸಿದ ವೈವಿಧ್ಯಮಯ ತಂತ್ರಜ್ಞಾನಗಳ ಅನಾವರಣ.ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ತಂತ್ರಜ್ಞಾನದ ಬೆಳವಣಿಗೆಯ ಹತ್ತಾರು ಮುಖಗಳ ಪರಿಚಯಿಸುವ ಪ್ರದರ್ಶನ ಬೆರಗು ಮೂಡಿಸುತ್ತಿವೆ.

ಹಸುಗಳಿಂದ ಹಾಲು ತೆಗೆಯಲು ಹಲವು ರೀತಿಯ ಯಂತ್ರಗಳು ಆವಿಷ್ಕಾರಗೊಂಡಿವೆ. ಆದರೆ, ಹಾಲು ತೆಗೆಯುವಾಗಲೇ ಹಾಲಿನಲ್ಲಿ ಕೊಬ್ಬಿನಾಂಶ ಸೇರಿದಂತೆ ಇನ್ನಿತರ ಅಂಶಗಳು ಎಷ್ಟಿವೆ ಎಂಬುದನ್ನು ಪತ್ತೆ ಮಾಡುವಂತಹ ಯಂತ್ರವನ್ನು ಕೈಮರ್‌ಟೆಕ್‌ ಸಂಸ್ಥೆ ಆವಿಷ್ಕರಿಸಿದೆ. ಜತೆಗೆ ಹಸು ನಿರಂತರವಾಗಿ ಹಾಲು ನೀಡುವುದನ್ನು ಕಡಿಮೆ ಮಾಡಿದರೆ ಅದಕ್ಕೆ ಕಾರಣವೇನು ಎಂಬುದನ್ನು ತಿಳಿಯುವ ಅವಕಾಶವನ್ನೂ ಸಂಸ್ಥೆ ಯಂತ್ರದಲ್ಲಿ ನೀಡಿದೆ. ಹಾಗೆಯೇ, ಎಐ ಕ್ಯಾಮೆರಾ ಮೂಲಕ ಪ್ರತಿ ಹಸುವಿನ ಆರೋಗ್ಯ, ಕೊಟ್ಟಿಗೆಯಲ್ಲಿನ ಸ್ವಚ್ಛತೆ, ಹಸು ಆಹಾರ ಸೇವಿಸುವುದು ಸೇರಿದಂತೆ ಮತ್ತಿತರ ಅಂಶಗಳ ಮೇಲೆ ನಿಗಾವಹಿಸಲಾಗುತ್ತದೆ. ಅದಕ್ಕಾಗಿ ಸಂಸ್ಥೆಯು ತನ್ನದೇ ಮೊಬೈಲ್‌ ಆ್ಯಪನ್ನು ಅಭಿವೃದ್ಧಿಪಡಿಸಿದ್ದು, ಎಐ ಕ್ಯಾಮೆರಾದ ಮಾಹಿತಿ ಮೊಬೈಲ್‌ನಲ್ಲಿ ಪಡೆಯುವಂತೆ ಮಾಡಲಾಗಿದೆ.ದೇಶದಲ್ಲಿ ಈಗಾಗಲೇ ಎಲೆಕ್ಟ್ರಿಕ್‌ ಟ್ರ್ಯಾಕ್ಟರ್‌ಗಳು ಬಹಳಷ್ಟಿವೆ. ಆದರೆ, ಇದೇ ಮೊದಲ ಬಾರಿಗೆ ಕರ್ನಾಟಕ ಮೂಲದ ಸಂಸ್ಥೆಯೊಂದು ಎಲೆಕ್ಟ್ರಿಕ್‌ ಟ್ರ್ಯಾಕ್ಟರ್‌ ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಪರಿಚಯಿಸಿದೆ. ಮೂನ್‌ ರೈಡರ್‌ ಸಂಸ್ಥೆ 27 ಎಚ್‌ಪಿ, 50 ಎಚ್‌ಪಿ ಮತ್ತು 75 ಎಚ್‌ಪಿ ಸಾಮರ್ಥ್ಯದ ರಿಚಾರ್ಜ್‌ ಮಾಡಬಹುದಾದ ಟ್ರ್ಯಾಕ್ಟರನ್ನು ಅಭಿವೃದ್ಧಿಪಡಿಸಿದ್ದು, ಟೆಕ್‌ ಸಮ್ಮಿಟ್‌ನಲ್ಲಿ ಆಕರ್ಷಿಸುತ್ತಿದೆ.

