ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿಕಳೆದ ಎರಡೂವರೆ ದಶಕಗಳಿಂದ ಅನುದಾನಿತ ಶಾಲೆಗಳಿಗೆ ಶಿಕ್ಷಕರನ್ನು ಸರ್ಕಾರ ನೇಮಿಸದೆ ಇರುವುದರಿಂದ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಸರ್ಕಾರದ ಇಲಾಖೆಗಳ ನಿಯಮಾವಳಿಗಳು ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವಂತೆ ಮಾಡುತ್ತಿವೆ. ಈ ಬಗ್ಗೆ ಧ್ವನಿ ಎತ್ತಬೇಕೆಂದು ಕಟೀಲು ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ದ.ಕ.ಜಿ.ಪಂ. ಶಾಲಾ ಶಿಕ್ಷಣ ಇಲಾಖೆ, ಮಂಗಳೂರು ಉತ್ತರ ವಲಯ, ಶಿಕ್ಷಕರ ದಿನಾಚರಣೆ ಸಮಿತಿ ಮತ್ತು ಶಿಕ್ಷಕರ ಕಲ್ಯಾಣ ನಿಧಿಯ ಸಹಯೋಗದಲ್ಲಿ ಕಟೀಲು ಶ್ರೀ ದುರ್ಗಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.ಸರ್ಕಾರ ಶಿಕ್ಷಣದಲ್ಲಿ ಜಾರಿಗೊಳಿಸಲು ಹೊರಟಿರುವ ದ್ವಿಭಾಷಾ ನೀತಿಯನ್ನು ವಿರೋಧಿಸಬೇಕಾಗಿದೆ. ಇಲ್ಲದಿದ್ದರೆ ಸಂಸ್ಕೃತ, ತುಳು, ಹಿಂದಿ ಭಾಷೆಗಳನ್ನು ಕಲಿಯುವ ಅವಕಾಶದಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಾರೆಂದು ಹೇಳಿದರು.
ದಿಕ್ಸೂಚಿ ಭಾಷಣಗೈದ ನಿವೃತ್ತ ಉಪನ್ಯಾಸಕಿ, ಖ್ಯಾತ ಸಾಹಿತಿ ಭುವನೇಶ್ವರಿ ಹೆಗಡೆ, ಮನೆ ಮತ್ತು ಶಾಲೆ ಎರಡೂ ಪರಿಪೂರ್ಣ ವ್ಯಕ್ತಿತ್ವವನ್ನು ನಿರ್ಮಿಸುತ್ತದೆ. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರನ್ನು ನೋಡಿ ಮಕ್ಕಳು ನಡೆನುಡಿ ಕಲಿಯುತ್ತಾರೆ. ಹಿಂದೆ ಬದುಕು ಸಹಜವಾಗಿತ್ತು, ಶಾಲೆಯನ್ನು ಗುಡಿಸಿ, ಸೆಗಣಿ ಸಾರಿಸಿ ಸ್ವಚ್ಛ ಮಾಡಿ ಬದುಕಿನ ಪಾಠವನ್ನೂ, ಧೈರ್ಯ, ಸ್ಥೈರ‍್ಯವನ್ನೂ ಕಲಿಯುತ್ತಿದ್ದ ದಿನಗಳು ಈಗ ಬದಲಾಗಿವೆ. ಶಿಕ್ಷಕರು ನಿರಾತಂಕವಾಗಿ ಪಾಠ ಮಾಡುವ ಸ್ಥಿತಿಯಲ್ಲಿಲ್ಲ. ಟಾರ್ಗೆಟ್‌ಗಳು, ಮರಳಿ ಬಾ ಶಾಲೆಗೆ, ಹೇಗಾದರೂ ಮಾಡಿ ಬಾ ಶಾಲೆಗೆ ಎಲ್ಲ ಆರಂಭವಾಗಿ ಮಕ್ಕಳಿಗೆ ಕಥೆ ಹೇಳುವ ಸ್ಥಿತಿಯಲ್ಲಿ ಶಿಕ್ಷಕರೂ ಇಲ್ಲ. ಭಾವನೆಗಳೇ ಇಲ್ಲದ ಮಕ್ಕಳನ್ನು ಮೊಬೈಲು ಸೃಷ್ಟಿಸುತ್ತಿದೆ. ತಂತ್ರಜ್ಞಾನ ನಮ್ಮೆಲ್ಲರ ದಿಕ್ಕು ತಪ್ಪಿಸುತ್ತಿದೆ. ಮಾನಸಿಕವಾಗಿ ವೃದ್ಧಾಪ್ಯ ಕಾಣದ ಶಿಕ್ಷಕರು ಇವತ್ತಿನ ಪ್ರಾಣಪೀಡಕ ವ್ಯವಸ್ಥೆಯಿಂದ ಹೊರಬಂದು ಭಯಮುಕ್ತ ವಾತಾವರಣದಲ್ಲಿ ಪಾಠ ಮಾಡುವಂತಾಗಬೇಕು ಎಂದರು.ಎಸ್‌ಎಸ್‌ಎಲ್‌ಸಿ ಸಾಧಕರನ್ನು, 100 ಶೇಕಡಾ .ಫಲಿತಾಂಶ ಪಡೆದ ಶಾಲೆಗಳನ್ನು, ನಿವೃತ್ತ ಶಿಕ್ಷಕರನ್ನು ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಶಾಸಕ ಭರತ್ ಶೆಟ್ಟಿ ಸಂಮಾನಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹೋ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವೇದಾವತಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭರತ್ ಕೆ, ಡಯಟ್ ನೋಡಲ್ ಅಧಿಕಾರಿ ಶ್ರೀಮತಿ ವಿಜಯಲಕ್ಷ್ಮೀ, ಶಿಕ್ಷಣಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಅಜ್ಜಯ್ಯ ಎ.ಡಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ವಾಸುದೇವ ರಾವ್. ದೈಹಿಕ ಶಿಕ್ಷಕರ ಸಂಘದ ನಿತಿನ್ ಪುತ್ರನ್, ಚೆಲುವಮ್ಮ, ಚಿತ್ರಕಲಾ ಶಿಕ್ಷಕರ ಸಂಘದ ರಾಜೇಶ್ವರಿ, ಲಕ್ಷ್ಮೀಶ ಕೆ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಲಕ್ಷ್ಮೀಶ್, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಅಂಬರೀಷ, ಸರ್ಕಾರಿ ನೌಕರರ ಸಂಘದ ಶರ್ಲಿ ಸುಮಾಲಿನಿ, ನಾಗರಾಜ ಎಂ, ಶಿಕ್ಷಣಾಧಿಕಾರಿಗಳ ಸಂಘದ ಉಸ್ಮನ್, ಕಟೀಲು ಪ್ರೌಢಶಾಲೆ ರಾಜಶೇಖರ ಎನ್, ಪ.ಪೂ.ಕಾಲೇಜಿನ ಕುಸುಮಾವತಿ ಮತ್ತಿತರರಿದ್ದರು. ಬಲ್ಮಠ ಕಾಲೇಜಿನ ಕವಿತಾ, ಬಜಪೆ ಕಾಲೇಜಿನ ಅಶ್ವತ್ಥ್ ನಿಡ್ಡೋಡಿ ನಿರೂಪಿಸಿದರು.