ಟಿ.ಎನ್. ಮಂಜುನಾಥ್, ವಿರಾಜಪೇಟೆಕೊಡಗಿನಲ್ಲಿ ಕೊಡವರು ಮತ್ತು ಕೊಡಗಿನ ಮೂಲ ನಿವಾಸಿಗಳು ಮಣ್ಣಿನಿಂದ ಮಾಡಿದ ಚಿಕ್ಕ ಗುಡಿಸಲುಗಳಲ್ಲಿ ಜೀವನ ನಡೆಸುತ್ತಾ ಬಂದವರು. ಈ ‘ಐನ್ ಮನೆ’ ಸಂಸ್ಕೃತಿ ಕೊಡಗಿನಲ್ಲಿ ಕೊಡವರು ಮತ್ತು ಕೊಡಗಿನ ಮೂಲ ನಿವಾಸಿಗಳಿಗೆ ತುಂಬಾ ಮುಖ್ಯವಾದದ್ದು.ವಿಶೇಷ ಎಂದರೆ ಐನ್ ಮನೆ ಸಂಸ್ಕೃತಿಯು ಕೊಡಗಿನ ಅರೆಭಾಷೆ ಗೌಡರಲ್ಲಿ ಕೂಡ ಇದೆ. ಕೊಡಗಿನಲ್ಲಿ ಪ್ರತಿಯೊಂದು ಮನೆಗೂ ಐನ್ ಮನೆ ಇದೆ. ಇದು ಪೂರ್ವಜರಿಂದ ಬೆಳೆದುಬಂದ ಪರಂಪರೆಯಾಗಿದೆ. ಐನ್ ಮನೆಗಳು ಕೆಲವೊಮ್ಮೆ ನ್ಯಾಯಾಲಯಗಳೂ ಆಗುವುದಿದೆ. ಕುಟುಂಬಕ್ಕೆ ಸಂಬಂಧಿಸಿದ ಎಲ್ಲಾ ನ್ಯಾಯ ತೀರ್ಮಾನಗಳನ್ನು ಪಟ್ಟೆದಾರ ಎನಿಸಿಕೊಂಡವರು ನಡೆಸುತ್ತಿದ್ದರು. ಅವಿಭಕ್ತ ಕುಟುಂಬದ ಇನ್ನೊಂದು ಹೆಸರೆಂದರೆ ಐನ್‌ಮನೆ. ಇಲ್ಲಿ ಕೈಲ್ ಮುಹೂರ್ತ, ಕಾವೇರಿ ಸಂಕ್ರಮಣ, ಹುತ್ತರಿ ಹಬ್ಬ ಆಚರಿಸಲಾಗುತ್ತದೆ.
ಕೈಮಡ: ಐನ್‌ಮನೆಗಳಂತೆ ‘ಕೈಮಡ’ಕ್ಕೂ ಪೂಜನೀಯ ಸ್ಥಾನ ನೀಡಿದ್ದಾರೆ. ಐನ್‌ಮನೆಗಳಲ್ಲಿ ವರ್ಷಕ್ಕೊಮ್ಮೆ ಉತ್ಸವ, ಹಬ್ಬಗಳು, ತೆರೆಗಳು ನಡೆಯುತ್ತದೆ. ಅದರಂತೆ ಕೈಮಡಗಳಲ್ಲಿ ವರ್ಷಕ್ಕೊಮ್ಮೆ ಮೀದಿ(ಎಡೆ) ಇಡುವ ಕಾರ್ಯಕ್ರಮ ಮಾಡುತ್ತಾರೆ. ದೇವಾಸ್ಥಾನಗಳಲ್ಲಿ ಶ್ರದ್ಧಾಭಕ್ತಿಯಂತೆ ಪೂಜಿಸುವಂತೆ ಕೈಮಡಗಳಲ್ಲೂ ಕೊಡವರು ಹಾಗೂ ಕೊಡವ ಭಾಷಿಕ ಜನಾಂಗದವರು ಪೂಜಿಸುತ್ತಾರೆ. ಕೆಲವು ಕೈಮಡಗಳಲ್ಲಿ ವೀರರ ಶಿಲ್ಪಗಳು, ಮರದಿಂದ ಮಾಡಿರುವ ವಿಗ್ರಹಗಳು, ಕೆಲವೊಂದು ಕಡೆಗಳಲ್ಲಿ ಕೇವಲ ದ್ವೀಪವನ್ನು ಮಾತ್ರ ಕಾಣಬಹುದಾಗಿದೆ. ಕೆಲವೊಂದು ಕೈಮಡಗಳಲ್ಲಿ ತೆರೆ ಕಟ್ಟಲಾಗುತ್ತದೆ. ಹಿರಿಯರ ಆರಾಧನೆ ಮಾಡುವ ಸ್ಥಳವೇ ಕೈಮಡ.