ಸಾರಾಂಶ
ಹೊಸಕೋಟೆ: ಹೆಣ್ಣು ಮಗುವಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬವೇ ವಿದ್ಯಾವಂತರಾಗುತ್ತಾರೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ತಾಲೂಕಿನಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರನ್ನು ಮಾತ್ರ ಸೇರಿಸಿಕೊಂಡು ಕಾರ್ಯಕ್ರಮ ಮಾಡದೆ ಅನುದಾನಿತ ಹಾಗೂ ಅನುದಾನ ರಹಿತ ಎಲ್ಲಾ ಶಾಲಾ ಶಿಕ್ಷಕರನ್ನು ಸೇರಿಸಿಕೊಂಡು ಒಗ್ಗಟ್ಟಾಗಿ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ. ಪ್ರತಿ ಮಗುವಿಗೂ ಮೌಲ್ಯಾಧರಿತ ಶಿಕ್ಷಣ ಕೊಡಿಸಬೇಕೆಂಬುದೇ ನನ್ನ ಮುಖ್ಯ ಉದ್ದೇಶ ಎಂದು ಹೇಳಿದರು. ಸಮಾಜದ ಬದಲಾವಣೆ ಶಿಕ್ಷಣದಿಂದ ಮತ್ತು ಶಿಕ್ಷಕರಿಂದ ಸಾಧ್ಯ. ಸಮಾಜಕ್ಕೆ ಸತ್ಪ್ರಜೆಗಳನ್ನು ನೀಡುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ. ಆದ್ದರಿಂದ ಶಿಕ್ಷಕ ವೃತ್ತಿ ತುಂಬಾ ಪವಿತ್ರವಾದುದು. ದೇಶದ ಯುವ ಸಮೂಹವನ್ನು ಸರಿದಾರಿಗೆ ತರುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಸರಿಯಾದ ಅಡಿಪಾಯ ಹಾಕಿಕೊಟ್ಟಲ್ಲಿ 10ನೇ ತರಗತಿಯ ಫಲಿತಾಂಶ ಶೇ.100ರಷ್ಟು ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಕರು ಜವಾಬ್ದಾರಿಯಿಮದ ಉತ್ತಮ ಅಡಿಪಾಯ ಹಾಕುವ ಕೆಲಸವಾಗಬೇಕು ಎಂದರು.ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣಯ್ಯ ಮಾತನಾಡಿ, ಇಂದಿಗೂ ಶೇ.95ರಷ್ಟು ಸರ್ಕಾರಿ ಶಾಲೆಯಲ್ಲಿ ಡಿ ಗ್ರೂಪ್ ನೌಕರರಿಲ್ಲ, ಅಪ್ಪಿ ತಪ್ಪಿ ಶಾಲಾ ಮಕ್ಕಳು ಕಸ ಗುಡಿಸಿದರೆ ಅದರ ಫೋಟೋ ಪ್ರಚಾರವಾದಲ್ಲಿ ಆ ಶಾಲೆಯ ಶಿಕ್ಷಕರನ್ನು ಸಸ್ಪೆಂಡ್ ಮಾಡಲಾಗುತ್ತದೆ. ಶೌಚಾಲಯ ಸರಿಯಿಲ್ಲ ಎಂದರೆ ಸರ್ಕಾರ ತಿಂಗಳಿಗೆ 5 ಸಾವಿರ ವೇತನ ನೀಡುತ್ತೇವೆ ಎನ್ನುತ್ತಾರೆ. ಆದರೆ 5 ಸಾವಿರಕ್ಕೆ ಯಾರು ಶೌಚಾಲಯ ಸ್ವಚ್ಛಗೊಳಿಸುತ್ತಾರೆ? ಇಂತಹ ಸಮಸ್ಯೆಗಳನ್ನು ಸರ್ಕಾರದೊಂದಿಗೆ ಸಮಾಲೋಚನೆ ಮಾಡುತ್ತಿದ್ದು, ಶಿಕ್ಷಕರು ಸಹ ಜವಾಬ್ದಾರಿಯಿಂದ ಶಾಲೆಗಳಲ್ಲಿ ಕೈಯಲ್ಲಿ ಮೊಬೈಲ್ ಬದಲು ಪುಸ್ತಕ ಹಿಡಿದು ಪ್ರಾಮಾಣಿಕತೆ ತೋರಬೇಕು ಎಂದರು.
