ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಐಟಿಯುಸಿ ಪ್ರತಿಭಟನೆ

| Published : Jul 10 2025, 01:45 AM IST

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಐಟಿಯುಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಕಕ್ಕೆಹೊಳೆಯಿಂದ ಆರಂಭವಾದ ಮೆರವಣಿಗೆ, ಮುಖ್ಯ ರಸ್ತೆಯ ಮೂಲಕ ಜೇಸೀ ವೇದಿಕೆಯ ಬಳಿ ಸಮಾವೇಶಗೊಂಡಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕಾರ್ಮಿಕ ವಿರೋಧಿ ಕಾಯಿದೆಗಳನ್ನು ರದ್ದುಗೊಳಿಸುವುದು, ಉಚಿತ ಶಿಕ್ಷಣದ ಹಕ್ಕು, ಆರೋಗ್ಯದ ಹಕ್ಕು, ನೀರು ನೈರ್ಮಲ್ಯದ ಹಕ್ಕು ಹಾಗೂ ಉಚಿತ ವಸತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್(ಎಐಯುಟಿಸಿ) ಸಮಿತಿಯವರು ಬುಧವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪಟ್ಟಣದ ಕಕ್ಕೆಹೊಳೆಯಿಂದ ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಎಚ್.ಎಂ.ಸೋಮಪ್ಪ ನೇತೃತ್ವದಲ್ಲಿ ಆರಂಭವಾದ ಮೆರವಣಿಗೆ, ಮುಖ್ಯ ರಸ್ತೆಯ ಮೂಲಕ ಜೇಸೀ ವೇದಿಕೆಯ ಬಳಿ ಸಮಾವೇಶಗೊಂಡಿತು. ಈ ಸಂದರ್ಭ ಪ್ರತಿಭಟನಾಕಾರರು ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ನಂತರ ಜೇಸಿ ವೇದಿಕೆಯಲ್ಲಿ ಸೋಮಪ್ಪ ಮಾತನಾಡಿ, ಹಾಲಿ ಇರುವ 8 ಗಂಟೆಯ ಕೆಲಸದ ಅವಧಿಯನ್ನು 10 ಗಂಟೆಗೆ ಏರಿಸಲು ಕಾನೂನು ರೂಪಿಸುತ್ತಿದೆ. ಕೊಡಗು ಗುಡ್ಡಗಾಡು ಪ್ರದೇಶ ಮತ್ತು ನಾಲ್ಕು ತಿಂಗಳು ಮಳೆಯಿರುತ್ತದೆ. ಬಡ ಕಾರ್ಮಿಕರು ಚಳಿಯಲ್ಲಿ 10 ಗಂಟೆ ಕೆಲಸ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಮಸೂದೆಯನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಬೇಕು ಎಂದು ಆಗ್ರಹಿಸಿದರು.ಕೊಡಗು ಜಿಲ್ಲೆಯಲ್ಲಿ ಹಲವು ದಶಕಗಳಿಂದ ಕಾರ್ಮಿಕರು ಲೈನ್ ಮನೆಗಳಲ್ಲಿ ವಾಸ ಮಾಡುತ್ತ ಕೂಲಿ ಮಾಡುತ್ತಿದ್ದಾರೆ. ಅನೇಕ ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಪೈಸಾರಿ ಜಾಗವನ್ನು ಉಳ್ಳವರು ಒತ್ತುವರಿ ಮಾಡಿಕೊಂಡಿದ್ದಾರೆ. ಕೊಡಗಿನ ಪೈಸಾರಿ ಜಮೀನಿನ ಸಮಗ್ರ ಸರ್ವೆ ಆಗಬೇಕಾಗಿದೆ. ಇನ್ನಾದರೂ ಜಿಲ್ಲಾಡಳಿತ ಒತ್ತುವರಿ ಆಗಿರುವ ಸರಕಾರಿ ಜಾಗವನ್ನು ಮುಟ್ಟುಗೋಲು ಹಾಕಿ, ನಿವೇಶನ ರಹಿತ ಕೂಲಿ ಕಾರ್ಮಿಕರಿಗೆ ನಿವೇಶನ ನೀಡಬೇಕೆಂದು ಆಗ್ರಹಿಸಿದರು. ಕಾರ್ಮಿಕರು ಈ ದೇಶದ ಪ್ರಜೆಗಳು. ಕಾರ್ಮಿಕರು ತೆರಿಗೆ ಕಟ್ಟುತ್ತಾರೆ. ನಮಗೂ ಭೂಮಿಯ ಪಡೆದುಕೊಳ್ಳುವ ಹಕ್ಕಿದೆ. ಕೂಡಲೇ ನಿವೇಶನಗಳನ್ನು ನೀಡಬೇಕೆಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ನ್ಯಾಯಕ್ಕಾಗಿ ಆಗ್ರಹಿಸಿದರು

ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ, ರೈತ, ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಜಿಲ್ಲೆಯ ಕಾರ್ಮಿಕರನ್ನು ಶೋಷಣೆ ಮಾಡಿ ದರ್ಪ ಮೆರೆಯುತ್ತಿರುವ ತೋಟ ಮಾಲೀಕರು ಅಸ್ಸಾಂ, ಬಂಗಾಳ ಕಾರ್ಮಿಕರನ್ನು ಮಿತಿ ಮೀರಿ ದುಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. 50ಕ್ಕಿಂತ ಹೆಚ್ಚು ಸದಸ್ಯರಿದ್ದರೆ ಮಾತ್ರ ಕಾರ್ಮಿಕ ಸಂಘಟನೆಗಳನ್ನು ಕಟ್ಟಬೇಕು ಮತ್ತು ಮಾಲೀಕರನ್ನು ಸೇರಿಸಿಕೊಂಡು ಕಾರ್ಮಿಕ ಸಂಘಟನೆ ರಚಿಸಬೇಕು ಎಂಬ ಅವೈಜ್ಞಾನಿಕ ನೀತಿ ರೂಪಿಸಿರುವುದನ್ನು ಈ ಸಂದರ್ಭ ಅವರು ಖಂಡಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಮುಖರಾದ ಕೆ.ಎಂ.ಲಕ್ಷ್ಮಣ್, ಎಐಟಿಯುಸಿ ಸಂಘಟನೆಯ ತಾಲೂಕು ಕಾರ್ಯದರ್ಶಿ ಪಿ.ಟಿ.ಸುಂದರ, ಜಿಲ್ಲಾ ಸಲಹೆಗಾರ ಶೇಷಪ್ಪ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಂಘಟನೆ ಅಧ್ಯಕ್ಷ ಎಂ.ಪಿ.ಹೊನ್ನಪ್ಪ ಮತ್ತಿತರರು ಇದ್ದರು.