ಕೊಡಗಿನ ಕ್ರೀಡೆಗಳು: ಕೊಡಗು ಜಿಲ್ಲೆಯಲ್ಲಿ ಜನಪದ ಕ್ರೀಡೆಗಳು ಹೆಚ್ಚಿವೆ. ಹುತ್ತರಿ, ಕೈಲ್‌ಮುಹೂರ್ತ ಸೇರಿದಂತೆ ಮತ್ತಿತರ ಹಬ್ಬಗಳಲ್ಲಿ ಕೊಡವರು ತೆಂಗಿನ ಕಾಯಿಗೆ ಗುಂಡುಹೊಡೆಯುವ ಸ್ಪರ್ಧೆಗಳನ್ನು ಆಯೋಜಿಸುತ್ತಾರೆ. ವಿಶೇಷ ಎಂದರೆ ಮಹಿಳೆಯರೂ ತೆಂಗಿನಕಾಯಿಗೆ ಗುಂಡು ಹೊಡೆಯುತ್ತಾರೆ. ಇದಲ್ಲದೆ ನಾಟಿ ಕೆಲಸ ಪೂರ್ಣಗೊಂಡ ನಂತರ ಭತ್ತದ ಪೈರು ಹಾಕಲಾಗಿರುವ ಗದ್ದೆಯಲ್ಲಿ ನಾಟಿ ಓಟದ ಸ್ಪರ್ಧೆಗಳನ್ನು ಆಯೋಜಿಸುತ್ತಾರೆ. ಇದಲ್ಲದೆ ಕೊಡವರ ‘ಪರೆಯ ಕಳಿ’ ವಿಶೇಷವಾಗಿದೆ. ಕೊಡಗಿನ ನೃತ್ಯಗಳು: ಕೊಡಗಿನಲ್ಲಿ ಕೊಡವರು ಉಮ್ಮತ್ತಾಟ್, ಬೊಳಕಾಟ್, ಕೊಂಬಾಟ್, ಕತ್ತಿಯಾಟ್, ಚೌರಿಯಾಟ್, ದುಡಿಕೊಟ್ಟ್ ಪಾಟ್ ಸೇರಿದಂತೆ ಹಲವು ನೃತ್ಯಗಳನ್ನು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮಾಡುತ್ತಾರೆ. ಹುತ್ತರಿ ಹಬ್ಬ ಬಂತೆಂದರೆ ಕೊಡಗು ಜಿಲ್ಲೆಯ ವಿವಿಧ ಮಂದ್‌ಗಳಲ್ಲಿ ಹುತ್ತರಿ ಕೋಟಾಟ ನಡೆಯುತ್ತದೆ. ನೃತ್ಯ ಮಾಡುವ ಸಂದರ್ಭ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿರುತ್ತಾರೆ. ಮಹಿಳೆಯರು ಕೆಂಪುಬಣ್ಣವ ಉಡುಪು ಧರಿಸಿ ಗುಂಪಾಗಿ ಉಮ್ಮತ್ತಾಟ್ ನೃತ್ಯ ಮಾಡುತ್ತಾರೆ. ಪುರುಷರು ಕಪ್ಪು ಹಾಗೂ ಬಿಳಿ ಬಣ್ಣದ ಉಡುಪು ತೊಟ್ಟು ವಿವಿಧ ನೃತ್ಯಗಳನ್ನು ಮಾಡುತ್ತಾರೆ.