ನ.8ರಂದು ಎಐಆರ್‌ಡಿಎಂ ಪ್ರಥಮ ಸಮ್ಮೇಳನ

| Published : Oct 26 2024, 01:02 AM IST

ಸಾರಾಂಶ

ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ (ಎಐಆರ್‌ಡಿಎಂ) ಪ್ರಥಮ ರಾಜ್ಯ ಸಮ್ಮೇಳನ ನ.8 ಮತ್ತು 9ರಂದು ದಾವಣಗೆರೆ ಮಹಾನಗರದಲ್ಲಿ ನಡೆಯಲಿದೆ ಎಂದು ಆಂದೋಲನ ರಾಷ್ಟ್ರೀಯ ಮಂಡಳಿ ಸದಸ್ಯ ಡಾ. ಮಹೇಶ ಕುಮಾರ ರಾಠೋಡ ಹೇಳಿದ್ದಾರೆ.

- ಪರಿಶಿಷ್ಟರ ವೇದಿಕೆಯಾಗಿ ರೂಪುಗೊಳ್ಳಲಿದೆ: ಡಾ.ಮಹೇಶಕುಮಾರ ರಾಠೋಡ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ (ಎಐಆರ್‌ಡಿಎಂ) ಪ್ರಥಮ ರಾಜ್ಯ ಸಮ್ಮೇಳನ ನ.8 ಮತ್ತು 9ರಂದು ದಾವಣಗೆರೆ ಮಹಾನಗರದಲ್ಲಿ ನಡೆಯಲಿದೆ ಎಂದು ಆಂದೋಲನ ರಾಷ್ಟ್ರೀಯ ಮಂಡಳಿ ಸದಸ್ಯ ಡಾ. ಮಹೇಶ ಕುಮಾರ ರಾಠೋಡ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ದಲಿತ ಸಮುದಾಯಗಳ ಧ್ವನಿ, ಹಕ್ಕುಗಳಿಗಾಗಿ ಆಂದೋಲನ ನಡೆಸುವ ವೇದಿಕೆಯಾಗಿ ಸಂಸ್ಥೆ ಕಾರ್ಯನಿರ್ವಹಿಸಲಿದೆ. ರಾಜ್ಯದ ಪರಿಶಿಷ್ಟ ಜಾತಿ-ಪಂಗಡಗಳ ಜನರ ಆಂದೋಲನದ ವೇದಿಕೆಯಾಗಿ ರೂಪುಗೊಳ್ಳುವ ಹಿನ್ನೆಲೆ ಪ್ರಥಮ ರಾಜ್ಯ ಸಮ್ಮೇಳನ ಇಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದ ದೇವದಾಸಿ ಮಹಿಳೆಯರನ್ನೂ ಆಂದೋಲನ ಒಳಗೊಂಡಿರಲಿದೆ. ರಾಜ್ಯದಲ್ಲಿ ದಲಿತ ಸಮುದಾಯಗಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿ, ಅಂಥವರ ಹಕ್ಕುಗಳ ರಕ್ಷಣೆಗಾಗಿ ಬಲಿಷ್ಠ ಚಳವಳಿ ಕಟ್ಟುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು. ಗ್ರಾಮೀಣ, ನಗರದ ಸಾರ್ವಜನಿಕ ಆಸ್ತಿಯನ್ನು ದಲಿತರಿಗೆ ಸಮಾನವಾಗಿ ದೊರೆಯುವಂತೆ ಅಗತ್ಯ ಕಾಯ್ದೆ ರಚಿಸಿ, ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಮಹಿಳೆಯರ ಆರೋಗ್ಯ, ಹಕ್ಕುಗಳಿಗೆ ರಕ್ಷಣೆ ಮತ್ತು ಪರಿಶಿಷ್ಟರಿಗೆ ಆಹಾರ, ಶುದ್ಧ ನೀರು, ಬಟ್ಟೆ, ಸೂರು, ಆರೋಗ್ಯ, ಚಿಕಿತ್ಸೆ, ಶಿಕ್ಷಣ, ಸಾಮಾಜಿಕ ಭದ್ರತೆ, ಸಾಮಾಜಿಕ ಸೇವೆ, ಸಾರ್ವಜನಿಕ ಸೌಕರ್ಯ, ಸಾರ್ವಜನಿಕ ಸ್ಥಳಗಳನ್ನು ಒದಗಿಸುವುದೂ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆಯಾಗಲಿದೆ ಎಂದು ತಿಳಿಸಿದರು.

