ಪ್ರತಿಭೆಗಳ ಬೆಳವಣಿಗೆಗೆ ಕ್ರೀಡೆ, ಸಾಂಸ್ಕೃತಿಕ ಸಂಘಗಳು ಸಹಕಾರಿ: ಶ್ರೀಲತಾ

| Published : Sep 08 2025, 01:01 AM IST

ಪ್ರತಿಭೆಗಳ ಬೆಳವಣಿಗೆಗೆ ಕ್ರೀಡೆ, ಸಾಂಸ್ಕೃತಿಕ ಸಂಘಗಳು ಸಹಕಾರಿ: ಶ್ರೀಲತಾ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆ ಮತ್ತು ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳನ್ನು ರಚಿಸಲಾಗಿದ್ದು, ಸಂಘಟನೆಯು ಕಾರ್ಯೋನ್ಮುಖವಾಗುವುದರಿಂದ ವಿದ್ಯಾರ್ಥಿಗಳ ಪ್ರತಿಭೆಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲೆ ಶ್ರೀಲತಾ ಅಭಿಪ್ರಾಯ ವ್ಯಕ್ತಪಡಿಸಿದರು.ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಿಗೆ ಸ್ವಾಗತ, 2025-26 ನೇ ಸಾಲಿನ ವಿದ್ಯಾರ್ಥಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆ ಮತ್ತು ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿರುವ ಸುಪ್ತಪ್ರತಿಭೆಯನ್ನು ಹೊರತರಲು ಮತ್ತು ಅನಾವರಣಗೊಳಿಸಿ ಬೆಳೆಸುವ ನಿಟ್ಟಿನಲ್ಲಿ ಸೂಕ್ತ ವೇದಿಕೆಯನ್ನು ಅಂತಹ ಕಾರ್ಯಕ್ರಮಗಳು ಒದಗಿಸುತ್ತವೆ ಎಂದು ಅವರು ಹೇಳಿದರು.ಸಮಾರಂಭವನ್ನು ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಸೈಮನ್ ಡಿಕುನ್ಹ ಅವರು ಉದ್ಘಾಟಿಸಿ ಪ್ರಧಾನ ಭಾಷಣ ಮತ್ತು ಉದ್ಘಾಟನಾ ನುಡಿಗಳನ್ನಾಡಿದ ಅವರು ವಿದ್ಯಾರ್ಥಿಗಳು ಏಕಾಗ್ರಚಿತ್ತದಿಂದ ಅಧ್ಯಯನದಲ್ಲಿ ತೊಡಗಿಸಿಕೊಂಡು ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆಯುತ್ತಾ ಸಾಧಕರಾಗಿ ಹೊರಹೊಮ್ಮಬೇಕು ಎಂದು ತಿಳಿಹೇಳಿದರು. 2025-26ನೇ ಸಾಲಿನ ವಿದ್ಯಾರ್ಥಿಗಳಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳಿಗೆ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಸುನೀತಾ ಗಿರೀಶ್ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. 2024-25ನೇ ಸಾಲಿನಲ್ಲಿ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರವನ್ನು ಪ್ರಾಂಶುಪಾಲರು ನೆರವೇರಿಸಿದರು.ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿವಿಧ ವಿನೋದಭರಿತ ಚಟುವಟಿಕೆಗಳಲ್ಲಿ ಸ್ಪರ್ಧಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದ ಮೊದಲಿಗೆ ಗ್ರೀಷ್ಮಾ ಸ್ವಾಗತಿಸಿ, ನಿಮಿಷಾ ಪ್ರಾಸ್ತಾವಿಕ ನುಡಿಗಳಾನ್ನಾಡಿ, ಶ್ರೀಷಾ ಮತ್ತು ಶಾಕೀರ ನಿರೂಪಿಸಿದರು.