ಶೈಕ್ಷಣಿಕ ಸುಧಾರಣೆಗೆ ಅಜೀತ ಮನ್ನಿಕೇರಿ ಪಾತ್ರ ಅಪಾರ

| Published : Sep 08 2025, 01:01 AM IST

ಸಾರಾಂಶ

ಮೂಡಲಗಿ ವಲಯವು ಶೈಕ್ಷಣಿಕವಾಗಿ ಸುಧಾರಿಸುವಲ್ಲಿ ನಿರ್ಗಮಿತ ಬಿಇಒ ಅಜೀತ ಮನ್ನಿಕೇರಿ ಪಾತ್ರ ಗಣನೀಯ

ಕನ್ನಡಪ್ರಭ ವಾರ್ತೆ ಮೂಡಲಗಿ

ಸರ್ಕಾರಿ ಶಾಲೆಗಳೆಂದರೆ ಅಸೂಯೆ ಪಡುತ್ತಿರುವ ಇಂದಿನ ದಿನಗಳಲ್ಲಿ ಖಾಸಗಿ ಸಂಸ್ಥೆಗಳಿಗಿಂತ ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ವಲಯವು ಭಾಜನ ವಾಗಿರುವುದು ಖುಷಿ ತರುತ್ತಿದೆ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲೂಕಿನ ತಿಗಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಶಿಕ್ಷಕರ ದಿನಾಚರಣೆ ನಿಮಿತ್ತ ಶನಿವಾರ ನಡೆದ ಮೂಡಲಗಿ ತಾಲೂಕು ಮಟ್ಟದ ಗುರುಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎರಡು ಬಾರಿ ಕೇಂದ್ರ ಸರ್ಕಾರದ ಪ್ರಶಸ್ತಿ ಬಾಚಿಕೊಂಡಿರುವುದರ ಹಿಂದೆ ಮನ್ನಿಕೇರಿ ಶ್ರಮವಿದೆ. ನಮ್ಮ ವಲಯದಲ್ಲಿ 50 ಸಾವಿರಕ್ಕೂ ಹೆಚ್ಚಿನ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವುದು ರಾಜ್ಯದಲ್ಲಿಯೇ 3ನೇ ಸ್ಥಾನ ಅಲಂಕರಿಸಿದೆ. ಶಿಕ್ಷಕರ ಸಂಘಟಿತ ಕಲಿಕೆಯಿಂದ ಇವೆಲ್ಲವನ್ನೂ ಮಾಡಲು ಸಾಧ್ಯವಿದೆ ಎಂದರು.

ಮೂಡಲಗಿ ವಲಯವು ಶೈಕ್ಷಣಿಕವಾಗಿ ಸುಧಾರಿಸುವಲ್ಲಿ ನಿರ್ಗಮಿತ ಬಿಇಒ ಅಜೀತ ಮನ್ನಿಕೇರಿ ಪಾತ್ರ ಗಣನೀಯವಾಗಿದ್ದು, ಈಗಿರುವ ಗುಣಮಟ್ಟದ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗುವಂತೆ ನೂತನ ಬಿಇಒಗೆ ಸಲಹೆ ನೀಡಿದರು. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟ ದರ್ಜೆಯ ಶಿಕ್ಷಣ ನೀಡುತ್ತಿರುವ ವಲಯದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈ ಮೊದಲು ಬರಡು ಭೂಮಿಯಂತಾಗಿದ್ದ ಶಿಕ್ಷಣವನ್ನು ನೀರಾವರಿ ಪ್ರದೇಶವನ್ನಾಗಿ ಮಾಡಿ ಉತ್ತಮ ಫಸಲು ಬರುವಂತೆ ಮಾಡಿರುವ ಕೀರ್ತಿ ಮನ್ನಿಕೇರಿಗೆ ಸಲ್ಲುತ್ತದೆ. ವಲಯದ ಫಲಿತಾಂಶಗಳು ರಾಜ್ಯದಲ್ಲೆಡೆ ಗುರುತಿಸುವಂತಾಗಿದೆ ಎಂದರು.

ಎಂದು ತಿಳಿಸಿದರು.

ತಿಗಡಿ ಗ್ರಾಮಸ್ಥರ ಒಗ್ಗಟ್ಟಿನ ಶಕ್ತಿಯಿಂದಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿದೆ ಎಂದ ಅವರು, ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಿಕೊಡಲು ಕಾರಣೀಕರ್ತರಾದವರನ್ನು ಅಭಿನಂದಿಸಿದರು.