ಡಿಡಿಪಿಐ ಬೈಲಾಂಜನಪ್ಪ ಮಾತನಾಡಿ, ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ ಶಕ್ತಿ ತುಂಬುವ ಕಾರ್ಯ ಶಾಸಕ ಶರತ್ ಬಚ್ಚೇಗೌಡರು ಮಾಡುತ್ತಿದ್ದು ಖಾಸಗಿ ಸಹಬಾಗಿತ್ವದಲ್ಲಿ ತಾಲೂಕಿನ ಹಲವು ಶಾಲೆಗಳ ಅಭಿವೃದ್ಧಿಯಾಗುತ್ತಿದೆ. ಕೆಲವೇ ದಿನಗಳಲ್ಲಿ ತಾಲೂಕಿನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಶುರು ಮಾಡಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಸಮರ್ಥನಂ ಫೌಂಡೇಶನ್ ಸಂಸ್ಥಾಪಕ ಡಾ ಜಿ.ಕೆ.ಮಹಾಂತೇಶ್, ರಾಜ್ಯ ವಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ಸತೀಶ್ ಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ತಾಪಂ ಇಒ ಮುನಿಯಪ್ಪ, ಡಿವೈಎಸ್ಪಿ ಮಲ್ಲೇಶ್, ಡಿಡಿಪಿಐ ಬೈಲಾಂಜಿನಪ್ಪ, ಬಿಇಒ ಪದ್ಮನಾಬ್, ಯೋಜನಾ ಪ್ರಾಧಿಕಾರದ ನಿರ್ದೇಶಕ ಕೊರಳೂರು ಸುರೇಗೌಡ, ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸಪ್ಪ, ತಾಲೂಕು ಸರ್ಕಾರಿ ಶಾಲಾ ಶಿಕ್ಷಕರ ಸಂಘದ ಮುನಿಶಾಮಯ್ಯ, ಮುಖಂಡರಾದ ಡಾ.ಡಿ.ಟಿ.ವೆಂಕಟೇಶ್, ಇಂತಿಯಾಜ್ ಪಾಷಾ, ರಾಜಗೋಪಾಲ್, ಗಂಗಾಧರ್, ಸುಬ್ಬರಾಯಪ್ಪ ಇತರರು ಭಾಗವಹಿಸಿದ್ದರು.
ಕೋಟ್.........ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಹೊಸಕೋಟೆ ಕ್ಷೇತ್ರದಲ್ಲಿ ಮ್ಯಾಗ್ನೆಟ್ ಶಾಲೆ ಅಂದರೆ, ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೂ ಒಂದೇ ಸೂರಿನಡಿ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ. ಇದಕ್ಕೆ ಸರ್ಕಾರ 90 ಕೋಟಿ ಅನುದಾನದಲ್ಲಿ 30 ಶಾಲೆಗಳನ್ನು ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪರ ಪಾತ್ರ ಬಹಳಷ್ಟಿದೆ.
-ಶರತ್ ಬಚ್ಚೇಗೌಡ, ಶಾಸಕರು14 ಹೆಚ್ ಎಸ್ ಕೆ 1
ಹೊಸಕೋಟೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ ಪಡೆದ ತಾಲೂಕು ಶಿಕ್ಷಕರನ್ನು ಶಾಸಕ ಶರತ್ ಬಚ್ಚೇಗೌಡ ಸನ್ಮಾನಿಸಿದರು.