ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) 2026ರ ಏಪ್ರಿಲ್ ವೇಳೆಗೆ ಬರೋಬ್ಬರಿ 40 ಕೋಟಿ ಪ್ರಯಾಣಿಕರಿಗೆ ಸೇವೆ ಒದಗಿಸುವ ಮೂಲಕ ಹೊಸ ಮೈಲಿಗಲ್ಲು ದಾಖಲಿಸಿದೆ.ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ನಡೆದ ಬಿಐಎಎಲ್ ಆಡಳಿತ ಮಂಡಳಿಯ 2025-26ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಐಎಎಲ್‌ನ ಹೊಸ ಮೈಲಿಗಲ್ಲು ಬಗ್ಗೆ ವರದಿ ಮಂಡಿಸಲಾಗಿದೆ.
ಈ ವೇಳೆ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ದಿನದಿಂದ (2008) ಈವರೆಗೆ 40 ಕೋಟಿ ಪ್ರಯಾಣಿಕರಿಗೆ ಸೇವೆ ನೀಡುವ ಮೂಲಕ ಸಾಧನೆ ಮಾಡಿದೆ. ಜತೆಗೆ, ವೈಮಾನಿಕ ಕ್ಷೇತ್ರದಲ್ಲಿನ ಸವಾಲುಗಳ ನಡುವೆಯೂ 2025-26ನೇ ಸಾಲಿನಲ್ಲಿ 44.47 ದಶಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಪ್ರಯಾಣ ಮಾಡಿದ್ದು, 5.32 ಲಕ್ಷ ಟನ್ ಕಾರ್ಗೊ ಸೇವೆ ಮೂಲಕ ರಫ್ತಾಗಿದೆ. ವರ್ಷದಿಂದ ವರ್ಷಕ್ಕೆ ಸರಾಸರಿ ಶೇ.6.2ರಷ್ಟು ಪ್ರಗತಿ ಸಾಗಿಸುತ್ತಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರ ಪ್ರಮಾಣದಲ್ಲಿ ಶೇ.23.9 ರಷ್ಟು ಭಾರಿ ಏರಿಕೆಯಾಗಿದೆ ಎಂದು ಶಾಲಿನಿ ರಜನೀಶ್ ಅವರು ಮಂಡಳಿಗೆ ಅಭಿನಂದನೆ ಸಲ್ಲಿಸಿದರು ಬಿಐಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ.ಸರಕು ಸಾಗಣೆಯಲ್ಲಿ ಮುಂಚೂಣಿ:
ಸರಕು ಸಾಗಣೆಯಲ್ಲಿ ಮುಂಚೂಣಿ ಸ್ಥಾನದಲ್ಲಿದ್ದು, 2025-26ನೇ ಸಾಲಿನಲ್ಲಿ 5.32 ಲಕ್ಷ ಟನ್ ಸರಕು ಸಾಗಣೆ ಆಗಿದೆ. 15 ಸರಕು ಸಾಗಣೆ ವಿಮಾನ ಸಂಸ್ಥೆಗಳ ಮೂಲಕ ಚಿಕಾಗೊ, ಸಿಂಗಾಪುರ, ಲಂಡನ್ ಮತ್ತು ಫ್ರಾಂಕ್‌ಫರ್ಟ್ ಸೇರಿದಂತೆ 38 ಜಾಗತಿಕ ಹಬ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ವಿಶೇಷವಾಗಿ 6 ಕೋಟಿ ಗುಲಾಬಿ ಹೂವು (ಶೇ.38 ಹೆಚ್ಚಳ), ಮಾವಿನ ಹಣ್ಣು (ಶೇ.12 ಹೆಚ್ಚಳ) ಹಾಗೂ ಕೊತ್ತಂಬರಿ ಸೊಪ್ಪು (ಶೇ.13 ಹೆಚ್ಚಳ) ಅತ್ಯಧಿಕ ಮಟ್ಟದಲ್ಲಿ ರಫ್ತಾಗಿದೆ.
ವಿಮಾನ ನಿಲ್ದಾಣದ ಪ್ರಯಾಣಿಕರ ಅನುಭವ, ತಂತ್ರಜ್ಞಾನ, ಸುರಕ್ಷತೆ, ಅತ್ಯುತ್ತಮ ವಿನ್ಯಾಸ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ ಎಂದು ಪ್ರಕಟಣೆ ತಿಳಿಸಿದೆ.
ಸಾಮರ್ಥ್ಯ ವಿಸ್ತರಣೆ ಕುರಿತು ಚರ್ಚೆ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನ ನಿಲ್ದಾಣದ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಲು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆಯೂ ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿದೆ.ಪ್ರಯಾಣಿಕರಲ್ಲಿ ಗಣನೀಯ ವೃದ್ಧಿ ಹಣಕಾಸು ವರ್ಷ 2025-26ರಲ್ಲಿ ವಿಮಾನ ನಿಲ್ದಾಣವು ಒಟ್ಟು 44.47 ಮಿಲಿಯನ್ ಪ್ರಯಾಣಿಕರನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಶೇ.6.2ರಷ್ಟು ಬೆಳವಣಿಗೆ ಕಂಡಿದ್ದು, 7.23 ದಶಲಕ್ಷ ಅಂತಾರಾಷ್ಟ್ರೀಯ ಪ್ರಮಾಣಿಕರ ಮೂಲಕ ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಶೇ.23.9ರಷ್ಟು ಬೆಳವಣಿಗೆ ಆಗಿದೆ. ದೇಶೀಯ ಸಂಚಾರ ಶೇ.3.3ರಷ್ಟು ಹೆಚ್ಚಾಗಿದ್ದು, 37.24 ದಶಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಒಂದೇ ದಿನದಲ್ಲಿ ಗರಿಷ್ಠ 1.39 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಮೂಲಕ ವಿಮಾನ ನಿಲ್ದಾಣವು ಹೊಸ ದಾಖಲೆ ಬರೆದಿದೆ. ಪ್ರಸ್ತುತ ನಿಲ್ದಾಣವು 78 ದೇಶೀಯ ಮತ್ತು 34 ಅಂತಾರಾಷ್ಟ್ರೀಯ ಸ್ಥಳಗಳಿಗೆ ನೇರ ಸಂಪರ್ಕ ಕಲ್ಪಿಸುತ್ತಿದೆ.