ಶಾಸಕನಾಗುವ ಪೂರ್ವದಲ್ಲಿ ಕೇವಲ 12 ಸರ್ಕಾರಿ ಪ್ರೌಢಶಾಲೆಗಳನ್ನು ಹೊಂದಿದ್ದ ವಲಯವು, ನಾನು ಈ ಭಾಗದ ಶಾಸಕನಾದ ನಂತರ ಹೊಸದಾಗಿ 28 ಸರ್ಕಾರಿ ಪ್ರೌಢಶಾಲೆಗಳನ್ನು ಮಂಜೂರು ಮಾಡಿಸಿದ್ದೇನೆ. ಇದರಿಂದ ಒಟ್ಟು 40 ಸರ್ಕಾರಿ ಪ್ರೌಢಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಅತೀ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ವಸತಿ ಶಾಲೆಗಳು ನಮ್ಮ ವಲಯದಲ್ಲಿವೆ. ಪ್ರತಿ ವರ್ಷವೂ ವಸತಿ ಶಾಲೆಗಳ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ದರ್ಜೆಯ ಫಲಿತಾಂಶ ನೀಡುವ ಮೂಲಕ ವಲಯಕ್ಕೆ ಕೀರ್ತಿ ತರುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ತಾಲೂಕಿನ ಹಳ್ಳೂರ, ತುಕ್ಕಾನಟ್ಟಿ ಮತ್ತು ಖಂಡ್ರಟ್ಟಿ ಗ್ರಾಮಗಳ ಸಾರ್ವಜನಿಕರ ಬೇಡಿಕೆಯಂತೆ ಪ್ರಸಕ್ತ ವರ್ಷದಿಂದ ಹೊಸದಾಗಿ ಸರ್ಕಾರಿ ಪ್ರೌಢ ಶಾಲೆಗಳನ್ನು ಆರಂಭಿಸಲಾಗಿದೆ. ಇದು ಷರತ್ತುಬದ್ಧವಾಗಿದ್ದು, ಇಲಾಖೆಯ ಎಲ್ಲ ಷರತ್ತುಗಳಿಗೆ ಒಪ್ಪಿಕೊಂಡ ಬಳಿಕವೇ ಈ ಮೂರು ಗ್ರಾಮಗಳಿಗೆ ಪ್ರೌಢಶಾಲೆಗಳು ಮಂಜೂರಾಗಿವೆ. ಮೂರು ವರ್ಷಗಳ ಶಿಕ್ಷಕರ ವೇತನವೂ ಸೇರಿದಂತೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತೇನೆಂದು ಶಾಲಾ ಶಿಕ್ಷಣ ಇಲಾಖೆಗೆ ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಕಿರುವುದಾಗಿ ಶಾಸಕರು ಹೇಳಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ತಿಗಡಿ, ಹಳ್ಳೂರ ಮತ್ತು ಖಂಡ್ರಟ್ಟಿ ಗ್ರಾಮಗಳ ನಾಗರಿಕರು ಸತ್ಕರಿಸಿದರು. ಸೇವೆಯಿಂದ ನಿವೃತ್ತರಾದ ಶಿಕ್ಷಕರು ಮತ್ತು ಸಾಧಕ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು. ವಿವಿಧ ಪ್ರತಿಷ್ಠಾನಗಳಿಂದ ಆದರ್ಶ ಶಿಕ್ಷಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಮೂಡಲಗಿ ಬಿಇಒ ಆಗಿ ಸೇವೆ ಸಲ್ಲಿಸಿ ಈಗ ಬಾಗಲಕೋಟೆ ಡಿಡಿಪಿಐ ಆಗಿ ಸೇವೆಗೆ ಪದೋನ್ನತಿ ಪಡೆದಿರುವ ಅಜೀತ ಮನ್ನಿಕೇರಿಗೆ ಶಾಸಕರು 2000 ಗ್ರಾಂ. (2 ಕಿಲೋ ) ತೂಕದ ಬೆಳ್ಳಿಯ ಆಕರ್ಷಕ ಗಣೇಶನ ವಿಗ್ರಹ ನೀಡಿ ಸನ್ಮಾನಿಸಿದರು. ಸುಣಧೋಳಿಯ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವೇದಿಕೆಯಲ್ಲಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಮೂಡಲಗಿ ತಹಸೀಲ್ದಾರ್‌ ಶ್ರೀಶೈಲ ಗುಡಮೆ, ಗೋಕಾಕ ತಹಸೀಲ್ದಾರ್‌ ಡಾ.ಮೋಹನ ಭಸ್ಮೆ, ಚಿಕ್ಕೋಡಿ ಡಿಡಿಪಿಐ ಸೀತಾರಾಮ ಆರ್.ಎಸ್, ಮೂಡಲಗಿ ತಾಪಂ ಇಒ ಎಫ್.ಜಿ.ಚಿನ್ನನ್ನವರ, ಆರ್.ಎಂ.ಮಠದ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಾ ಆನಿ, ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಎ.ಬಿ.ಮಲಬನ್ನವರ, ಸಿಡಿಪಿಒ ಯಲ್ಲಪ್ಪ ಗದಾಡಿ ಸೇರಿದಂತೆ ಇತರರು ಇದ್ದರು.

ಬಿಇಒ ಆಗಿದ್ದ ಅಜೀತ ಮನ್ನಿಕೇರಿ ಅವರು ಮೂಡಲಗಿ ವಲಯವನ್ನು ಎತ್ತರಕ್ಕೆ ಬೆಳೆಸುವಲ್ಲಿ ಮಹತ್ಕಾರ್ಯ ಮಾಡಿದರು. ಒಂದೆಡೆ ಮನ್ನಿಕೇರಿ ಅವರು ಪದೋನ್ನತಿ ಹೊಂದಿ ಹೋಗುತ್ತಿರುವುದು ಸಂತೋಷಕ್ಕೆ ಕಾರಣವಾದರೆ, ಇನ್ನೊಂದೆಡೆ ಮೂಡಲಗಿ ವಲಯ ಬಿಟ್ಟು ನಿರ್ಗಮಿಸುತ್ತಿರುವುದು ನೋವಿನ ಸಂಗತಿ. ಮನ್ನಿಕೇರಿ ಮಾರ್ಗದರ್ಶನದಲ್ಲಿ ನಿಯೋಜಿತ ನೂತನ ಬಿಇಒ ಪಿ.ಬಿ.ಹಿರೇಮಠ ಕಾರ್ಯ ನಿರ್ವಹಿಸಲಿ. ವಲಯದ ಕೀರ್ತೀಯೂ ಇನ್ನೂ ಹೆಚ್ಚಿಸಲಿ.

- ಬಾಲಚಂದ್ರ ಜಾರಕಿಹೊಳಿ, ಶಾಸಕರು ಮತ್ತು ಬೆಮುಲ್ ಅಧ್ಯಕ್ಷರು