ವಾಯು ಗುಣಮಟ್ಟ ನಿಗಾ ವ್ಯವಸ್ಥೆ ಕಡ್ಡಾಯ: ಹೈಕೋರ್ಟ್‌ ಆದೇಶ

| Published : May 16 2024, 12:49 AM IST / Updated: May 16 2024, 10:17 AM IST

Karnataka highcourt
ವಾಯು ಗುಣಮಟ್ಟ ನಿಗಾ ವ್ಯವಸ್ಥೆ ಕಡ್ಡಾಯ: ಹೈಕೋರ್ಟ್‌ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಕೈಗಾರಿಕಾ ಮತ್ತು ಜನಸಂದಣಿ ಪ್ರದೇಶದಲ್ಲಿ ಸ್ವಯಂಚಾಲಿತ ನಿರಂತರ ವಾಯು ಗುಣಮಟ್ಟ ನಿಗಾ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ರಾಜ್ಯ ಪರಿಸರ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಹೈಕೋರ್ಟ್‌ ಆದೇಶಿಸಿದೆ.

 ಬೆಂಗಳೂರು :  ರಾಜ್ಯದ ಕೈಗಾರಿಕಾ ಮತ್ತು ಜನಸಂದಣಿ ಪ್ರದೇಶದಲ್ಲಿ ಸ್ವಯಂಚಾಲಿತ ನಿರಂತರ ವಾಯು ಗುಣಮಟ್ಟ ನಿಗಾ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ರಾಜ್ಯ ಪರಿಸರ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಹೈಕೋರ್ಟ್‌ ಆದೇಶಿಸಿದೆ.

ಪರವಾನಗಿ ಪಡೆಯದೇ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಬಾಳೆಕಾಯಿ ಚಿಪ್ಸ್‌ ಉತ್ಪಾದನಾ ಘಟಕಕ್ಕೆ ನಿರ್ಬಂಧ ಹೇರಲು ಕೋರಿ ಶೃಂಗೇರಿ ನಿವಾಸಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಕೆಎಸ್‌ಪಿಸಿಬಿ ಅಧ್ಯಕ್ಷರು ಆರು ವಾರಗಳಲ್ಲಿ‌ ರಾಜ್ಯಾದ್ಯಂತ ವಾಯು ಗುಣಮಟ್ಟ ನಿಗಾ ವ್ಯವಸ್ಥೆ ಅಳವಡಿಕೆ ಕುರಿತಂತೆ ವಿಸ್ತೃತ ಯೋಜನಾ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಇದೇ ವೇಳೆ ನಿರ್ದೇಶಿಸಿದೆ.

ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಮಾಲಿನ್ಯ ರಹಿತ ಪರಿಸರ ಮೂಲಭೂತ ಜೀವಿಸುವ ಹಕ್ಕಾಗಿದೆ.ಜನರನ್ನು ಮಾಲಿನ್ಯವಾದ ಪರಿಸರದಲ್ಲಿ ವಾಸಿಸುವ ಮೂಲಕ ರೋಗದಿಂದ ಬಳಲುವಂತೆ ಮಾಡಲಾಗದು. ಜನರಿಗೆ ಮಾಲಿನ್ಯ ಮುಕ್ತ ವಾತಾವರಣ ಲಭ್ಯವಾಗುವಂತೆ ಮಾಡಲು ‘ವಾಯು ಮತ್ತು ಜಲ ಕಾಯ್ದೆ’ ಅಡಿಯಲ್ಲಿ ನಿರ್ವಹಿಸುವ ಸೂಕ್ತ ವ್ಯವಸ್ಥೆಯನ್ನು ಜಾರಿಗೆ ತರಬೇಕಿದೆ ಎಂದು ಪೀಠ ಸೂಚಿಸಿದೆ.

ಪರಿಸರ ಮಾಲಿನ್ಯದ ಬಗ್ಗೆ ದೂರು ದೂರು ಸ್ವೀಕರಿಸಿದ ಕೂಡಲೇ ಕೆಎಸ್‌ಪಿಸಿಬಿಯು ಸ್ಥಳ ಪರಿಶೀಲಿಸಿ ಅಗತ್ಯ ಪರೀಕ್ಷೆ ನಡೆಸಬೇಕು. ಕೈಗಾರಿಕೆಗಳ ಮಾಲಿನ್ಯ ಮಟ್ಟ ಅಳೆಯಲು ಸೂಕ್ತ ವ್ಯವಸ್ಥೆ ಮಾಡಬೇಕು. ಅಲ್ಲಿ ಅಳವಡಿಸಲಾದ ಸಾಧನಗಳು ನೈಜ ಸಮಯದಲ್ಲಿ ವರದಿ ನೀಡಲಿವೆ. ಅದನ್ನು ಸಂಬಂಧಿತ ಕೆಎಸ್‌ಪಿಸಿಬಿ ದತ್ತಾಂಶಕ್ಕೆ ಕಳುಹಿಸಿಕೊಡಬೇಕು. ದೂರುಗಳನ್ನು ಆಧರಿಸಿ ಮಾತ್ರವಲ್ಲದೆ ಪರಿಸರ ಮಾಲಿನ್ಯದ ಬಗ್ಗೆ ಕೆಎಸ್‌ಪಿಸಿಬಿ ನಿರಂತರವಾಗಿ ನಿಗಾ ವ್ಯವಸ್ಥೆ ರೂಪಿಸಬೇಕಿದೆ ಎಂದು ಪೀಠ ನಿರ್ದೇಶಿಸಿದೆ.

ಕೆಂಪು ಮತ್ತು ಕೇಸರಿ ವಿಭಾಗದ ಪರಿಸರ ವಲಯದಲ್ಲಿ ಬರುವ ಕಾರ್ಖಾನೆಗಳಲ್ಲಿ ಸ್ವಯಂಚಾಲಿತ ಮತ್ತು ನಿರಂತರ ಕಾರ್ಯನಿರ್ವಹಿಸುವ ಸ್ಟೇಶನ್‌ಗಳನ್ನು ಸ್ಥಾಪಿಸಬೇಕು. ಅವುಗಳು ಸುತ್ತಲಿನ ವಾಯು ಮತ್ತು ಗಾಳಿಯ ಗುಣಮಟ್ಟ ಪರಿಶೀಲಿಸಲಿವೆ. ಸ್ಟೇಶನ್‌ಗಳ ಸ್ಥಾಪನೆ ಮತ್ತು ಅವುಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬ ಬಗ್ಗೆ ಮುಂದಿನ ಆರು ತಿಂಗಳಲ್ಲಿ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ವರದಿ ಸಲ್ಲಿಸಬೇಕು ಎಂದು ಪೀಠ ಆದೇಶಿಸಿದೆ.