ಸಮ್ಮೇಳದನಲ್ಲಿ ಒಟ್ಟು 15 ಪ್ರಮುಖ ಅಂಶಗಳ ಬಗ್ಗೆ ಚರ್ಚಿಸಿ, ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು. ನಂತರ ಆಂದೋಲನದ ಮೂಲಕ ಸರ್ಕಾರಕ್ಕೆ ಅವುಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಗುವುದು. 1976 ಜೀತ ನಿರ್ಮೂಲನಾ ಪದ್ಧತಿ ಜಾರಿ, ಬಾಲದುಡಿಮೆ ಪದ್ಧತಿ ರದ್ಧತಿ, ನೂತನ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವುದು ಒಳಗೊಂಡಂತೆ ಹಲವಾರು ವಿಷಯಗಳ ಬಗ್ಗೆ ರಚನಾತ್ಮಕವಾಗಿ ಚರ್ಚೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಸಂಘಟನೆಯ ರಾಜ್ಯ ಸಂಚಾಲಕ ಆವರಗೆರೆ ಚಂದ್ರು, ಟಿ.ಎಸ್.‌ ನಾಗರಾಜ, ಎಂ.ಬಿ. ಶಾರದಮ್ಮ, ಗುರುಮೂರ್ತಿ, ಎಸ್. ಚಂದ್ರಪ್ಪ, ಹನುಮಂತಪ್ಪ, ಪಿ. ಷಣ್ಮುಖಸ್ವಾಮಿ, ರಾಜು ಕೆರೆಯಾಗನಹಳ್ಳಿ, ನರೇಗಾ ರಂಗನಾಥ, ವಿ. ಲಕ್ಷ್ಮಣ ಇತರರು ಇದ್ದರು.

- - -

ಬಾಕ್ಸ್‌ * ಪ್ರತಿನಿಧಿಗಳ ಸಮಾವೇಶ ರಾಜ್ಯ ಸಂಚಾಲಕ ಆವರಗೆರೆ ವಾಸು ಮಾತನಾಡಿ, ನ.8ರಂದು ದಾವಣಗೆರೆಯ ಬ್ರಾಹ್ಮಣ ವಿದ್ಯಾರ್ಥಿ ನಿಲಯ ರಸ್ತೆಯಲ್ಲಿ ಬಹಿರಂಗ ಸಭೆ ನಡೆಯಲಿದೆ. ಬಹಿರಂಗ ಸಭೆಗೂ ಮುನ್ನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆಂದೋಲನದ ಮೆರವಣಿಗೆ ನಡೆಸಲಾಗುವುದು. ನ.9ರಂದು ಹರಿಹರ ನಗರದ ಬೈಪಾಸ್ ರಸ್ತೆ ಪ್ರೊ.ಬಿ. ಕೃಷ್ಣಪ್ಪನವರ ಸ್ಮಾರಕದ ಮೈತ್ರಿ ವನದಲ್ಲಿ ಪ್ರತಿನಿಧಿಗಳ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

- - - -24ಕೆಡಿವಿಜಿ3:

ದಾವಣಗೆರೆಯಲ್ಲಿ ಗುರುವಾರ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ (ಎಐಆರ್‌ಡಿಎಂ) ರಾಷ್ಟ್ರೀಯ ಮಂಡಳಿ ಸದಸ್ಯ ಡಾ. ಮಹೇಶಕುಮಾರ ರಾಠೋಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.