ಸಾರಾಂಶ
ದೀಪಾವಳಿ ಹಬ್ಬದ ವೇಳೆ ಸಿಡಿಸುವ ಪಟಾಕಿಗಳಿಂದ ವಾಯು ಗುಣಮಟ್ಟ ಕುಸಿಯುತ್ತದೆ ಎನ್ನುವುದು ಉದ್ಯಾನ ನಗರಿ ಬೆಂಗಳೂರಿನ ಪಾಲಿಗೆ ಸುಳ್ಳಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ದೀಪಾವಳಿ ಹಬ್ಬದ ವೇಳೆ ಸಿಡಿಸುವ ಪಟಾಕಿಗಳಿಂದ ವಾಯು ಗುಣಮಟ್ಟ ಕುಸಿಯುತ್ತದೆ ಎನ್ನುವುದು ಉದ್ಯಾನ ನಗರಿ ಬೆಂಗಳೂರಿನ ಪಾಲಿಗೆ ಸುಳ್ಳಾಗಿದೆ. ಈ ವರ್ಷ ಪಟಾಕಿ ಸಿಡಿತ ₹500 ಕೋಟಿಗೂ ಹೆಚ್ಚು ಮೌಲ್ಯದ ಪಟಾಕಿ ವಹಿವಾಟು ನಡೆದಿದೆ, ಮಾಲಿನ್ಯವೂ ಆಗಿದೆ. ಆದಾಗ್ಯೂ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ದೀಪಾವಳಿ ಹಬ್ಬದ ಎರಡು ದಿನ ನಗರದಲ್ಲಿ ಮಾಲಿನ್ಯ ಕಡಿಮೆ ಇತ್ತು.ಈ ಸೋಜಿಗಕ್ಕೆ ಕಾರಣ ವಾಹನಗಳು!: ದೀಪಾವಳಿ ಹಬ್ಬಕ್ಕೆ ನಗರದಿಂದ ಲಕ್ಷಾಂತರ ಜನರು ತಮ್ಮ ತಮ್ಮ ಊರುಗಳಿಗೆ ಹಾಗೂ ಪ್ರವಾಸಕ್ಕೆ ತೆರಳಿದ್ದರು. ಕಚೇರಿಗಳಿಗೆ ರಜೆ ಇದ್ದ ಕಾರಣ ಕ್ಯಾಬ್ ಸೇರಿದಂತೆ ಎಲ್ಲ ಮಾದರಿಯ ವಾಹನಗಳ ಸಂಚಾರವು ಬಹುತೇಕ ಕಡಿಮೆಯಾಗಿತ್ತು.
ದೀಪಾವಳಿ ಹಬ್ಬಕ್ಕೆ ಕೆಲವು ದಿನಗಳ ಹಿಂದೆ ಅಂದರೆ ಅ.24ರಂದು ಮತ್ತು ದೀಪಾವಳಿಯ ಮೊದಲ ದಿನವಾದ ಅ.31ರಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನಗರದ ವಿವಿಧೆಡೆ ವಾಯು ಗುಣಮಟ್ಟವನ್ನು ತಪಾಸಣೆ ನಡೆಸಿದ್ದರು. ಅ.31ರಂದು ಅಲ್ಪ ಪ್ರಮಾಣದಲ್ಲಿ ನಗರದ ವಾಯು ಗುಣಮಟ್ಟ ಕುಸಿತವಾಗಿರುವುದು ಕಂಡು ಬಂದಿತ್ತು. ಆದರೆ, ಅಂದು ನಗರದಿಂದ ಅನೇಕರು ದೀಪಾವಳಿ ಹಬ್ಬ ಆಚರಣೆಗೆ ತಮ್ಮ ಊರುಗಳಿಗೆ ವಾಹನಗಳ ಸಮೇತ ತೆರಳಿದ್ದ ಕಾರಣ ವಾಯು ಗುಣಮಟ್ಟ ಕುಸಿತವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಅಂದಾಜಿಸಿದ್ದರು.ಹೀಗಾಗಿ, ಹಬ್ಬದ ಮತ್ತೆರೆಡು ಪ್ರಮುಖ ದಿನಗಳಾದ ನ.1 ಮತ್ತು ನ.2ರಂದು ವಾಯು ಗುಣಮಟ್ಟ ಪರಿಶೀಲನೆ ಮಾಡಿದಾಗ ಗುಣಮಟ್ಟ ಗಣನೀಯವಾಗಿ ಸುಧಾರಣೆಯಾಗಿರುವುದು ಕಂಡು ಬಂದಿದೆ. ಈ ಅವಧಿಯಲ್ಲಿ ವಾಹನ ಸಂಚಾರ ಕಡಿಮೆ ಆಗಿರುವುದೇ ವಾಯುಗುಣಮಟ್ಟ ಉತ್ತಮಗೊಳ್ಳಲು ಕಾರಣ ಎಂದು ಮೂಲಗಳು ತಿಳಿಸಿವೆ.