ದೇವರಹಿಪ್ಪರಗಿ: ಜನರ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವುದರ ಜತೆಗೆ ಸಾರ್ವಜನಿಕರ ಕುಂದುಕೊರತೆ ಆಲಿಸಿ ಇತ್ಯರ್ಥಪಡಿಸುವಲ್ಲಿ ಸರ್ಕಾರ ಪ್ರಜಾಸೇವಾ ಆಂದೋಲನ ಆರಂಭಿಸಿದ್ದು, ಈ ಅವಕಾಶವನ್ನು ಸಾರ್ವಜನಿಕರು ಬಳಸಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಜನರ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವುದರ ಜತೆಗೆ ಸಾರ್ವಜನಿಕರ ಕುಂದುಕೊರತೆ ಆಲಿಸಿ ಇತ್ಯರ್ಥಪಡಿಸುವಲ್ಲಿ ಸರ್ಕಾರ ಪ್ರಜಾಸೇವಾ ಆಂದೋಲನ ಆರಂಭಿಸಿದ್ದು, ಈ ಅವಕಾಶವನ್ನು ಸಾರ್ವಜನಿಕರು ಬಳಸಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಕರೆ ನೀಡಿದರು.ಪಟ್ಟಣದ ವಿಜಯಪುರ ರಸ್ತೆಯ ಹತ್ತಿರ ನೂತನ ಪ್ರಜಾಸೌಧ ಕಟ್ಟಡಕ್ಕಾಗಿ ಕಾಯ್ದಿರಿಸಿದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುಮಾರು ₹8.60 ಕೋಟಿ ವೆಚ್ಚದ ಪ್ರಜಾಸೌಧ ಕಟ್ಟಡದ ಕಾಮಗಾರಿಗೆ ಭೂಮಿಪೂಜೆ ಹಾಗೂ ಜಿಲ್ಲಾಡಳಿತ, ಜಿಪಂ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಸಹಕಾರದಲ್ಲಿ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಬಳಿಗೆ ಸರ್ಕಾರದ ಯೋಜನೆ, ಕಾರ್ಯಕ್ರಮಗಳು ತಲುಪಬೇಕು ಎಂಬುದು ಆಶಯವಾಗಿದೆ. ಹಾಗೆಯೇ ಸಾರ್ವಜನಿಕರ ಕುಂದುಕೊರತೆ ಸಂಬಂಧಿಸಿದಂತೆ ಸ್ಥಳೀಯ ಮಟ್ಟದಲ್ಲಿಯೇ ಪರಿಹರಿಸಬೇಕು. ಜನರು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದಾರೆ. ಹಾಗಾಗಿ ಸಾರ್ವಜನಿಕರು ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳನ್ನು ಹುಡುಕಿಕೊಂಡು ಹೋಗಬಾರದು, ಜನರ ಬಳಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತೆರಳಿ ಸಮಸ್ಯೆ ಪರಿಹರಿಸುವುದು ಪ್ರಜಾಸೇವಾ ಆಂದೋಲನದ ಉದ್ದೇಶವಾಗಿದೆ. ಸ್ವಾತಂತ್ರ್ಯ ಬಂದು ಹಲವು ದಶಕಗಳು ಗತಿಸಿದರೂ ಗಾಂಧೀಜಿ ಕಂಡ ಕನಸು ನನಸು ಮಾಡಲು ಆಗುತ್ತಿಲ್ಲ. ಪ್ರತಿ ಗ್ರಾಮದಲ್ಲಿ ಮನೆ ಇಲ್ಲದವರ ಹೆಸರನ್ನು ಗ್ರಾಮಗಳಲ್ಲಿ ಹಾಕುವ ಮೂಲಕ ಹೊಸದೊಂದು ಕ್ರಾಂತಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.ಕುಡಿಯುವ ನೀರು ಕೆರೆ ತುಂಬುವ ಯೋಜನೆ ಸೇರಿ ಜಿಲ್ಲಾಧಿಕಾರಿಗಳು ಸೇರಿದಂತೆ ಆಯಾ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಣೆ ಮಾಡಿದರೆ ಅರ್ಧ ಕೆಲಸ ಇಲ್ಲೇ ಪರಿಹಾರ ಒದಗಿಸಿದಂತೆ, ತಾಲೂಕಿನ ಎಲ್ಲಾ ಗ್ರಾಪಂ ಅಧಿಕಾರಿಗಳು ವಾರದಲ್ಲಿ ಒಂದು ದಿನ ನಿಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಕಾಲಮಿತಿ ಯೊಳಗೆ ಕೆಲಸ ಮಾಡಬೇಕು ಎಂದು ಹೇಳಿದರು.
ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಮಾತನಾಡಿ, ತಾಲೂಕು ಕೇಂದ್ರದಲ್ಲಿ ಎಲ್ಲಾ ಇಲಾಖೆಗಳನ್ನು ಕಾರ್ಯಾರಂಭ ಮಾಡುವ ದಿಶೆಯಲ್ಲಿ ನಿರಂತರ ಶ್ರಮಿಸುತ್ತಿರುವೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಗಳು ಶೀಘ್ರದಲ್ಲಿ ಆಗಬೇಕು, ಆದಷ್ಟು ಬೇಗ ತಾಳಿಕೋಟಿ ತಾಲೂಕು ಬರಪೀಡಿತ ಪಟ್ಟಿಗೆ ಸೇರಿಸಬೇಕು ಎಂದು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದೇನೆ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಜಿಲ್ಲಾಧಿಕಾರಿ ಡಾ.ಕೆ.ಆನಂದ ಮಾತನಾಡಿ, ಸರ್ಕಾರನೆ ಜನರ ಮನೆಬಾಗಿಲಿಗೆ ಬಂದು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ತಹಸೀಲ್ದಾರ್ ನಿಂಗಣ್ಣ ಬಿರಾದಾರ ಸ್ವಾಗತಿಸಿದರು. ಹಂಪಿ ಏಮ್ಮಿಗನೂರ ಮಠದ ವಾಮದೇವ ಶಿವಾಚಾರ್ಯರು, ಪರದೇಶಿ ಮಠದ ಶಿವಯೋಗಿ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.ಪಪಂ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಿಬಿನಾಳ, ಜಿಪಂ ಸಿಇಒ ರಿಷಿ ಆನಂದ, ಜಿಲ್ಲಾ ಎಸ್.ಪಿ. ಲಕ್ಷ್ಮಣ ನಿಂಬರಗಿ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಪ್ರಭುಗೌಡ ಲಿಂಗದಳ್ಳಿ ಚಬನೂರ, ಆನಂದಗೌಡ ದೋಡಮನಿ, ಕೆಪಿಸಿಸಿ ಸದಸ್ಯರಾದ ಬಿ.ಎಸ್. ಪಾಟೀಲ ಯಾಳಗಿ, ಪ್ರಜಾಸೌಧ ಕಟ್ಟಡ ನಿರ್ಮಾಣ ಗುತ್ತಿಗೆದಾರ ಆರ್.ಎಸ್. ಚೌರಗಿ, ಗ್ಯಾರಂಟಿ ಯೋಜನೆ ತಾಲೂಕು ಘಟಕದ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಗಾರ, ಸುರೇಶ ಚವ್ಹಾಣ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಸಚಿವರ ಮುಂದೆ ಸಮಸ್ಯೆಗಳ ಸರಮಾಲೆ: ಸಾರ್ವಜನಿಕರಿಂದ ಸಚಿವರ ಮುಂದೆ ಸಮಸ್ಯೆಗಳ ಸರಮಾಲೆಯೇ ವ್ಯಕ್ತವಾಯಿತು. ವಿದ್ಯುತ್ ಸಮಸ್ಯೆ, ರೈತರ ಜಮೀನುಗಳಿಗೆ ಹೋಗಲು ರಸ್ತೆ, ಮನೆ, ಕುಡಿಯಲು ನೀರು, ಸ್ಮಶಾನಕ್ಕೆ ಹೋಗಲು ದಾರಿ, ಚರಂಡಿ, ಕೆರೆ ತುಂಬುವ ಯೋಜನೆ, ರಸ್ತೆ, ಸಿಸಿ ರಸ್ತೆ, ಕಂಪ್ಯೂಟರ್ ಉತಾರ, ಆಸ್ಪತ್ರೆ, ಶೌಚಾಲಯ, ರಾವುತರಾಯ ದೇವಸ್ಥಾನದ ಪೂಜಾರಿಗೆ ಮನೆ ಇಲ್ಲ, ಅಜಿವಾನ ಬೆಳೆ ವಿಮೆ, ಬಸ್ ಸಮಸ್ಯೆ ಸೇರಿ ಹಲವಾರು ಸಮಸ್ಯೆಗಳನ್ನು ಸಚಿವರು, ಶಾಸಕರು ಆಲಿಸಿ ಸ್ಥಳದಲ್ಲಿ ಪರಿಹಾರ ಒದಗಿಸಿದರು. ನಂತರ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರ ವಿತರಣೆ ಮಾಡಿದರು.