ಸೌಂದರ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಆ್ಯಂಡ್‌ ಸೈನ್ಸ್‌ ಕಾಲೇಜಿನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಸೋಲಾರ್‌ ಸೈಕಲ್‌ ಆಕರ್ಷಿಸುತ್ತಿದೆ. 100 ಕೇಜಿ ತೂಕವನ್ನು ಕೊಂಡೊಯ್ಯುವ ಸಾಮರ್ಥ್ಯದ ಸಣ್ಣ ಸೈಕಲ್‌ ಇದಾಗಿದೆ. 3 ಗಂಟೆ ರಿಚಾರ್ಜ್‌ ಮಾಡಿದರೆ, 20ರಿಂದ 25 ಕಿ.ಮೀ.ವರೆಗೆ ಸಂಚರಿಸಬಹುದಾಗಿದೆ. ಕಾಲೇಜು ಕ್ಯಾಂಪಸ್‌ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಓಡಾಡಲು ಬಳಕೆ ಮಾಡುವಂತೆ ಸೈಕಲ್‌ ಅಭಿವೃದ್ಧಿಪಡಿಸಲಾಗಿದೆ.

ದ್ವೀಪಗಳ ಅಭಿವೃದ್ಧಿಗೆ ಬಂಡವಾಳ ಆಕರ್ಷಣೆ:

ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಬಂಡವಾಳ ಆಕರ್ಷಣೆಗೆ ಮುಂದಾಗಿದೆ. ಕರಾವಳಿ ಪ್ರವಾಸೋದ್ಯಮದ ಭಾಗವಾಗಿ 11 ದ್ವೀಪಗಳ ಅಭಿವೃದ್ಧಿಯನ್ನು ಸರ್ಕಾರ ಘೋಷಿಸಿದೆ. ಒಟ್ಟು ₹712.18 ಕೋಟಿ ವೆಚ್ಚದಲ್ಲಿ 11 ದ್ವೀಪಗಳ ಅಭಿವೃದ್ಧಿಗೆ ಯೋಜಿಸಲಾಗಿದೆ. ಅದರಂತೆ ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ದ್ವೀಪಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿದ್ದು, ಶೀಘ್ರದಲ್ಲಿ ಅದಕ್ಕಾಗಿ ಟೆಂಡರ್‌ ಪ್ರಕ್ರಿಯೆಯನ್ನೂ ನಡೆಸಲಿದೆ. ಅದಕ್ಕೂ ಮುನ್ನ ಉದ್ಯಮಿಗಳಿಗೆ ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ಯೋಜನೆ ಕುರಿತಂತೆ ವಿವರಿಸಲಾಗುತ್ತಿದೆ.ರೋಬೋಟ್‌ಗಳ ಓಟದಲ್ಲಿ ‘ಪರಮ್‌’ ಪ್ರಥಮ!:

ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ನಡೆದ ನಾಲ್ಕು ಕಾಲಿನ ರೋಬೋಟ್‌ಗಳ ರೋಚಕ ಓಟದ ಸ್ಪರ್ಧೆಯು ನೋಡುಗರ ಗಮನ ಸೆಳೆಯಿತು.ಮಂಗಳವಾರ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಆಯೋಜಿಸಲಾಗಿದ್ದ 29ನೇ ಆವೃತ್ತಿಯ ಬೆಂಗಳೂರು ಟೆಕ್‌ ಸಮ್ಮಿಟ್‌ - 2026 ಉದ್ಘಾಟನೆಗೂ ಮುನ್ನ ನಡೆದ ರೋಬೋಟ್‌ಗಳ ಓಟದ ಸ್ಪರ್ಧೆ ರೋಚಕವಾಗಿತ್ತು.

ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಟ್ರ್ಯಾಕ್‌ನಲ್ಲಿ ಆರಂಭವಾದ ಈ ಸ್ಪರ್ಧೆಯಲ್ಲಿ, ಜನರಲ್ ಆಟೋನಮಿ ಪ್ರೈವೇಟ್ ಲಿಮಿಟೆಡ್ ರೂಪಿಸಿದ ‘ಪರಮ್’ ಹೆಸರಿನ ರೋಬೋಟ್ ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಗುರಿ (ಟ್ರ್ಯಾಕ್) ಪೂರ್ಣಗೊಳಿಸಿತು. ಪ್ರತಿ ಸೆಕೆಂಡಿಗೆ ಬರೋಬ್ಬರಿ 4.3 ಮೀಟರ್ ಗರಿಷ್ಠ ವೇಗದಲ್ಲಿ ಧಾವಿಸಿದ ‘ಪರಮ್’, ನಿಗದಿತ ಗುರಿಯನ್ನು ಶರವೇಗದಲ್ಲಿ ತಲುಪಿ ತನ್ನ ಸಾಮರ್ಥ್ಯ ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದುಕೊಂಡಿತು. ಈ ರೋಬೋಟನ್ನು ಮುಖ್ಯವಾಗಿ ರಕ್ಷಣಾ ಕಾರ್ಯಾಚರಣೆ ಹಾಗೂ ಮನರಂಜನಾ ಕ್ಷೇತ್ರಗಳ ಸವಾಲುಗಳನ್ನು ನಿಭಾಯಿಸಲು ರೂಪಿಸಲಾಗಿದೆ ಎಂದು ಜನರಲ್ ಆಟೋನಮಿ ಪ್ರೈವೇಟ್ ಲಿಮಿಟೆಡ್ ಮಾಹಿತಿ ನೀಡಿತು.ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದ ಎಕ್ಸ್‌ಟೆರಾ ರೋಬೋಟಿಕ್ಸ್ ಸಂಸ್ಥೆಯ ‘ಧವ್’ ರೋಬೋಟ್ ಭದ್ರತೆ ಮತ್ತು ನಿರ್ಮಾಣ ಕ್ಷೇತ್ರದ ಕಣ್ಗಾವಲು ಸಾಮರ್ಥ್ಯದಿಂದ ಗಮನ ಸೆಳೆಯಿತು. ಮಾನವ ಪ್ರವೇಶಕ್ಕೆ ಅಪಾಯಕಾರಿಯಾದ ಕೈಗಾರಿಕಾ ತಾಣಗಳಲ್ಲಿ ತಪಾಸಣೆ ನಡೆಸಲು ಇದನ್ನು ಬಳಕೆ ಮಾಡಲಾಗುತ್ತಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ 3ಡಿ ನಕ್ಷೆ ತಯಾರಿಸುವುದು, ಕಾಮಗಾರಿಯ ಪ್ರಗತಿ ಪರಿಶೀಲನೆ, ಗೋಡೆಗಳಲ್ಲಿನ ಸಣ್ಣ ಬಿರುಕುಗಳನ್ನು ಪತ್ತೆ ಹಾಗೂ ಭದ್ರತಾ ವಲಯದಲ್ಲಿ ಅನುಮಾನಾಸ್ಪದ ಚಲನವಲನಗಳನ್ನು ಗ್ರಹಿಸುವಲ್ಲಿ ಇದು ಪರಿಣತಿ ಹೊಂದಿದೆ ಎಂದು ಸಂಸ್ಥೆ ಮಾಹಿತಿ ನೀಡಿತು.

ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಹಭಾಗಿತ್ವದಲ್ಲಿ ಸ್ಟ್ರೈಡರ್ ರೋಬೋಟಿಕ್ಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಎಂ3’ ರೋಬೋಟ್ ಮೂರನೇ ಸ್ಥಾನ ಪಡೆಯಿತು. ರಕ್ಷಣಾ ಪಡೆಗಳ ಅಗತ್ಯಕ್ಕೆ ತಕ್ಕಂತೆ ರೂಪುಗೊಂಡಿರುವ ಎಂ3, ಸುಮಾರು 45 ಕೆ.ಜಿ. ತೂಕದ ಉಪಕರಣಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಭಾರೀ ಸರಕು ಸಾಗಣೆ ಹಾಗೂ ಕೈಗಾರಿಕಾ ಕಣ್ಗಾವಲಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಕೇವಲ ಸಾಫ್ಟ್‌ವೇರ್ ಸೇವೆಗಳಿಗಷ್ಟೇ ಸೀಮಿತವಾಗದೆ, ಯಂತ್ರಗಳಿಗೆ ಕೃತಕ ಬುದ್ಧಿಮತ್ತೆ (ಎಐ) ತುಂಬಿ ನೈಜ ಜಗತ್ತಿನ ಸವಾಲುಗಳನ್ನು ಎದುರಿಸುವ ಹಾರ್ಡ್‌ವೇರ್ ಆವಿಷ್ಕಾರಗಳಲ್ಲಿ ಭಾರತ ಮುಂಚೂಣಿಗೆ ಬರುತ್ತಿದೆ ಎಂಬುದಕ್ಕೆ ಈ ರೋಬೋಟ್ ರೇಸ್ ಸಾಕ್ಷಿಯಾಯಿತು.