ಬಿಸಿಲೂರಿನ ಸಂಚಾರ ಪೊಲೀಸರಿಗೆ ಹವಾನಿಯಂತ್ರಿತ ಹೆಲ್ಮೆಟ್‌

| N/A | Published : May 06 2025, 12:15 AM IST / Updated: May 06 2025, 11:01 AM IST

ಸಾರಾಂಶ

 ಬಿಸಿಲಲ್ಲಿ ನಿಂತು ಬಸವಳಿಯುವ ಪೊಲೀಸರಿಗೆ ಇಲ್ಲಿನ ಕಮೀಶ್ನರೇಟ್‌ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಹವಾನಿಯಂತ್ರಿತ ಹೆಲ್ಮೆಟ್‌ಗಳು ಅತ್ಯಾಧುನಿಕ ಮಾಸ್ಕ್‌ಗಳನ್ನು ನೀಡಲಾಗುತ್ತಿದೆ.

 ಕಲಬುರಗಿ : ಕಾದು ಕೆಂಡವಾಗಿರುವ ಕಲಬುರಗಿ ಮಹಾನಗರದಲ್ಲಿ ಉರಿ ಬಿಸಿಲಲ್ಲೇ ಸಂಚಾರ ನಿಯಂತ್ರಿಸಲು ನಿರಂತರ ಕೆಲಸ ಮಾಡುವ ಹಾಗೂ ಸದಾಕಾಲ ಬಿಸಿಲಲ್ಲಿ ನಿಂತು ಬಸವಳಿಯುವ ಪೊಲೀಸರಿಗೆ ಇಲ್ಲಿನ ಕಮೀಶ್ನರೇಟ್‌ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಹವಾನಿಯಂತ್ರಿತ ಹೆಲ್ಮೆಟ್‌ಗಳು, ಬಿಸಿಗಾಳಿ, ವಿಷಗಾಳಿಯಿಂದ ಬಚಾವ್‌ ಆಗಲು ಅತ್ಯಾಧುನಿಕ ಮಾಸ್ಕ್‌ಗಳನ್ನು ನೀಡಲಾಗುತ್ತಿದೆ.

ಉರಿ ಬಿಸಿಲಿದ್ದರೂ ಪರವಾಗಿಲ್ಲ, ಕೆಲಸ ಮಾಡುವಾಗ ಪೊಲೀಸರು ಯಾವುದೇ ತೊಂದರೆ ಎದುರಿಸದಂತೆ ಹವಾನಿಯಂತ್ರಕ ಹೆಲ್ಮೆಟ್‌ ಪೂರೈಸಲಾಗುತ್ತಿದೆ. ಇದರಲ್ಲಿರುವ ಬ್ಯಾಟರಿ ಸತತ 8 ಗಂಟೆ ಹೆಲ್ಮೆಟ್‌ನಲ್ಲಿ ಎರ್‌ ಕಂಡಿಶನಿಂಗ್‌ ಇರುವಂತೆ ನೋಡಿಕೊಳ್ಳುತ್ತದೆ. ಇದು ಪೊಲೀಸರು ಸತತ ಬಿಸಿಲಲ್ಲೂ ಕೆಲಸ ಮಾಡಲು ಅನುಕೂಲವಾಗಲಿದೆ.

ಕಲಬುರಗಿಯಲ್ಲಂತೂ ಸಂಚಾರ ಪೊಲೀಸರು ಸದಾಕಾಲ ಬಿಸಿಲಲ್ಲಿ ನಿಂತು ಸಂಚಾರ ನಿಯಂತ್ರಣ ಮಾಡುವ ಅನಿವಾರ್ಯತೆ ಇದೆ. ಇದೀಗ ಹವಾ ನಿಯಂತ್ರಿತ ಹೆಲ್ಮೆಟ್‌ಗಳನ್ನು ನೀಡಲಾಗುತ್ತಿದೆ. ಇದರಿಂದಾಗಿ ಬಿಸಿಲಲ್ಲಿ ನಿಂತು ಬಸವಳಿಯದೆ ಪೊಲೀಸರು ಹೆಚ್ಚಿನ ಕ್ಷಮತೆಯಿಂದ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಡಾ. ಶರಣಪ್ಪ ಢಗೆ ಹೇಳಿದ್ದಾರೆ.

