ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಹಿರಿಯೂರು ನಗರಸಭೆಯ 2ನೇ ಅವಧಿಗೆ ನೂತನ ಅಧ್ಯಕ್ಷರಾಗಿ 22 ನೇ ವಾರ್ಡ್ ನ ಸದಸ್ಯ ಜೆ.ಆರ್. ಅಜಯ್ ಕುಮಾರ್ ಹಾಗೂ ಉಪಾಧ್ಯಕ್ಷೆಯಾಗಿ 28 ನೇ ವಾರ್ಡ್ ನ ಅಂಬಿಕಾ ಆರಾಧ್ಯ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.ಸುಮಾರು 16 ತಿಂಗಳ ನಂತರ ನಗರಸಭೆಯ 2ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗಿದ್ದು ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ(ಎ) ಹಾಗೂ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾತಿ ಪ್ರಕಟವಾಗಿತ್ತು.
ಸೋಮವಾರ ನಗರಸಭೆ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ 22ನೇ ವಾರ್ಡ್ ಸದಸ್ಯ ಜೆ.ಆರ್. ಅಜಯ್ ಕುಮಾರ್ ಗೆ ಅಧ್ಯಕ್ಷ ಸ್ಥಾನ ಹಾಗೂ 28 ನೇ ವಾರ್ಡ್ ನ ಅಂಬಿಕಾ ಆರಾಧ್ಯ ಉಪಾಧ್ಯಕ್ಷೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಮತ್ತ್ಯಾರು ನಾಮಪತ್ರ ಸಲ್ಲಿಸದೆ ಇದ್ದಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಕಾರ್ತಿಕ್ ಅಜಯ್ ಕುಮಾರ್ ಹಾಗೂ ಅಂಬಿಕಾ ಆರಾಧ್ಯರನ್ನು ಅವಿರೋಧ ಆಯ್ಕೆ ಎಂದು ಘೋಷಿಸಿದರು.ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ನಂತರ ನಗರಸಭೆ ಮುಂಭಾಗದಲ್ಲಿ ಸದಸ್ಯರು, ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಮುಖಂಡರು ಘೋಷಣೆಗಳನ್ನು ಕೂಗುತ್ತಾ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಅನಂತರ ನಗರದ ಮುಖ್ಯ ರಸ್ತೆಯಲ್ಲಿ ಮೆರವಣೆಗೆ ಮೂಲಕ ತೆರಳಿ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನ, ನೇಕ್ ಬೇಬಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಂತರ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.
ನಗರಸಭೆಯ ಒಟ್ಟು 31 ಸದಸ್ಯ ಬಲದಲ್ಲಿ 30 ಸದಸ್ಯರು ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಅಧ್ಯಕ್ಷರಾಗಲು ಸಹಕಾರಿಯಾಯಿತು. ಆರಂಭದಲ್ಲಿ ಕಾಂಗ್ರೆಸ್ ನ 21, ಜೆಡಿಎಸ್ 1, ಬಿಜೆಪಿಯ 6 ಮತ್ತು ಮೂವರು ಪಕ್ಷೇತರ ಸದಸ್ಯರಿದ್ದರು. ನಂತರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಪರಿಣಾಮ ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಕಾಂಗ್ರೆಸ್ ಪಕ್ಷದ ಜೊತೆಗೆ ಗುರುತಿಸಿಕೊಂಡರು.ವಿಧಾನಸಭಾ ಚುನಾವಣೆಯ ನಂತರ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಕಾರಣ ಬಿಜೆಪಿಯ ಐದು ನಗರಸಭೆ ಸದಸ್ಯರು ಸಹ ಕಾಂಗ್ರೆಸ್ ಜೊತೆಯಲ್ಲಿ ಗುರುತಿಸಿಕೊಂಡರು. ಬಿಜೆಪಿಯ ಒಬ್ಬ ಸದಸ್ಯ ಮಾತ್ರ ಬಿಜೆಪಿಯಲ್ಲಿ ಉಳಿದರು. ಹಾಗಾಗಿ ಕಾಂಗ್ರೆಸ್ ಸದಸ್ಯರೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿತ್ತು.
ಆರಂಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಕಾoಕ್ಷಿಗಳ ಹಿಂಡೇ ಇತ್ತು. ಅಧ್ಯಕ್ಷ ಸ್ಥಾನಕ್ಕೆ ಶಿವರಂಜನಿ, ಚಿತ್ರಜಿತ್ ಯಾದವ್, ಜಬೀವುಲ್ಲಾ, ಶಂಷುನ್ನೀಸಾ, ಆರ್. ಬಾಲಕೃಷ್ಣ, ಗೀತಾ ಗಂಗಾಧರ್, ಜಗದೀಶ್, ಸಮೀವುಲ್ಲಾ ಹಾಗೂ ವೈಪಿಡಿ. ದಾದಾಪೀರ್ ಸೇರಿದಂತೆ 9 ಸದಸ್ಯರು ಪ್ರಯತ್ನಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಜಯವಾಣಿ, ಅಂಬಿಕಾ ಆರಾಧ್ಯ, ದೇವೀರಮ್ಮ ಹಾಗೂ ಎಚ್. ಮಂಜುಳಾ ಆಕಾಂಕ್ಷಿಯಾಗಿದ್ದರು.ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟ ನಂತರ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಇತ್ತೀಚೆಗೆ ಎಲ್ಲಾ ಸದಸ್ಯರ ಸಭೆ ಕರೆದು ಅಭಿಪ್ರಾಯ ಪಡೆದಿದ್ದರು. ಅಂತಿಮವಾಗಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸದಸ್ಯರಾಗಿದ್ದ ಜೆ.ಆರ್. ಅಜಯ್ ಕುಮಾರ್ ಹೆಸರು ಸೂಚಿಸಿದ ಮೇಲೆ ಆಕಾoಕ್ಷಿಗಳು ಹಿಂದೆ ಸರಿದರು.