ಇಲ್ಲಿನ ಕಮೀಶ್ನರೇಟ್‌ ಕಚೇರಿಯಲ್ಲಿ ಸೋಮವಾರ ನಡೆದ ಸರಳ ಸಮಾರಂಭದಲ್ಲಿ ಪ್ರಾಯೋಗಿಕವಾಗಿ ಎಸಿ ಹೆಲ್ಮೆಟ್‌ಗಳನ್ನು 10 ಸಂಚಾರ ಪೊಲೀಸರಿಗೆ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಶರಣಪ್ಪ ಢಗೆ, ಇವುಗಳ ಕಾರ್ಯಕ್ಷಮತೆ ಗಮನಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹೆಲ್ಮೆಟ್‌ ಖರೀದಿಸಿ ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಈಗ ಪೂರೈಸಿರುವ ಏರ್‌ ಕಂಡಿಶನ್ಡ್‌ ಹೆಲ್ಮೆಟ್‌ನಲ್ಲಿ ಅತ್ಯಾಧುನಿಕ ಬ್ಯಾಟರಿ ಇದ್ದು, ಇದು ನಿರಂತರ 8 ಗಂಟೆ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ಹೆಲ್ಮೆಟ್‌ನಲ್ಲಿ ನಿರಂತರ ಹವಾನಿಯಂತ್ರಣ ಮಾಡುವಂತಹ ವ್ಯವಸ್ಥೆ ಸದಾ ಚಾಲನೆಯಲ್ಲಿರಲಿದೆ. ಸದ್ಯಕ್ಕೆ 10 ಹವಾನಿಯಂತ್ರಿತ ಹೆಲ್ಮೆಟ್‌ಗಳನ್ನು ಪೊಲೀಸರಿಗೆ ವಿತರಿಸಲಾಗಿದೆ. ಇದಲ್ಲದೆ ರಾತ್ರಿ ಕೆಲಸ ಮಾಡುವ ಪೊಲೀಸರಿಗೆ 140 ಮಿಂಚುವ (ರಿಫ್ಲೆಕ್ಟೇಬಲ್‌) ಜಾಕೆಟ್, ರಾತ್ರಿ ಕರ್ತವ್ಯ ನಿರ್ವಹಿಸಲು 150 ಕೈಯಲ್ಲಿ ಹಿಡಿಯುವ ಬೆಳಕಿನ ಬ್ಯಾಟ್‌ಗಳನ್ನು ಸಹ ಇದೇ ಸಂದರ್ಭದಲ್ಲಿ ಕಮಿಷನರ್‌ ಅವರು ಪೊಲೀಸ್‌ ಸಿಬ್ಬಂದಿಗೆ ವಿತರಿಸಿ ಹೆಚ್ಚಿನ ಕ್ಷಮತೆಯಿಂದ ಕೆಲಸ ಮಾಡಲು ಕಿವಿಮಾತು ಹೇಳಿದರು.

ಇದೇ ವೇಳೆಯಲ್ಲಿ ಪೊಲೀಸ್ ಕಮಿಷನರ್ ಅವರು, ಸಂಚಾರ ಪೊಲೀಸ್ ಠಾಣೆ - 1 ಮತ್ತು ಸಂಚಾರ ಪೊಲೀಸ್ ಠಾಣೆ - 2ರ ಪೊಲೀಸ್ ಅಧಿಕಾರಿಗಳಿಗೆ ಸಾಂಕೇತಿಕವಾಗಿ ಎ.ಸಿ ಹೆಲ್ಮೆಟ್ ಸೇರಿದಂತೆ ಇತರೆ ಕಿಟ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್, ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಮಹಾಂತೇಶ ಪಾಟೀಲ್‌ ಹಾಗೂ ಸಿಬ್ಬಂದಿ ಹಾಜರಿದ್ದರು.

ಕಲಬುರಗಿಯಲ್ಲಿ ತಾಪಮಾನ, ವಾಯು ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆ ಟ್ರಾಫಿಕ್ ಸಿಬ್ಬಂದಿ ಆರೋಗ್ಯದ ಹಿತದೃಷ್ಟಿಯಿಂದ ಅವರಿಗೆ ಮೊದಲಾದ್ಯತೆಯಾಗಿ ಬಿಸಿಲಿನ ನಿಯಂತ್ರಣ ಪರಿಕರಗಳನ್ನು ಕೊಡಲಾಗುತ್ತಿದೆ. ಒಂದು ವೇಳೆ ಸಿಬ್ಬಂದಿಗಳಿಂದ ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಬಂದರೆ ಮುಂದಿನ ದಿನಗಳಲ್ಲಿ ಎಲ್ಲರಿಗೂ ವಿಸ್ತರಿಸಲಾಗುತ್ತದೆ, ಜೊತೆಗೆ ಈಗಾಗಲೇ ಟ್ರಾಫಿಕ್ ಪೊಲೀಸರಿಗೆ ಬಿಸಿಲಿನ ವೇಳೆಯಲ್ಲಿ ನೀರು, ಮಜ್ಜಿಗೆ ಕೊಡಲಾಗುತ್ತಿದೆ.

ಡಾ. ಶರಣಪ್ಪ ಢಗೆ, ಪೊಲೀಸ್‌ ಕಮಿಷನರ್‌, ಕಲಬುರಗಿ